ಬೆಂಗಳೂರು, ಸೆಪ್ಟೆಂಬರ್ 11: ಇನ್ನೇನು ಒಣಂ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ ಇದೆ. ಅದರಲ್ಲೂ ಓಣಂ ಅಂದಕ್ಷಣ ಕೊಬ್ಬರಿ ಎಣ್ಣೆ ತಯಾರಿಸಿ ಬಳಸುವ ರುಚಿಕಟ್ಟಾದ ಅಡುಗೆ, ಬಾಳೆ ಎಲೆ ತುಂಬಾ ತುಂಬಿರುವ ನಾನಾ ಬಗೆಯ ತಿನಿಸುಗಳು ಮನಃಪಟಲದಲ್ಲಿ ಮೂಡುತ್ತದೆ. ಹಪ್ಪಳವಿಲ್ಲದೇ ಈ ಓಣಂ ಭೋಜನ ಸಂಪೂರ್ಣವಾಗುವುದಿಲ್ಲ. ಹೀಗಾಗಿ ಓಣಂ ಹಬ್ಬ ಸಮೀಪಿಸುತ್ತಿರುವಂತೆ, ಸಾಂಪ್ರದಾಯಿಕ ಆಹಾರ ಪದ್ದತಿಯಲ್ಲಿ ಹಪ್ಪಳಗಳು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತವೆ.
ಸಾಮಾನ್ಯವಾಗಿ ಹಬ್ಬ ಹರಿದಿನಗಳು, ಮದುವೆ ಸೀಸನ್ ನಲ್ಲಿ ಮಾರುಕಟ್ಟೆಯಲ್ಲಿ ಹಪ್ಪಳಕ್ಕಾಗಿ ಬೇಡಿಕೆ ಅಧಿಕವಾಗುತ್ತದೆ. ಈ ವೇಳೆ ಮಾರುಕಟ್ಟೆಯಲ್ಲಿ ಪಾಪಡ್ ಗಳ ಕೊರೆತೆ ಕಂಡುಬರುತ್ತದೆ. ಈ ಬಿಕ್ಕಟ್ಟು ಕಂಡುಬಾರದಂತೆ ಈ ಬಾರಿ ಮಾರುಕಟ್ಟೆಯಲ್ಲಿ ವಿವಿಧ ಗಾತ್ರದ ಹಪ್ಪಳಗಳ ಸ್ಟಾಕ್ ಇರಿಸಲಾಗಿದೆ. ಕೇರಳದಲ್ಲಿ ಸಾಮಾನ್ಯವಾಗಿ ದಿನಕ್ಕೆ ಸುಮಾರು 10,000 ಕಿಲೋಗ್ರಾಂಗಳಷ್ಟು ಹಪ್ಪಳಗಳನ್ನು ಉತ್ಪಾದಿಸುತ್ತಿದ್ದು, ಓಣಂ ಋತುವಿನಲ್ಲಿಇದರ ಉತ್ಪಾದನೆಯು ಮೂರು ಪಟ್ಟು ಹೆಚ್ಚಾಗುತ್ತದೆ.

ಈ ವರ್ಷದ ಓಣಂ ಹಬ್ಬಕ್ಕಾಗಿ 3 ಕೋಟಿ ರೂ ಮೌಲ್ಯದ ಹಪ್ಪಳ ವಿತರಣೆ ಗುರಿಯಾಗಿದ್ದು, ಈ ಪ್ರಮಾಣದ ಹಪ್ಪಳ ಮಾರುಕಟ್ಟೆಗೆ ತಲುಪಲಿವೆ. ಓಣಂ ಮಾರುಕಟ್ಟೆಯಲ್ಲಿ, ಪಾಪಡ್ ಪ್ಯಾಕೆಟುಗಳು ಸಾಮಾನ್ಯವಾಗಿ 20 ರಿಂದ 50 ರೂ. ನಡುವೆ ಬೆಲೆ ಹೊಂದಿದ್ದು, 20 ರೂ. ಮೌಲ್ಯದ ಪ್ಯಾಕೆಟ್ ನಲ್ಲಿ ಸುಮಾರು 12 ಹಪ್ಪಳಗಳನ್ನು ಒಳಗೊಂಡಿರುತ್ತವೆ. ಆದರೆ ಹಿಂದೆ ಹೀಗಿರಲಿಲ್ಲ. ಕಚ್ಚಾವಸ್ತುಗಳ ದಿಢೀರ್ ಬೆಲೆ ಏರಿಕೆಯಿಂದ ಹಪ್ಪಳ ಉದ್ಯಮವೂ ತತ್ತರಿಸಿದ ಕಾರಣ ಈ ಬಿಕ್ಕಟ್ಟಿನಿಂದ ಹೊರ ಬರಲು ಹಪ್ಪಳ ಮಾರಾಟಗಾರರು ಹೊಸ 'ತಂತ್ರ'ದ ಮೊರೆ ಹೋಗಿದ್ದು ಹಪ್ಪಳದ ಬೆಲೆ ಏರಿಸದೆ ಅದರಲ್ಲಿರುವ ಹಪ್ಪಳದ ಪ್ರಮಾಣ ಕಡಿಮೆ ಮಾಡಿ ಮಾರಾಟ ಮಾಡುವುದು ಹೊಸ ತಂತ್ರಗಾರಿಕೆಯಾಗಿದೆ. 20 ರೂ. ಮುಖಬೆಲೆಯ ಒಂದು ಪ್ಯಾಕ್‌ನಲ್ಲಿ ಹಪ್ಪಳದ ಸಂಖ್ಯೆಯನ್ನು 14ರ ಬದಲು 10-12ಕ್ಕೆ ಇಳಿಸಿ ಮಾರಲಾಗುತ್ತಿದೆ. ಇದರೊಂದಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಪಕ್ಕದ ರಾಜ್ಯಗಳಿಂದಲೂ ವಿವಿಧ ರೀತಿಯ ಹಪ್ಪಳಗಳನ್ನು ಕೇರಳ ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ನಕಲಿಗಳ ಬಗ್ಗೆ ಎಚ್ಚರವಿರಲಿ.!
ಓಣಂ ಋತುವಿನಲ್ಲಿ ಸಾಮಾನ್ಯವಾಗಿ ಕಡಿಮೆ ಗುಣಮಟ್ಟದ ಹಪ್ಪಳಗಳು ಮಾರುಕಟ್ಟೆ ಪ್ರವೇಶಿಸುತ್ತದೆ. ಇದನ್ನು ತಡೆಗಟ್ಟಲು ಕೇರಳ ಕೇರಳ ಪಾಪಡ್ ತಯಾರಕರ ಸಂಘ ((KPMA) ಪ್ರಾಮಾಣಿಕತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ಗ್ರಾಹಕರ ಮನಗೆಲಲು ಸಂಘವು ಪಾಪಾಡ್ ಪ್ಯಾಕೆಟ್‌ಗಳ ಮೇಲೆ ಮುದ್ರೆಯನ್ನು ಪರಿಚಯಿಸಿದೆ.
ಕೆಪಿಎಂಎ ಮುದ್ರೆಯನ್ನು ಹೊಂದಿರುವ ಪಾಪಡ್‌ಗಳನ್ನು ಉದ್ದಿನಬೇಳೆ, ಉಪ್ಪು, ಪಾಪಡ್ ಸೋಡಾ ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ಹೆಚ್ಚುತ್ತಿರುವ ಉದ್ದಿನಬೇಳೆ ಬೆಲೆಯಿಂದಾಗಿ, ಕೆಲವು ತಯಾರಕರು ಮೈದಾ (ಸಂಸ್ಕರಿಸಿದ ಹಿಟ್ಟು) 50% ವರೆಗೆ ಬಳಸುತ್ತಿದ್ದಾರೆ. ಉನ್ನತ ಗುಣಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಇದನ್ನು ತಡೆಗಟ್ಟಲು ಉತ್ತಮ ಗುಣಮಟ್ಟದ ಮಾನದಂಡಗಳನ್ನು ಕಾಯ್ದಕೊಳ್ಳಲು KPMA ಕಾರ್ಯನಿರ್ವಹಿಸುತ್ತಿದೆ. ಈ ರೀತಿ ಕೃತಕವಾಗಿ ತಯಾರಿಸಿದ ಹಪ್ಪಳ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬರುತ್ತಿರುವುದು ಸರಿಯಾದ ಕಚ್ಚಾ ವಸ್ತು ಬಳಸಿ ಹಪ್ಪಳ ತಯಾರಿಸುವ ಉದ್ಯಮಿಗಳಿಗೆ ಹಿನ್ನಡೆಯಾಗಿದೆ. ಇದಕ್ಕಾಗಿ ಕೆಪ್ಮ ಮುದ್ರೆ ಪರಿಚಯಿಸಿದೆ.
ಪ್ರಸ್ತುತ, 300 ಉತ್ಪಾದಕರು KPMA ಮುದ್ರೆಯೊಂದಿಗೆ ಹಪ್ಪಳಗಳನ್ನು ಪೂರೈಸುತ್ತಾರೆ. ಇನ್ನೂ 400 ಉತ್ಪಾದಕರನ್ನು ಒಳಗೊಂಡಂತೆ ಈ ಕ್ರಮವನ್ನು ವಿಸ್ತರಿಸಲು ಪ್ರಯತ್ನಗಳು ನಡೆಯುತ್ತಿವೆ. ಗುಣಮಟ್ಟವನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು, KPMA ಡಿಸೆಂಬರ್‌ಗೆ ಒಳಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಇದು ಗ್ರಾಹಕರಿಗೆ ತಮ್ಮ ಹಪ್ಪಳಗಳ ಗುಣಮಟ್ಟ ಪರಿಶೀಲಿಸಲು ಸಹಾಯ ಮಾಡುತ್ತದೆ.


Click it and Unblock the Notifications