ಬೆಂಗಳೂರು, ಆಗಸ್ಟ್ 2: ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ರೀತಿಯ ವಸ್ತುಗಳು ಮನೆಗೆ ಅಥವಾ ಕಚೇರಿಗಳಿಗೆ ಬರಬೇಕಾದರೆ ಅದನ್ನು ಆರ್ಡರ್ ಮಾಡುವುದು ಆನ್‌ಲೈನ್‌ನಲ್ಲಿ. ಆದರೆ, ಎಷ್ಟೋ ಬಾರಿ ಆರ್ಡರ್ ಮಾಡುವುದು ಒಂದು ವಸ್ತುವಾಗಿದ್ದರೆ ಮನೆಗೆ ಮತ್ತೊಂದು ವಸ್ತು ಬಂದಿರುತ್ತದೆ. ಅನೇಕ ಸಲ ಈ ರೀತಿ ಪಾರ್ಸೆಲ್ ಬರುವ ವಸ್ತುಗಳನ್ನು ನೋಡಿ ಹೌಹಾರಿದ್ದು ಕೂಡ ಉಂಟು. ಏಕೆಂದರೆ ಬೆಲೆ ಬಾಳುವ ವಸ್ತುಗಳನ್ನು ಖರೀದಿಗೆ ಆರ್ಡರ್ ಮಾಡಿದ್ದರೆ ಮರದ ವಸ್ತು ಅಥವಾ ಕಲ್ಲು ಇಟ್ಟು ಕಳುಹಿಸಿ ಮೋಸ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.
ಹೀಗಿರುವಾಗ, ಇದೀಗ ಅದೇ ರೀತಿಯ ಮತ್ತೊಂದು ಕಹಿ ಆನ್‌ಲೈನ್ ಖರೀದಿ ಅನುಭವವು ಮುಂಬೈನಲ್ಲಿ ಅಮೆಜಾನ್ ಮೂಲಕ ಖರೀದಿ ಮಾಡಲು ಹೊರಟಿದ್ದ ಗ್ರಾಹಕರಿಗೆ ಆಗಿದೆ. ಇಲ್ಲಿನ 42 ವರ್ಷದ ಮಹಿಮ್ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ 55 ಸಾವಿರ ರೂ. ಬೆಲೆಯ ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಅಮೆಜಾನ್‌ನಲ್ಲಿ ಡೆಲಿವರಿ ಆಗಿದ್ದು ಟೀ ಕಪ್‌ಗಳ ಸೆಟ್. ಇದನ್ನು ನೋಡಿದ ಆ ಗ್ರಾಹಕರು ಸಿಟ್ಟಾಗಿದ್ದಾರೆ. ಜತೆಗೆ, ತಮಗೆ ಮೋಸ ಮಾಡಿರುವುದಾಗಿ ಅಮೆಜಾನ್ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ. ಅಮರ್ ಚೌವಾಣ್ ಎಂಬ ಈ ಗ್ರಾಹಕರು ಟೆಕ್ನೊ ಫಾಂಟೋಮ್ ವಿ ಫೋಲ್ಡ್ 5ಜಿ ಫೋನ್ ಅನ್ನು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದರು.

ವಾಸ್ತವದಲ್ಲಿ ಆಗಿದ್ದು ಏನು?
ಅಮರ್ ಚೌವಾಣ್ ಅವರು ಬೃಹತ್‌ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ವಿಭಾಗದಲ್ಲಿ ಉಪ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಿಟಿಐ ವರದಿ ಪ್ರಕಾರ, ಚೌವಾಣ್ ಅವರು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 5 ಜಿ ಫೋನ್ ಅನ್ನು ಅಮೆಜಾನ್‌ನಲ್ಲಿ 54,999ರೂ.ಗೆ ಆರ್ಡರ್ ಮಾಡಿದ್ದರು. ಈ ಆರ್ಡರ್‌ನ್ನು ಚೌವಾಣ್ ಅವರು ಜುಲೈ 15ರಂದು ಪಡೆದುಕೊಂಡಿದ್ದರು. ಆದರೆ, ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಚೌವಾಣ್ ಅವರು ನಾನು ಆನ್‌ಲೈನ್ ಪೋರ್ಟಲ್‌ನವರಿಗೆ ಕರೆ ಮಾಡಿ ಈ ಬಗ್ಗೆ ದೂರು ನೀಡಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಪೆನಿ ಸಿಬ್ಬಂದಿಯು ಜು.20ರೊಳಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ನಾನು ಅವರಿಗೆ ಮತ್ತೆ ಕರೆ ಮಾಡಿದರೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಷ್ಟೇಅಲ್ಲ, ತಾವು ಮಾಡಿರುವ ತನಿಖಾ ವರದಿಯನ್ನು ನೀಡುವುದಕ್ಕೂ ನಿರಾಕರಿಸಿದ್ದರು. ಈ ಹಿನ್ನಲೆಯಲ್ಲಿ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆʼ ಎಂದಿದ್ದಾರೆ.
ಚೌವಾನ್ ಅವರ ಪ್ರಕಾರ, ತಮಗೆ ಆಗಿರುವ ಈ ಮಹಾ ಮೋಸದ ಬಗ್ಗೆ ಸರಿಯಾಗಿ ಸ್ಪಂದಿಸುವುದಕ್ಕೆ ಅಮೆಜಾನ್ ಸಿಬ್ಬಂದಿ ಸಿದ್ಧರಿಲ್ಲ. ಅಲ್ಲಿನ ಸಿಬ್ಬಂದಿಯು ಗ್ರಾಹಕರಿಗೆ ಉಂಟಾಗಿರುವ ಈ ರೀತಿಯ ಮೋಸವನ್ನು ಸರಿಪಡಿಸುವುದಕ್ಕೂ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಅಷ್ಟೃಅಲ್ಲ ತನಿಖೆಯನ್ನು ಕೂಡ ಸರಿಯಾಗಿ ಮಾಡುತ್ತಿಲ್ಲ ಎನ್ನುತ್ತಾರೆ ಚೌವಾಣ್. ಇದೀಗ ಚೌವಾಣ್ ಅವರು ಮನೆಗೆ ಪಾರ್ಸೆಲ್ ನೀಡುವುದಕ್ಕೆ ಬಂದಿದ್ದ ಡೆಲಿವರಿ ಹುಡುಗನ ಸಿಸಿಟಿವಿ ಫೂಟೇಜ್ ಅನ್ನು ಪೊಲೀಸರಿಗೆ ನೀಡಿದ್ದಾರೆ.
ಆದರೆ, ಅಮೆಜಾನ್‌ನಂಥ ಆನ್‌ಲೈನ್ ಖರೀದಿಯಲ್ಲಿ ಈ ರೀತಿ ಚೌವಾಣ್ ಅವರು ಮಾತ್ರ ಮೋಸ ಹೋಗಿಲ್ಲ. ಈ ಮೊದಲು ಕೂಡ ಅವರಂತೆ ಈ ರೀತಿ ಹಲವು ಗ್ರಾಹಕರು ಮೋಸ ಹೋಗಿದ್ದಾರೆ.
ಕಳೆದ ತಿಂಗಳು ಕೂಡ ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಮಹಿಳೆಯೊಬ್ಬರು ಮೈಕ್ರೋಸೋಫ್ಟ್ ಎಕ್ಸ್‌ಬಾಕ್ಸ್ ಕಂಟ್ರೋಲರ್ ಅನ್ನು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಯಾರು ಕೂಡ ಊಹಿಸುವುದಕ್ಕೆ ಸಾಧ್ಯವಿಲ್ಲದ ರೀತಿಯ ಪಾರ್ಸೆಲ್ ವಸ್ತು ಬಂದಿತ್ತು. ಇಲೆಕ್ಟ್ರಾನಿಕ್ ಉಪಕರಣದ ಬದಲು ಅಮೆಜಾನ್‌ನಿಂದ ಬಂದ ಬಾಕ್ಸ್‌ನಲ್ಲಿ ಹಾವು ಇತ್ತು. ತಾನ್ವಿ ಎಂಬ ಮಹಿಳೆ ತಮ್ಮ ಪಾರ್ಸೆಲ್‌ನಲ್ಲಿ ಬಂದಿರುವ ಹಾವು ನೋಡಿ ಶಾಕ್ ಆಗಿದ್ದಾರೆ.
ತಾನ್ವಿ ಅವರು ತಾನು ಆರ್ಡರ್ ಮಾಡಿದ್ದ ವಸ್ತು ಜತೆಗೆ ಬಂದಿರುವ ಹಾವಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿಯೂ ಪೋಸ್ಟ್ ಮಾಡಿದ್ದರು. ಇದು ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಅಷ್ಟೇಅಲ್ಲ ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿ ಅಮೆಜಾನ್‌ನ ಕಸ್ಟಮರ್ ಸಮೋರ್ಟ್ ತಂಡದವರು ತಮ್ಮ ಪತಿ ಕರೆ ಮಾಡಿದಾಗ ಮಧ್ಯರಾತ್ರಿ ಎರಡು ಗಂಟೆ ಹೋಲ್ಡ್‌ನಲ್ಲಿ ಹಾಕಿ ಕಿರಿಕಿರಿ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ರೀತಿ ಇತ್ತೀಚಿನ ದಿನಗಳಲ್ಲಿ ಅಮೆಜಾನ್‌ನಿಂದ ಈ ರೀತಿ ಗ್ರಾಹಕರು ಆರ್ಡರ್ ಮಾಡುವುದು ವಸ್ತುವಾಗಿದ್ದರೆ; ಮನೆಗೆ ಬರುವುದು ಇನ್ನೊಂದು ವಸ್ತುವಾಗಿರುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಿರುವಾಗ, ಗ್ರಾಹಕರು ಬೆಲೆಬಾಳುವ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವಾಗ ಮತ್ತಷ್ಟು ಜಾಗರೂಕತೆ ವಹಿಸುವುದು ಉತ್ತಮ.


Click it and Unblock the Notifications