ಬೆಂಗಳೂರು, ನವೆಂಬರ್ 02: ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದಲ್ಲಿ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಹಬ್ಬದ ಹಿನ್ನಲೆಯಲ್ಲಿ ಜನರು ಮುಗಿಬಿದ್ದು, ಕಾರುಗಳ ಖರೀದಿಗೆ ಬುಕ್ಕಿಂಗ್ ಮಾಡಲಿದ್ದಾರೆ ಎಂಬ ಕಂಪನಿಗಳು ಮತ್ತು ಬ್ಯಾಂಕ್‌ಗಳ ಲೆಕ್ಕಾಚಾರಗಳು ತಲೆಕೆಳಗಾಗಿವೆ. 7.90 ಲಕ್ಷ ವಾಹನಗಳು ಮಾರಾಟಕ್ಕೆ ತಯಾರಾಗಿವೆ. ಆದರೆ ಗ್ರಾಹಕರಿಂದ ಬುಕ್ಕಿಂಗ್ ಆಗಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ಅಕ್ಟೋಬರ್ ಅಂತ್ಯದ ದೀಪಾವಳಿ ಮತ್ತು ನವೆಂಬರ್‌ನಲ್ಲಿನ ಮದುವೆ ಸೀಸನ್‌ಗಳಿಂದ ಕಾರುಗಳಿಗೆ ಭಾರೀ ಬೇಡಿಕೆ ಬರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಾರುತಿ ಸುಝುಕಿ, ಹುಂಡೈ ಸೇರಿದಂತೆ ಪ್ರಮುಖ ಕಂಪನಿಗಳ ಕಾರುಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಹಬ್ಬದ ಸಂದರ್ಭದಲ್ಲಿ ಆದ ಬದಲಾವಣೆಗೆ ಕಾರಣ ಏನು? ಎಂದು ಕಂಪನಿಗಳು ತಲೆಕೆಡಿಸಿಕೊಂಡಿವೆ.

ಟಾಟಾ ಮೋಟಾರ್ಸ್ ಕಾರುಗಳ ಖರೀದಿಯಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಒಪ್ಪಿಕೊಂಡಿದೆ. ಅಂಕಿ ಅಂಶಗಳ ಪ್ರಕಾರ ಈ ವರ್ಷದ ಅಕ್ಟೋಬರ್ ಅಂತ್ಯಕ್ಕೆ ದೇಶಿಯ ಮತ್ತು ಅಂತರಾಷ್ಟ್ರೀಯ ಸೇರಿ 82,682 ಯುನಿಟ್ ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳ ಅವಧಿಯಲ್ಲಿ ಮೋಟಾರ್ಸ್ 82,954 ಮಾರುಗಳನ್ನು ಮಾರಾಟ ಮಾಡಿತ್ತು.
ಆದರೆ ಹುಂಡೈ ಕಂಪನಿ ಪ್ರಕಾರ ಕಾರುಗಳ ಮಾರಾಟ ಕೊಂಚ ಏರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ 70,078 ಯೂನಿಟ್ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 68,728 ಯೂನಿಟ್ ಮಾರಾಟವಾಗಿತ್ತು. ದೇಶಿಯ ಮಾರಾಟ 2023ರ ಅಕ್ಟೋಬರ್‌ನಲ್ಲಿ 55,128 ಇತ್ತು. ಈ ವರ್ಷ 55,568ಕ್ಕೆ ಏರಿಕೆಯಾಗಿದೆ. ರಫ್ತಿನಲ್ಲಿ ಶೇ 6.7ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ.
ವಾಹನ ವಿತರಕ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಮಾಹಿತಿ ಪ್ರಕಾರ ಕಡಿಮೆ ಮಾರಾಟ ದರ ದಾಖಲಾಗಿದ್ದಾಗಲೂ ಕಂಪನಿಗಳು ಅತಿ ಹೆಚ್ಚು ವಾಹನ ಉತ್ಪಾದನೆ ಮಾಡಿದೆ. ಆದ್ದರಿಂದ ಕಾರುಗಳ ಮಾರಾಟ ಒಟ್ಟಾರೆಯಾಗಿ 18.81ರಷ್ಟು ಕುಸಿತವನ್ನು ಕಂಡಿದೆ. ಕೋವಿಡ್ ಪರಿಸ್ಥಿತಿಯ ನಂತರ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ಈಗ 10-25 ಲಕ್ಷ ರೂ. ತನಕದ ಕಾರುಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ.
ಈ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆಯ ಕಾರಣ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿತ್ತು. ಅಲ್ಲದೇ ಹವಾಮಾನ ವೈಫರಿತ್ಯದ ಕಾರಣ ಜನರು ಕಾರುಗಳನ್ನು ಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಎಲೆಕ್ಟ್ರಿಕಲ್/ ಡೀಸೆಲ್ & ಪೆಟ್ರೋಲ್ ಕಾರುಗಳ ಗೊಂದಲದ ಕಾರಣ ಜನರು ಯಾವುದನ್ನೂ ಖರೀದಿ ಮಾಡಬೇಕು ಎಂದು ಗೊಂದಲದಲ್ಲಿದ್ದು ಖರೀದಿಯನ್ನು ಮುಂದೂಡಿಕೆ ಮಾಡಿದ್ದಾರೆ.
ಹೆಚ್‌ಎಂಐಎಲ್‌ನ ಮುಖ್ಯ ಆಡಳಿತ ವ್ಯವಸ್ಥಾಪಕ ತರುಣ್ ಗಾರ್ಗ್ ಮಾತನಾಡಿ, "ಎಸ್‌ಯುವಿ ಮಾದರಿಯ ಕಾರುಗಳಿಗೆ ಭಾರೀ ಬೇಡಿಕೆ ಇದೆ. 37,902 ಎಸ್‌ಯುವಿ, ದೇಶಿಯವಾಗಿ 17,497 ಹುಡೈ ಕೆರ್ಟಾ ಮಾದರಿ ಕಾರುಗಳನ್ನು ಮಾರಾಟ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಒಟ್ಟಾರೆ ಪ್ರಯಾಣಿಕ ವಾಹನಗಳ ಖರೀದಿ ಎಲೆಕ್ಟ್ರಿಕ್ ವಾಹನ ಸೇರಿದಂತೆ 48,637 ರಿಂದ 48,423 ಯೂನಿಟ್‌ಗೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ವಾಣಿಜ್ಯ ವಾಹನಗಳ ಖರೀದಿ 2023ರ ಅಕ್ಟೋಬರ್‌ನಲ್ಲಿ 34,317 ಇತ್ತು. ಈ ವರ್ಷ 34,259 ಯೂನಿಟ್ ಆಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.
ಎಂಜಿ ಮೋಟಾರ್ಸ್ ಈ ವರ್ಷ ಶೇ 31ರಷ್ಟು ಕಾರುಗಳ ಮಾರಾಟ ಏರಿಕೆಯಾಗಿದೆ ಎಂದು ಶುಕ್ರವಾರ ಹೇಳಿತ್ತು. ಅಕ್ಟೋಬರ್‌ನಲ್ಲಿ 7045 ಯೂನಿಟ್ ಕಾರುಗಳನ್ನು ಮಾರಾಟವಾಗಿವೆ ಎಂದು ತಿಳಿಸಿತ್ತು. ಹೊಸದಾಗಿ ಮಾರುಕಟ್ಟೆಗೆ ಬಂದ ವಿಂಡ್ಸರ್ ಒಂದೇ ತಿಂಗಳಿನಲ್ಲಿ 3,116 ಯೂನಿಟ್ ಮಾರಾಟವಾಗಿದೆ ಎಂದು ತಿಳಿಸಿದೆ.
ವಿವಿಧ ಬ್ಯಾಂಕುಗಳ ಕಾರುಗಳ ಖರೀದಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿವೆ. ಆದ್ದರಿಂದ ಸಾಲ ಮಾಡಿ ಕಾರು ಖರೀದಿ ಮಾಡುವ ಜನರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.
2025ರಲ್ಲಿ ಕಾರುಗಳ ದರಗಳಲ್ಲಿ ಇಳಿಕೆ ಕಂಡುಬರಲಿದೆ. ಆಗ ಖರೀದಿ ಮಾಡೋಣ ಎಂದು ಜನರು ತಮ್ಮ ಆಲೋಚನೆಯನ್ನು ಮುಂದಿನ ವರ್ಷಕ್ಕೆ ಬದಲಾವಣೆ ಮಾಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಭಾರತ ಮಾತ್ರವಲ್ಲ ವಿಶ್ವದ ವಿವಿಧ ರಾಷ್ಟ್ರಗಳಲ್ಲೇ ಕಾರುಗಳ ಖರೀದಿ ಇಳಿಕೆಯಾಗಿದೆ. ಇದು ಉತ್ಪಾದನೆ ಮೇಲೆಯೂ ಪ್ರಭಾವ ಬೀರಿದೆ. ವೋಕ್ಸ್ ವ್ಯಾಗನ್ ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿರುವ ಉತ್ಪಾದನಾ ಘಟಕವನ್ನು ಮುಚ್ಚಲಾಗುತ್ತದೆ ಎಂದು ಕೆಲವು ದಿನಗಳ ಹಿಂದೆ ಹೇಳಿತ್ತು.
ಅಮೆರಿಕ, ಕೆನಡಾ, ಯುರೋಪ್ ರಾಷ್ಟ್ರಗಳಲ್ಲಿ ಕಾರುಗಳ ಖರೀದಿ ಕಡಿಮೆಯಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ಆರ್ಥಿಕ ಪರಿಸ್ಥಿತಿ ಬದಲಾಗಿದ್ದು, ಜನರು ಹೂಡಿಕೆ ಮಾಡಲು ಮುಂದಾಗುತ್ತಿಲ್ಲ. ಭಾರತದಂತಹ ರಾಷ್ಟ್ರದಲ್ಲಿಯೂ ಈಗ ಕಾರುಗಳ ಖರೀದಿ ಕಡಿಮೆಯಾಗುತ್ತಿದೆ ಎಂದು ವರದಿ ಹೇಳಿದೆ.


Click it and Unblock the Notifications