ಇಂದು, ಆಗಸ್ಟ್ 24 ರಂದು ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ಘೋಷಿಸಿದೆ. ಛತ್ತೀಸ್‌ಗಢ, ಬಿಹಾರ, ಒಡಿಶಾ ಮತ್ತು ಪೂರ್ವ ಮಧ್ಯಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದೆ. ದೆಹಲಿ-ಎನ್‌ಸಿಆರ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಡಿಲು, ಮಿಂಚು ಸಹಿತ ಬಲವಾದ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಮಳೆಯಿಂದಾಗಿ ಬೆಳೆ ಕೊಯ್ಲು, ಮಾರುಕಟ್ಟೆಗೆ ತರಕಾರಿ ಪೂರೈಕೆ, ಹೈವೇ ಸಂಚಾರ ಮತ್ತು ಆನ್‌ಲೈನ್ ಡೆಲಿವರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಮಳೆ ಹೆಚ್ಚಾದರೆ ತರಕಾರಿ ಬೆಲೆಗಳ ಮೇಲೆ ತಕ್ಷಣವೇ ಪರಿಣಾಮ ಬೀರುತ್ತದೆ. ಜಮೀನುಗಳಲ್ಲಿ ಕೊಯ್ಲು ಕಡಿಮೆಯಾಗಿ, ಮಾರುಕಟ್ಟೆಗೆ ಬರುವ ಆವಕ ದಿಢೀರ್ ಕುಸಿಯುವುದರಿಂದ ಕೆಲವೇ ದಿನಗಳಲ್ಲಿ ದರ ಏರಿಕೆಯಾಗುತ್ತದೆ. ಈಗಾಗಲೇ ಜೈಪುರ, ಪ್ರಯಾಗ್‌ರಾಜ್ ಮತ್ತು ಪುಣೆಯಲ್ಲಿ ರಸ್ತೆಗಳು ಜಲಾವೃತಗೊಂಡು ತರಕಾರಿ ಪೂರೈಕೆಯಲ್ಲಿ ತೊಂದರೆಯಾಗಿದೆ. ಪ್ರಮುಖವಾಗಿ ಟೊಮೆಟೊ, ಈರುಳ್ಳಿ ಮತ್ತು ಸೊಪ್ಪುಗಳ ಬೆಲೆಯಲ್ಲಿ ತೀವ್ರ ಏರಿಳಿತ ಕಂಡುಬರುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ದುಬಾರಿಯಾಗಬಹುದು.

ಆರೆಂಜ್ ಅಲರ್ಟ್ ಎಚ್ಚರಿಕೆ: ರೈಲು ಸಂಚಾರದಲ್ಲಿ ವ್ಯತ್ಯಯ, ಡೆಲಿವರಿ ವಿಳಂಬ!
ಆರೆಂಜ್ ಅಲರ್ಟ್ ಘೋಷಿಸಿರುವ ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಒಡಿಶಾದ ಈಸ್ಟ್ ಕೋಸ್ಟ್ ಮತ್ತು ಸೌತ್ ಈಸ್ಟರ್ನ್ ರೈಲ್ವೆ ಕಾರಿಡಾರ್‌ಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಳೆದ ವಾರ ಬರಿಪಾದ ಬಳಿ ರೈಲ್ವೆ ಹಳಿ ಹಾನಿಗೊಳಗಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇತ್ತ ನಗರ ಪ್ರದೇಶಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಇ-ಕಾಮರ್ಸ್ ಹಾಗೂ ಫುಡ್ ಡೆಲಿವರಿ ಸೇವೆಗಳು ವಿಳಂಬವಾಗುತ್ತಿವೆ. ಮಳೆ ಮುಂದುವರಿದ ಭಾಗಗಳಲ್ಲಿ ಬಸ್, ರೈಲುಗಳ ಮಾರ್ಗ ಬದಲಾವಣೆ, ವೇಗ ನಿಯಂತ್ರಣ ಹಾಗೂ ಆನ್‌ಲೈನ್ ಆರ್ಡರ್‌ಗಳ ಡೆಲಿವರಿ ತಡವಾಗುವ ಸಾಧ್ಯತೆಯಿದೆ.
ಇನ್ಶೂರೆನ್ಸ್ ಕ್ಲೈಮ್ ಮತ್ತು ವಿದ್ಯುತ್ ದರ: ಮಳೆಗಾಲದಲ್ಲಿ ಈ ಟಿಪ್ಸ್ ನೆನಪಿರಲಿ
ಮಳೆ ನೀರಿನಲ್ಲಿ ವಾಹನಗಳು ಮುಳುಗಿದ್ದರೆ ಅಥವಾ ಮನೆಗೆ ಹಾನಿಯಾಗಿದ್ದರೆ ತಕ್ಷಣವೇ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಅಗತ್ಯ. ನೀರು ಹೊಕ್ಕಿರುವ ಕಾರು ಅಥವಾ ಬೈಕ್ ಇಂಜಿನ್ ಅನ್ನು ಯಾವುದೇ ಕಾರಣಕ್ಕೂ ಸ್ಟಾರ್ಟ್ ಮಾಡಬೇಡಿ. ಹಾನಿಯಾದ ಭಾಗಗಳ ಫೋಟೋ ಮತ್ತು ವಿಡಿಯೋ ತೆಗೆದಿಟ್ಟುಕೊಳ್ಳಿ. ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಿ, ನೆಟ್‌ವರ್ಕ್ ಗ್ಯಾರೇಜ್‌ಗೆ ಟೋಯಿಂಗ್ ವ್ಯವಸ್ಥೆ ಮಾಡಿ. ಆರ್‌ಸಿ, ಡ್ರೈವಿಂಗ್ ಲೈಸೆನ್ಸ್, ಪಾಲಿಸಿ ಕಾಪಿ ಹಾಗೂ ಪಾವತಿ ರಸೀದಿಗಳನ್ನು ಕೈಯಲ್ಲಿಟ್ಟುಕೊಳ್ಳಿ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಲಭ ದಾಖಲಾತಿ ಮೂಲಕ ಶೀಘ್ರ ವಿಮಾ ಪರಿಹಾರ ನೀಡುವಂತೆ ನಿಯಂತ್ರಕರೂ ಸೂಚಿಸಿದ್ದಾರೆ.
ಇನ್ನೊಂದೆಡೆ, ಸತತ ಮಳೆಯಿಂದಾಗಿ ಕಲ್ಲಿದ್ದಲು ಪೂರೈಕೆ, ಜಲವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ದರಗಳ ಮೇಲೆಯೂ ಪರಿಣಾಮ ಬೀರಲಿದೆ. ಸೆಂಟ್ರಲ್ ಕೋಲ್‌ಫೀಲ್ಡ್ಸ್‌ನಲ್ಲಿ ಕಲ್ಲಿದ್ದಲು ಉತ್ಪಾದನೆ ಮಂದಗತಿಯಲ್ಲಿದ್ದು, ಇತ್ತೀಚೆಗೆ ಕರ್ನಾಟಕಕ್ಕೂ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೆ, ಆಗಸ್ಟ್ ತಿಂಗಳಲ್ಲಿ ಜಲವಿದ್ಯುತ್ ಉತ್ಪಾದನೆ ಹೆಚ್ಚುವುದರಿಂದ ವಿದ್ಯುತ್ ದರ ನಿಯಂತ್ರಣದಲ್ಲಿರಲಿದೆ. ಆದರೂ, ಸ್ಥಳೀಯ ಮಟ್ಟದ ಸಮಸ್ಯೆಗಳಿಂದ ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್ (IEX) ಮಾರುಕಟ್ಟೆಯಲ್ಲಿ ವಿದ್ಯುತ್ ಬೆಲೆ ದಿಢೀರ್ ಏರಿಕೆಯಾಗುವ ಸಾಧ್ಯತೆಯಿದೆ. ಗ್ರಿಡ್-ಇಂಡಿಯಾ ಹಾಗೂ IEX ಡ್ಯಾಶ್‌ಬೋರ್ಡ್‌ಗಳ ಮೂಲಕ ಪರಿಸ್ಥಿತಿಯನ್ನು ಗಮನಿಸಬಹುದಾಗಿದೆ.


Click it and Unblock the Notifications