ಇತ್ತೀಚೆಗೆ ಜಮ್ಮು & ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪಾಕ್ ಉಗ್ರರ ಅಟ್ಟಹಾಸ, ಇದೀಗ ಅವರಿಗೇ ಸಂಕಷ್ಟ ತಂದಿಟ್ಟಿದೆ. ಏಕೆಂದರೆ ಆ ಒಂದೇ ಒಂದು ದಾಳಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು, ಇದೀಗ ಭಾರತ ಸರ್ಕಾರ ತೀವ್ರವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದ, ಪಾಕಿಸ್ತಾನದಲ್ಲಿ ಹೇಳತೀರದ ಸಮಸ್ಯೆಗೆ ಗುರಿಯಾಗಿದೆ.

ಹೌದು, ಈಗಾಗಲೇ ಭಾರತ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ ಪಾಕಿಸ್ತಾನಕ್ಕೆ ನೀರು ಹಂಚಿಕೆ ನಿಲ್ಲಿಸಿರುವುದು. ಗಡಿಗಳನ್ನು ಮುಚ್ಚುವುದು ಹಾಗೂ ಈ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಹಾಕುವುದು. ಈ ರೀತಿ ನಿರ್ಧಾರವನ್ನು ಭಾರತ ಸರ್ಕಾರ ತೆಗೆದುಕೊಂಡಿದೆ. ಇದರಿಂದ ಈಗಾಗಲೇ ಸಂಕಷ್ಟದಲ್ಲಿ ಒದ್ದಾಡುತ್ತಿದ್ದ ಪಾಕಿಸ್ತಾನ, ಮತ್ತೊಂದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಭಾರತ ಈಗ ಯುದ್ಧದ ಭೀತಿ ಹೆಚ್ಚಿಸಿದೆ. ಯುದ್ಧ ಸಂಭವಿಸಿದರೆ, ಪಾಕಿಸ್ತಾನದ ಆರ್ಥಿಕ ಸ್ಥಿತಿ ಅದೋಗತಿಯಾಗಲಿದೆ. ಪರಿಸ್ಥಿತಿ ಇನ್ನಷ್ಟು ಬಿಕ್ಕಟ್ಟಿಗೆ ಸಿಲುಕಲಿದೆ ಮತ್ತು ದೇಶದ ಸಾಮಾನ್ಯ ಜನರು ಬೀದಿಗೆ ಬೀಳುವಂತಾಗುವುದು ಸ್ಪಷ್ಟವಾಗಿದೆ.
ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ:
ಪಾಕಿಸ್ತಾನದಲ್ಲೀಗಾಗ್ಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಆಕಾಶದಲ್ಲಿ ಹಾರಾಡ್ತಿವೆ. ಹಾಲು, ಅಕ್ಕಿ, ಅಡುಗೆ ಎಣ್ಣೆ ಮುಂತಾದ ದಿನಬಳಕೆಯ ವಸ್ತುಗಳನ್ನು ಕೊಳ್ಳೋದಕ್ಕೂ ಸುಸ್ತಾಗುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಿಟ್ಟು, ಟೊಮೆಟೊ, ಈರುಳ್ಳಿ, ಆಲೂಗಡ್ಡೆ ಹೀಗೆ ಎಲ್ಲವೂ ಸಾಮಾನ್ಯ ಜನರಿಗೆ ಅಫೋರ್ಡ್ ಆಗದ ಮಟ್ಟಕ್ಕೆ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ, ದಿನಸಿ ಸಾಮಾನುಗಳ ಖರೀದಿಯೂ ಜನರಿಗೆ ಹೊರೆ ಆಗಿದೆ.
ಹಾವ್ಯಾವ ವಸ್ತುಗಳ ಬೆಲೆ ಎಷ್ಟೆಷ್ಟು?
ಪ್ರಮುಖ ದಿನಬಳಕೆಯ ವಸ್ತುಗಳ ಬೆಲೆಗಳನ್ನು ಗಮನಿಸಿದರೆ ಶಾಕ್ ಆಗುತ್ತದೆ. ಏಕೆಂದರೆ ಈ ಮೊತ್ತವು ನಿಜ ಹೇಳಬೇಕೆಂದರೆ ಬದುಕನ್ನೇ ಸುಸ್ತಾಗಿಸುತ್ತದೆ.
5 ಕೆಜಿ ಹಿಟ್ಟಿನ ಪ್ಯಾಕೆಟ್- ₹600 ರಿಂದ ₹610
1 ಲೀಟರ್ ಅಡುಗೆ ಎಣ್ಣೆ - ₹500
ಮೊಟ್ಟೆ- ₹25 ರಿಂದ ₹27
1 ಕೆಜಿ ಸಕ್ಕರೆ - ₹180
1 ಲೀಟರ್ ಹಾಲು- ₹150
1 ಕೆ.ಜಿ ಸೇಬು ಹಣ್ಣು - ₹450
1 ಕೆಜಿ ಟೊಮ್ಯಾಟೋ- ₹100
ಇಂತಹ ದುಬಾರಿ ಬೆಲೆಗಳಿಂದ ಸಾಮಾನ್ಯ ಪಾಕಿಸ್ತಾನಿಯ ದಿನಚರಿ ನಡೆಸುವುದು ಸವಾಲಾಗುತ್ತಿದೆ.
ನೆಲಕಚ್ಚಿದ ಪಾಕ್ ಕರೆನ್ಸಿ ಮೌಲ್ಯ:
ಇದಿಷ್ಟೇ ಅಲ್ಲ..ಪಾಕಿಸ್ತಾನದ ಕರೆನ್ಸಿ ಮೌಲ್ಯ ಕೂಡ ತೀವ್ರ ಕುಸಿತವನ್ನು ಅನುಭವಿಸಿದೆ. ಈಗ ಈಗ 1 ಪಾಕಿಸ್ತಾನ ರೂಪಾಯಿ (PKR) ಮೌಲ್ಯವು ಕೇವಲ 0.30 ಭಾರತೀಯ ರೂಪಾಯಿಯಷ್ಟಿದೆ. ಮತ್ತು 1 ಭಾರತೀಯ ರೂಪಾಯಿ (INR) ಮೊತ್ತ 3.33 ಪಾಕಿಸ್ತಾನ ರೂಪಾಯಿಗೆ ಸಮವಾಗಿದೆ. ಕರೆನ್ಸಿಯ ಈ ಬಲಹೀನತೆಯಿಂದಾಗಿ ಆಮದು ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಿದೆ.
ಪಾಕಿಸ್ತಾನ ಈಗ ಭಾರೀ ಹೊರಗಿನ ಸಾಲದ ಒತ್ತಡದಲ್ಲಿಯೂ ಇದೆ. ದೇಶದ ಒಟ್ಟು ಬಾಹ್ಯ ಸಾಲ ಮೊತ್ತ $125 ಶತಕೋಟಿಗೂ ಮೀರಿದೆ. ಅಲ್ಲದೆ, ದೇಶದ ಶೇಕಡಾ 39.4 ಜನರು ಬಡತನ ರೇಖೆಯ ಕೆಳಗಿದ್ದಾರೆ. ವಿದೇಶಿ ವಿನಿಮಯದ ಕೊರತೆಯಿಂದ ಆಮದು ಮಾಡುವ ಸಾಮಗ್ರಿಗಳ ಲಭ್ಯತೆಯೂ ತೀವ್ರವಾಗಿ ಹದಗೆಟ್ಟಿದೆ, ಇದರಿಂದ ದೇಶೀಯ ಉತ್ಪಾದನೆಯ ಮೇಲೂ ಪ್ರಭಾವ ಬೀರಿದೆ.
ಹಣದುಬ್ಬರವೂ ಮಿತಿ ಮೀರುತ್ತಿದೆ. 2023ರಲ್ಲಿ ಪಾಕಿಸ್ತಾನದಲ್ಲಿ ಹಣದುಬ್ಬರ ಶೇಕಡಾ 35 ರಿಂದ 40ರ ಮಟ್ಟಕ್ಕೆ ಏರಿತ್ತು. 2024 ಮತ್ತು 2025ರಲ್ಲಿ ಸ್ವಲ್ಪ ಇಳಿಕೆ ಕಂಡರೂ, ಇನ್ನೂ ಶೇಕಡಾ 20 ರಿಂದ 25ರಷ್ಟು ಉನ್ನತ ಮಟ್ಟದಲ್ಲಿಯೇ ಇದೆ ಎಂದು ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ವರದಿಗಳು ಹೇಳಿವೆ. ಆಹಾರ, ಇಂಧನ ಮತ್ತು ಔಷಧಿಗಳ ಬೆಲೆ ಗಗನಕ್ಕೇರಿದ ಪರಿಣಾಮ, ಸಾಮಾನ್ಯ ಜನರ ಜೀವನ ದುಗುಡದಿಂದ ತುಂಬಿದೆ.
ಪಾಕಿಸ್ತಾನದ ಬಡತನದ ಸ್ಥಿತಿಯು ದಿನದಿಂದ ದಿನಕ್ಕೆ ದುರ್ವಸ್ಥೆ ಹೊಂದುತ್ತಿದೆ. ಕೃಷಿ ಕ್ಷೇತ್ರವು ಕಳೆದ ಎರಡು ವರ್ಷಗಳಿಂದ ನಿರಂತರ ನಷ್ಟ ಅನುಭವಿಸುತ್ತಿದೆ. ಕೈಗಾರಿಕಾ ಉತ್ಪಾದನೆ ಕುಸಿತವಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಜಾಸ್ತಿಯಾದ ಕಾರಣ ಮಧ್ಯಮ ವರ್ಗದ ಜನರು ಸಹ ಬಡತನಕ್ಕೆ ಜಾರಿದ ಸ್ಥಿತಿಯಲ್ಲಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿಯೂ ಬೃಹತ್ ಸಮಸ್ಯೆಗಳು ಕಂಡು ಬರುತ್ತಿವೆ. ಜೀವ ಉಳಿಸುವ ಔಷಧಿಗಳ ಕೊರತೆಯಿಂದ ಜನರ ಜೀವ ಬಲಿಯಾಗುವ ಸ್ಥಿತಿಯವರೆಗೆ ಪರಿಸ್ಥಿತಿ ತಲುಪಿದೆ.
ಪಾಕಿಸ್ತಾನ ಈಗ ಐಎಂಎಫ್‌ನಿಂದ ಸಾಲ ಪಡೆಯಲು ಮುಂದಾಗಿದೆ. ಆದರೆ, ಈ ಸಾಲಕ್ಕಾಗಿ ಐಎಂಎಫ್ ವಿಧಿಸಿರುವ ಕಠಿಣ ಷರತ್ತುಗಳು ಪಾಕಿಸ್ತಾನದ ಸಾರ್ವಜನಿಕರ ಮೇಲೆ ಭಾರೀ ತೆರಿಗೆ ಒತ್ತಡವಾಗಿ ಬಿದ್ದಿದೆ. ರಾಜಕೀಯ ಸ್ಥಿರತೆ, ರಫ್ತು ವೃದ್ಧಿ ಮತ್ತು ಆಡಳಿತ ಸುಧಾರಣೆಗಳನ್ನು ತರಲು ವಿಫಲವಾದರೆ, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರಿಯುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂದೆ, ಲಕ್ಷಾಂತರ ಜನರ ಜೀವನ ಸಂಪೂರ್ಣವಾಗಿ ಧ್ವಂಸವಾಗುವ ಭೀತಿಯೂ ಹೆಚ್ಚಿದೆ. ಇದರಿಂದಾಗಿ, ಪಾಕಿಸ್ತಾನದಲ್ಲಿ ಸಾಮಾಜಿಕ ಅಶಾಂತಿಯ ಸ್ಫೋಟವೂ ಸಂಭವಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ.


Click it and Unblock the Notifications