ಸ್ಟಾರ್ಟಪ್ ಶುರು ಮಾಡ್ಬೇಕು, ಸಕ್ಸಸ್ ಕಾಣಬೇಕೆಂದು ಹಲವರು ಆಶಿಸುತ್ತಾರೆ. ಆದ್ರೆ ಕೆಲವೊಂದು ಉದ್ಯಮಗಳು ಊಹೆಯೂ ಮಾಡದ ರೀತಿಯಲ್ಲಿ ಯಶಸ್ವಿ ತಂದುಕೊಡುತ್ತದೆ. ಅದೇ ರೀತಿ ಇಲ್ಲೊಂದು ಸಕ್ಸಸ್ ಸ್ಟೋರಿ ಇದೆ. ಸ್ಕೂಲ್ ಫ್ರೆಂಡ್ಸ್ ಸೇರಿಕೊಂಡು ಶುರು ಮಾಡಿದ ಉದ್ಯಮ, ಇಂದು ಅವರನ್ನೇ ವಿಶ್ವದ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಬಿಲಿಯನೇರ್‌ಗಳನ್ನಾಗಿ ಮಾಡಿದೆ. ಹೌದು, ಮರ್ಕೊರ್ ಸ್ಟಾರ್ಟಪ್‌ನ (Mercor) ಸಂಸ್ಥಾಪಕರಾದ ಬ್ರೆಂಡನ್ ಫೂಡಿ, ಆದರ್ಶ್ ಹಿರೆಮಠ್ ಮತ್ತು ಸೂರ್ಯ ಮಿಧಾ ಕೇವಲ 22ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಸ್ವಯಂ-ನಿರ್ಮಿತ ಬಿಲಿಯನೇರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಅತೀ ಕಿರಿಯ ವಯಸ್ಸಿನಲ್ಲಿ ಬಿಲಿಯನೇರ್ ಆಗುವ ಮೂಲಕ ಈ ಯುವಕರು, 2008ರಲ್ಲಿ 23ನೇ ವಯಸ್ಸಿನಲ್ಲಿ ಬಿಲಿಯನೇರ್ ಪಟ್ಟಿಗೆ ಸೇರಿದ್ದ ಮಾರ್ಕ್ ಜುಕರ್‌ಬರ್ಗ್ ಅವರ ದಾಖಲೆಯನ್ನೇ ಮುರಿದು, ಹೊಸ ದಾಖಲೆ ಸೃಷ್ಟಿಸಿದ್ದಾರೆ.. ಇನ್ನು ಈ ಮೂವರು ಯುವಕರು ಸೇರಿಕೊಂಡು ಕಟ್ಟಿದ ಮರ್ಕೋರ್, ಒಂದು ಕೃತಕ ಬುದ್ಧಿಮತ್ತೆ (AI) ಆಧಾರಿತ ನೇಮಕಾತಿ ಸ್ಟಾರ್ಟಪ್ ಆಗಿದೆ.
ವರದಿಗಳ ಪ್ರಕಾರ, ಈ ಸ್ಟಾರ್ಟಪ್ ಮೂಲತಃ ಸ್ಯಾನ್‌ಫ್ರಾನ್ಸಿಸ್ಕೋದ್ದಾಗಿದೆ. ಇನ್ನು ಇತ್ತೀಚೆಗೆ ಈ ಸ್ಟಾರ್ಟಪ್ 350 ಮಿಲಿಯನ್ ಡಾಲರ್ ಲಾಭವನ್ನು ಸಂಗ್ರಹಿಸಿದೆ. ಇದೇ ಲಾಭದಿಂದ ಸದ್ಯ ಮಾರ್ಕೊರ್ ಕಂಪನಿಯ ಮೌಲ್ಯ 10 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಇದೇ ವ್ಯವಹಾರ ಇಂದು ಸಿಇಒ ಬ್ರೆಂಡನ್ ಫೂಡಿ, ಸಿಟಿಒ ಆದರ್ಶ್ ಹಿರೆಮಠ್ ಮತ್ತು ಮಂಡಳಿಯ ಅಧ್ಯಕ್ಷ ಸೂರ್ಯ ಮಿಧಾ ಅವರನ್ನು ವಿಶ್ವದ ಅತ್ಯಂತ ಕಿರಿಯ ಸ್ವಯಂ-ನಿರ್ಮಿತ ಶತಕೋಟ್ಯಾಧಿಪತಿಗಳನ್ನಾಗಿ ರೂಪಿಸಿದೆ.
ಇನ್ನು ಶತಕೋಟಿಗಳ ಪಟ್ಟಿಗೆ ಸೇರಿದವರ ವಿಶೇಷವೆಂದರೆ, ಮರ್ಕೋರ್ ಶುರು ಮಾಡಿದ ಮೂವರು ಸಹ-ಸಂಸ್ಥಾಪಕರಲ್ಲಿ ಇಬ್ಬರು ಭಾರತೀಯ-ಅಮೆರಿಕನ್ನರು. ಸೂರ್ಯ ಮಿಧಾ ಮತ್ತು ಆದರ್ಶ್ ಹಿರೆಮಠ್ ಇಬ್ಬರೂ ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾದಲ್ಲಿರುವ ಆಲ್-ಬಾಯ್ಸ್ ಸೆಕೆಂಡರಿ ಶಾಲೆಯಾದ ಬೆಲ್ಲಾರ್ಮೈನ್ ಕಾಲೇಜ್ ಪ್ರಿಪರೇಟರಿಯಲ್ಲಿ (Bellarmine College Preparatory) ಒಟ್ಟಿಗೆ ಡಿಬೇಟ್ ತಂಡದಲ್ಲಿದ್ದವರು. ಅಲ್ಲಿಂದ ಶುರುವಾದ ಸ್ನೇಹ, ಇಂದು ಅವರನ್ನು ಶತಕೋಟಿ ಗಳಿಸುವಂತೆ ಮಾಡಿದೆ.
ಅಷ್ಟೇ ಅಲ್ಲದೇ, ಅವರಿದ್ದ ಡಿಬೇಟ್ ತಂಡದ ಮೂಲಕ ಮೂರು ರಾಷ್ಟ್ರೀಯ ನೀತಿ ಚರ್ಚಾ ಪಂದ್ಯಾವಳಿಗಳನ್ನು ಗೆದ್ದ ಮೊದಲ ಜೋಡಿ ಎಂಬ ಹೆಗ್ಗಳಿಕೆಯನ್ನೂ ಬಾಚಿಕೊಂಡಿದ್ದರು. ಸೂರ್ಯ ಮಿಧಾ ಎರಡನೇ ತಲೆಮಾರಿನ ವಲಸಿಗರಾಗಿದ್ದು, ಅವರ ಪೋಷಕರು ನವದೆಹಲಿಯಿಂದ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದಿರುವುದಾಗಿ ತಿಳಿಸಿದ್ದಾರೆ.
ಇನ್ನು ಸೂರ್ಯ ಮಿಧಾ, "ನನ್ನ ಪೋಷಕರು ನವದೆಹಲಿ, ಭಾರತದಿಂದ ಅಮೆರಿಕಕ್ಕೆ ವಲಸೆ ಬಂದವರು. ನಾನು ಮೌಂಟೇನ್ ವ್ಯೂನಲ್ಲಿ ಹುಟ್ಟಿ, ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾದಲ್ಲಿ ಬೆಳೆದೆ." ಎಂದು ಹೇಳಿದ್ದಾರೆ. ಇದೀಗ ಬಾಲ್ಯ ಸ್ನೇಹಿತರು ಬಿಲಿಯನೇರ್‌ಗಳಾಗಿದ್ದು, ಹಲವು ಯುವಕರಿಗೆ ಸ್ಫೂರ್ತಿ.
ಇನ್ನು ಸಾಧನೆಯ ಬಗ್ಗೆ ಮಾತನಾಡಿದ ಆದರ್ಶ್ ಹಿರೇಮಠ್, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಿದೆವು. ಆದರೆ ಅದೇ ವೇಳೆ ಮರ್ಕೋರ್ ಸ್ಟಾರ್ಟಪ್ ಮೇಲೆ ಗಮನ ಹರಿಸಲು ಎರಡು ವರ್ಷಗಳ ನಂತರ ಹಾರ್ವರ್ಡ್ ತೊರೆದರು ಎಂದು ಹೇಳಿದ್ದಾರೆ. "ನಾನು ಮರ್ಕೋರ್‌ನಲ್ಲಿ ಕೆಲಸ ಆರಂಭಿಸದಿದ್ದರೆ, ಕೆಲವೇ ತಿಂಗಳಲ್ಲಿ ಪದವಿ ಮುಗಿಸುತ್ತಿದ್ದೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ನನ್ನ ಜೀವನ ಹೀಗೆ ಟ್ವಿಸ್ಟ್ ಕೊಟ್ಟಿದೆ" ಎಂದು ಹೇಳಿದರು.


Click it and Unblock the Notifications