ಇಸ್ರೇಲ್, ಅಮೆರಿಕಾ ಮತ್ತು ಇರಾನ್ (Israel, America - Iran) ನಡುವಿನ ಸಂಘರ್ಷ ದಿನೇ ದಿನೇ ತೀವ್ರವಾಗುತ್ತಿದೆ. ಆ ಉದ್ವಿಗ್ನತೆಯಿಂದಾಗಿ ಅತ್ತ ಭಾರತ ಸೇರಿ ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪ್ರಭಾವ ಬೀರುತ್ತಿದೆ. ಅತ್ತ ಪ್ರಮುಖ ಕಚ್ಚಾ ತೈಲ (Crude Oil) ಸಾಗಣೆ ಮಾರ್ಗವಾಗಿದ್ದ ಹಾರ್ಮುಜ್ ಜಲಸಂಧಿ (Straits Of Hormuz) ಮುಚ್ಚುವಿಕೆಯಿಂದ, ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಎದುರಾಗುತ್ತಿದ್ದು, ಈ ಮಧ್ಯೆ ಭಾರತದ ಇಂಧನ ದಾಸ್ತಾನು ಸ್ಥಿತಿ ಸುಧಾರಿಸುತ್ತಿದೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಬಗ್ಗೆ ಕೇಂದ್ರದಿಂದ ಯಾವುದೇ ಯೋಜನೆಗಳಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿದೆ. ಇನ್ನು ಈ ಕುರಿತು ಎಎನ್‌ಐ ಕೂಡಾ ತನ್ನ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್ ಮಾಡಿಕೊಂಡಿದೆ.

ಪಶ್ಚಿಮ ಏಷ್ಯಾದಲ್ಲಿ ಉದ್ಭಿವಿಸಿರುವ ತಲ್ಲಣ, ಇರಾನ್‌ನಿಂದ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆ ನಿರ್ಧಾರದ ನಡುವೆಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಭರವಸೆ ನೀಡಿದೆ ಎಂದು ಎಎನ್‌ಐ ವರದಿ ಮಾಡಿದೆ.
ಕಚ್ಚಾ ತೈಲಕ್ಕಾಗಿ ಭಾರತದಿಂದ ಮಹತ್ವದ ನಿರ್ಧಾರ!
ಮಾಧ್ಯಮದೊಂದಿಗೆ ಮಾತನಾಡಿದ ಸರ್ಕಾರಿ ಮೂಲಗಳು "ಭಾರತದ ಇಂಧನ ಸಂಗ್ರಹ ಸ್ಥಿತಿ ಸದ್ಯ ಸುಧಾರಣೆ ಕಾಣುತ್ತಿದೆ. ಆದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುವುದಿಲ್ಲ" ಎಂದು ಸ್ಪಷ್ಟನೆ ನೀಡಲಾಗಿದೆ. ಅಲ್ಲದೇ ಮಧ್ಯಪ್ರಾಚ್ಯದಲ್ಲಾಗುತ್ತಿರುವ ಸಂಘರ್ಷದಿಂದಾಗಿ "ಹಾರ್ಮುಜ್ ಜಲಸಂಧಿ" (Straits Of Hormuz) ಮೂಲಕ ಆಮದು ಮಾಡಲಾಗುತ್ತಿದ್ದ ಕಚ್ಚಾ ತೈಲವನ್ನು ಕಡಿಮೆ ಮಾಡಲಾಗಿದೆ. ಈ ಹಿನ್ನೆಲೆ ಭಾರತ ಇತರ ಮೂಲಗಳ ಕಡೆ ಮುಖ ಮಾಡಿದ್ದು, ಇತರ ಮೂಲಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಶೇ.10 ರಷ್ಟು ಹೆಚ್ಚಿಸಿದೆ ಎನ್ನಲಾಗಿದೆ. ಈ ಮೂಲಕ ಹಾರ್ಮುಜ್ ಮೂಲಕ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲ ಪ್ರಮಾಣವನ್ನು 10% ರಷ್ಟು ಇಳಿಸಿ, ರಷ್ಯಾ ಸೇರಿದಂತೆ ಇತರ ದೇಶಗಳಿಂದ ಹೆಚ್ಚಿನ ಕಚ್ಚಾ ತೈಲದ ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಹಾರ್ಮುಜ್ ಜಲಸಂಧಿ ಬಂದ್!
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಭೀಕರ ದಾಳಿ ನಡೆಸಿತ್ತು. ಈ ಪರಿಣಾಮ ಹಲವು ಸಾವು ನೋವುಗಳು ಸಂಭವಿಸಿದ್ದು, ಜೊತೆಗೆ ಇರಾನ್ ಸುಪ್ರೀಂ ನಾಯಕ ಖಮೇನಿ ಹತ್ಯೆಯೂ ನಡೆಯಿತು. ಈ ಬೆನ್ನಲ್ಲೇ ಮೂರೂ ದೇಶಗಳಿಂದ ಪ್ರತಿದಾಳಿಗಳು ನಡೆಯುತ್ತಲೇ ಇತ್ತು. ಅಲ್ಲದೇ ಯುದ್ಧ ಆರಂಭವಾಗಿ 10 ದಿನವಾದರೂ, ಇನ್ನೂ ತೀವ್ರತೆ ಕಮ್ಮಿಯಾಗಿಲ್ಲ. ಈ ಪರಿಣಾಮ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯನ್ನು ಮುಚ್ಚುವಂತೆ ಆದೇಶ ಹೊರಡಿಸಲಾಯಿತು. ಈ ಜಲಸಂಧಿಯಿಂದ ಭಾರತಕ್ಕೆ ಸುಮಾರು ಅರ್ಧದಷ್ಟು ಕಚ್ಚಾ ತೈಲ, ದೊಡ್ಡ ಪ್ರಮಾಣದ ಎಲ್‌ಎನ್‌ಜಿ ಮತ್ತು ಎಲ್‌ಪಿಜಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಹಠಾತ್ ಮುಚ್ಚುವಿಕೆ ಭಾರತದ ಮೇಲೆ ಪ್ರಭಾವ ಬೀರಿದ್ದು, ಸದ್ಯ ಭಾರತ ಇತರ ಮೂಲಗಳನ್ನು ಹುಡುಕುವಂತಾಗಿದೆ.


Click it and Unblock the Notifications