ತೀವ್ರ ಆರ್ಥಿಕ ಮುಗ್ಗಟ್ಟು, ರಾಜಕೀಯ ಅರಾಜಕತೆಯಿಂದ ಕಂಗೆಟ್ಟು ಹೋಗಿರುವ ಪಾಕಿಸ್ತಾನದಲ್ಲಿ ತೈಲಬೆಲೆಯನ್ನು ಉಸ್ತುವಾರಿ ಸರ್ಕಾರ ಮತ್ತೆ ಹೆಚ್ಚಿಸಿದೆ. ಬೆಲೆ ಏರಿಕೆಯಿಂದ ರೋಸಿ ಹೋಗಿರುವ ಪಾಕ್ ಜನತೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಇಂಧನ ಬೆಲೆ ಪಾಕ್ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಏರಿಕೆಯಾಗಿದೆ. ತೈಲ ಬೆಲೆಯನ್ನು ಏರಿಸದೇ ನಮಗೆ ಬೇರೆ ದಾರಿಯಿಲ್ಲ ಎಂದು ಆರ್ಥಿಕ ಸಚಿವಾಲಯ ಅಸಾಯಕತೆಯ ಹೇಳಿಕೆ ನೀಡಿದ ಬೆನ್ನಲ್ಲೇ ನಿಯೋಜಿತ ಪ್ರಧಾನಿ ಅಧಿಕೃತವಾಗಿ ಹೊಸ ದರವನ್ನು ಪ್ರಕಟಿಸಿದ್ದಾರೆ.

ಉಸ್ತುವಾರಿ ಸರ್ಕಾರದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಕರ್ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಪ್ರತೀ ಲೀಟರ್ ಗೆ ಪೆಟ್ರೋಲ್ ದರ 26.02 ರೂಪಾಯಿ ಮತ್ತು ಡೀಸೆಲ್ ಬೆಲೆ 17.34 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಅಲ್ಲಿಗೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಪ್ರತೀ ಲೀಟರ್ ಬೆಲೆ 331.38 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್ ಒಂದಕ್ಕೆ 239.18 ರೂಪಾಯಿ ಆಗಿದೆ. ಈ ಪರಿಸ್ಕೃತ ದರ ಕಳೆದ ಶುಕ್ರವಾರ (ಸೆ 15) ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನದ ಹಣದುಬ್ಬರ ತೀವ್ರವಾಗಿ ಹೊಡೆತವನ್ನು ಎದುರಿಸಿತ್ತು. ಹಾಗಾಗಿ, ಇದುವರೆಗೆ ಶೇ. 27ರಷ್ಟು ಇಂಧನದ ಬೆಲೆಯಲ್ಲಿ ಏರಿಕೆಯನ್ನು ಕಂಡಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರಿಗೆ ಭಾರೀ ಆರ್ಥಿಕ ಹೊಡೆತ ನೀಡಿದಂತಾಗಿದೆ ಎಂದು ವ್ಯಾಖ್ಯನಿಸಲಾಗುತ್ತಿದೆ.
ಪಾಕಿಸ್ತಾನದ ಪತ್ರಿಕೆ 'ಡಾನ್' ವರದಿ ಮಾಡಿರುವ ಪ್ರಕಾರ, ಸೆಪ್ಟಂಬರ್ ಒಂದರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹದಿನಾಲ್ಕು ರೂಪಾಯಿ ಜಾಸ್ತಿ ಆಗಿತ್ತು. ಹದಿನೈದು ದಿನದ ಕೆಳಗೆ ಪೆಟ್ರೋಲ್ ಬೆಲೆಯಲ್ಲಿ 32.41 ಮತ್ತು ಡೀಸೆಲ್ ಬೆಲೆಯಲ್ಲಿ 38.49 ರೂಪಾಯಿ ಏರಿಕೆಯಾಗಿದ್ದವು.


Click it and Unblock the Notifications