ಹರಿದ್ವಾರ್, ಜೂನ್ 23: ಕೊರೊನಾವೈರಸ್ ಎಂಬ ಮಹಾಮಾರಿ ಜಗತ್ತನ್ನು ತೀವ್ರ ಕಂಗೆಡಿಸಿದೆ. ಇದಕ್ಕೆ ಮದ್ದು ಅರಿಯಲು ದೊಡ್ಡ ದೊಡ್ಡ ರಾಷ್ಟ್ರಗಳೇ ಪ್ರಯತ್ನಿಸುತ್ತಿವೆಯೇ ಹೊರತು ಇನ್ನೂ ಅಂತಿಮ ಫಲಿತಾಂಶ ಬಂದಿಲ್ಲ.
ಹಲವು ರೋಗಗಳಿಗೆ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಯಶಸ್ವಿ ಪಡೆದಿರುವ ಭಾರತದ ಜನಪ್ರಿಯ ಪತಂಜಲಿ ಸಂಸ್ಥೆ ಕೆಲ ದಿನಗಳ ಹಿಂದೆ ಕೊರೊನಾವೈರಸ್‌ಗೆ ಔಷಧಿ ಕಂಡು ಹಿಡಿದಿದ್ದೇವೆ ಎಂದು ಹೇಳಿಕೊಂಡಿತ್ತು. ಇದೀಗ ಪತಂಜಲಿಯ ಯೋಗ ಗುರು ಬಾಬಾ ರಾಮದೇವ್ ಅವರು ಕೋವಿಡ್ 19 ಗೆ ಆವಿಷ್ಕರಿಸಿರುವ ಔಷಧಿಯನ್ನು ಬಿಡುಗಡೆ ಮಾಡಿದ್ದಾರೆ.
ನಿಬ್ಬೆರಗಾಗಿಸುವ ಸ್ಟೋರಿ: ಪ್ರಪಂಚದಲ್ಲೇ ಕೊರೊನಾವೈರಸ್ ಹೊಸ ದಾಖಲೆ!
ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೊರೊನಿಲ್ (Coronil) ಎಂಬ ಆಯುರ್ವೇದ ಔಷಧಿಯನ್ನು ಕೋವಿಡ್ 19 ಗಾಗಿ ಬಿಡುಗಡೆ ಮಾಡಿದ್ದೇವೆ ಎಂದು ಬಾಬಾ ರಾಮದೇವ್ ಹಾಗೂ ಪತಂಜಲಿ ಯೋಗ ಪೀಠದ ಆಚಾರ್ಯ ಬಾಲಕೃಷ್ಣ ಅವರು ಹೇಳಿದ್ದಾರೆ. ಮುಂದೆ ಓದಿ...
ಒಂದು ಮಾತ್ರೆಗೆ 545 ರುಪಾಯಿ
ಕೊರೊನಿಲ್ ಆಯುರ್ವೇದ ಮಾತ್ರೆಗಳ ಕಿಟ್‌ನ್ನು ಪತಂಜಲಿ ಕೋವಿಡ್ 19 ರೋಗಿಗಳಿಗೆ ರೂಪಿಸಿದೆ. ಈ ಕಿಟ್‌ನಲ್ಲಿ ಹತ್ತು ಮಾತ್ರೆಗಳು ಇರುತ್ತವೆ. ಒಂದು ಮಾತ್ರೆಗೆ 545 ರುಪಾಯಿ. ಈ ಮಾತ್ರೆಗಳು ಕೋವಿಡ್ 19 ರೋಗಿಗಳನ್ನು ಗುಣಪಡಿಸಲು ಸಮರ್ಥವಾಗಿದೆ ಎಂದು ಬಾಬಾ ರಾಮದೇವ್ ಅವರು ಹೇಳಿದ್ದಾರೆ.
ಇಲಿಗಳ ಮೇಲೆ ಸಂಶೋಧನೆ
ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಶೋಧಕರು ಹಾಗೂ ಜೈಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಜಂಟಿಯಾಗಿ Coronil ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಔಷಧಿಯನ್ನು ತಯಾರಿಸುವ ಕೆಲಸ ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಜಂಟಿಯಾಗಿ ನಡೆಸಲಿವೆ ಎನ್ನಲಾಗಿದೆ. ಪತಂಜಲಿ ಸಂಶೋಧಕರು ಇಲಿಗಳ ಮೇಲೆ ಸಂಶೋಧನೆ ಕೈಗೊಂಡು ಕಳೆದ 6 ತಿಂಗಳ ನಿರಂತರ ಪರಿಶ್ರಮದಿಂದ ಕೋವಿಡ್‌ಗೆ ಮದ್ದು ಅರಿದಿದ್ದಾರೆ.
3 ರಿಂದ 10 ದಿನಗಳ ಒಳಗೆ ರೋಗಿಗಳು ಗುಣಮುಖ
ಮುಂದಿನ ಒಂದು ವಾರದಲ್ಲಿ ಸರ್ಕಾರಗಳ ಅನುಮತಿಯೊಂದಿಗೆ ದೇಶದ ಎಲ್ಲ ಪತಂಜಲಿ ಸ್ಟೋರ್‌ಗಳಲ್ಲಿ ಕೊರೊನಿಲ್ ಮಾತ್ರೆಗಳು ಸಿಗಲಿವೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಈಗಾಗಲೇ ಪ್ರಾಯೋಗಿಕವಾಗಿ ಕೊರೊನಾವೈರಸ್ ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದ್ದು, ಮಾತ್ರೆ ನೀಡಿದ 3 ರಿಂದ 10 ದಿನಗಳ ಒಳಗೆ ರೋಗಿಗಳು ಚೇತರಿಸಿಕೊಂಡಿದ್ದಾರೆ. ಶೇ 69 ರಷ್ಟು ರೋಗಿಗಳು 3 ದಿನದಲ್ಲಿ ಚೇತರಿಸಿಕೊಂಡಿದ್ದರೆ, ಶೇ 100 ರಷ್ಟು ರೋಗಿಗಳು ಒಂದು ವಾರದಲ್ಲಿ ಗುಣಮುಖರಾಗಿದ್ದಾರೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ಕೊರೊನಾವೈರಸ್‌ನ್ನು ಸಂಪೂರ್ಣ ನಾಶ ಮಾಡುತ್ತದೆ
ಪತಂಜಲಿಯ ಕೊರೊನಿಲ್ ಮಾತ್ರೆಗಳು ಕೊರೊನಾವೈರಸ್ ಪೀಡಿತ ವ್ಯಕ್ತಿಗಳ ರೋಗ ನಿರೋಧಕ ಶಕ್ತಿಯನ್ನು ಮಾತ್ರ ಹೆಚ್ಚಿಸುವುದಲ್ಲ, ದೇಹದಲ್ಲಿ ಕೊರೊನಾವೈರಸ್‌ನ್ನು ಸಂಪೂರ್ಣ ನಾಶ ಮಾಡುತ್ತದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಸದ್ಯ ಕ್ಲಿನಿಕಲ್ ಪ್ರಯೋಗಗಳು ಮುಗಿದಿದ್ದು, ಇನ್ನೊಂದು ವಾರದಲ್ಲಿ ಔಷಧಿ ಪ್ರಯೋಗಕ್ಕೆ ಸಂಬಂಧಿಸಿದಂತೆ ವಿವರವಾದ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಬಾಬಾ ರಾಮದೇವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


Click it and Unblock the Notifications