ಬೆಂಗಳೂರಿನ ಬಹುಬೇಡಿಕೆಯ ಮೆಟ್ರೋ ಯೋಜನೆಗಳಲ್ಲಿ (Bengaluru Metro) ಪಿಂಕ್ ಲೈನ್ ಮೆಟ್ರೋ ಯೋಜನೆ ಕೂಡಾ ಒಂದು. ಸದ್ಯ ಈಗಾಗಲೇ ಬೆಂಗಳೂರಿನಲ್ಲಿ ಗ್ರೀನ್, ಪರ್ಪಲ್, ಯೆಲ್ಲೋ ಲೈನ್‌ಗಳಲ್ಲಿ (Yellow Line) ಮೆಟ್ರೋ ಸೇವೆ ನೀಡಲಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಲೈನ್ ಆರಂಭಕ್ಕೆ ಸಜ್ಜಾಗಿದ್ದು, ಮೆಟ್ರೋ ಪಿಂಕ್ ಮಾರ್ಗ ಕಾರ್ಯಾಚರಣೆಗೆ ಸಿದ್ಧವಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನ (Pink Line) ಎಲಿವೇಟೆಡ್ ಸೆಕ್ಷನ್ (ಕಾಲೇನ ಅಗ್ರಹಾರದಿಂದ ತಾವರೆಕೆರೆವರೆಗೆ) BEML ತನ್ನ ರೈಲಿನ ಕಾರ್ಯಾಚರಣೆಯ ಓಡಾಟ ಆರಂಭವಾಗಿದೆ. ಮೇ ತಿಂಗಳಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸುವ ಉದ್ದೇಶದಿಂದ ಸುರಕ್ಷತೆ, ಟ್ರಾಕ್ಷನ್ ಮತ್ತು ಕಾರ್ಯಕ್ಷಮತೆ ಪರೀಕ್ಷೆಗಳು ಭರದಿಂದ ಸಾಗುತ್ತಿದೆ.

ಸುಮಾರು 7.5 ಕಿ.ಮೀ. ಉದ್ದದ ಈ ಎತ್ತರದ ಭಾಗದಲ್ಲಿ, ಮೆಟ್ರೋ ಅಧಿಕಾರಿಗಳು ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 7:30 ರವರೆಗೆ ರೈಲನ್ನು ಓಡಿಸಿ ನಿರಂತರ ಪರೀಕ್ಷೆ ನಡೆಸಲಾಗುತ್ತಿದೆ. ವಾಣಿಜ್ಯ ಸಂಚಾರಕ್ಕೆ ಮುನ್ನ ಸುರಕ್ಷತೆ, ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ.
ಪ್ರಾಯೋಗಿಕ ಓಡಾಟದ ವೇಳೆ, ಇಂಜಿನಿಯರ್‌ಗಳು ರೈಲಿನ ಮೋಟಾರ್, ಪ್ರೊಪಲ್ಷನ್ ವ್ಯವಸ್ಥೆ, ಬ್ರೇಕಿಂಗ್ ಹಾಗೂ ಒಟ್ಟಾರೆ ಸ್ಥಿರತೆಯನ್ನು ವಿವಿಧ ವೇಗಗಳಲ್ಲಿ ಪರೀಕ್ಷಿಸುತ್ತಿದ್ದಾರೆ. ಈ ಪರೀಕ್ಷೆಗಳು ಫೆಬ್ರವರಿ 15ರವರೆಗೆ ಮುಂದುವರಿಯಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRC) ತಿಳಿಸಿದೆ.
ಈ ಹಂತದ ನಂತರ, ಮೂಮೆಂಟ್, ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳ ತಪಾಸಣೆಗಳನ್ನು ಸಹ ಕೈಗೊಳ್ಳಲಾಗುತ್ತದೆ. ಈ ಮೌಲ್ಯಮಾಪನಗಳು ಏಪ್ರಿಲ್ ಮಧ್ಯಭಾಗದವರೆಗೆ ನಡೆಯುವ ನಿರೀಕ್ಷೆ ಇದೆ.
ಆಂತರಿಕ ಸಮೀಕ್ಷೆಗಳ ನಂತರ, RDSO ಮತ್ತು CMRS ತಂಡಗಳು ಅಂತಿಮ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿವೆ. ಅವರ ಶಿಫಾರಸಿನಂತೆ, ಕೇಂದ್ರ ರೈಲ್ವೆ ಮಂಡಳಿ ಸುರಕ್ಷತಾ ಪ್ರಮಾಣಪತ್ರ ನೀಡಿದ ಬಳಿಕ, ಮೇ ತಿಂಗಳಲ್ಲಿ ಕಾರ್ಯಾಚರಣೆ ಆರಂಭಿಸಲು ಮೆಟ್ರೋ ಅಧಿಕಾರಿಗಳು ಗುರಿ ಹೊಂದಿದ್ದಾರೆ.
ಎಲ್ಲಿಂದ ಎಲ್ಲಿಗೆ ಪಿಂಕ್ ಲೈನ್?
ಸುಮಾರು 21.56 ಕಿ.ಮೀ. ಉದ್ದದ ಪಿಂಕ್ ಲೈನ್ ಕಾಲೇನ ಅಗ್ರಹಾರದಿಂದ ನಾಗವಾರದವರೆಗೆ ವಿಸ್ತರಿಸಿದೆ. ಇದು ಐದು ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದು, 7.5 ಕಿ.ಮೀ. ಎತ್ತರದಲ್ಲಿ ಹಾಗೂ 13 ಕಿ.ಮೀ. ಅಂಡರ್‌ಗ್ರೌಂಡ್ ಮಾರ್ಗವಾಗಿದೆ. ಒಟ್ಟು 17 ನಿಲ್ದಾಣಗಳನ್ನು ಇದು ಒಳಗೊಂಡಿದೆ.
ಪ್ರಸ್ತುತ, ಕಾಲೇನ ಅಗ್ರಹಾರದಿಂದ ತಾವರೆಕೆರೆಯವರೆಗಿನ ಎತ್ತರಿಸಿದ ಮಾರ್ಗದಲ್ಲಿ ಪ್ರಾಯೋಗಿಕ ಓಡಾಟ ನಡೆಯುತ್ತಿದೆ. ಈ ವಿಭಾಗದಲ್ಲಿ ಕಾಲೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ ಮತ್ತು ತಾವರೆಕೆರೆ ಸೇರಿ ಐದು ನಿಲ್ದಾಣಗಳಿವೆ. ಸುರಕ್ಷತಾ ಪ್ರಮಾಣಪತ್ರ ದೊರೆತ ಕೂಡಲೇ ವಾಣಿಜ್ಯ ಕಾರ್ಯಾಚರಣೆಗಳಿಗೆ ಚಾಲನೆ ಸಿಗಲಿದೆ ಎಂದು BMRCL ಅಧಿಕಾರಿಗಳು ದೃಢಪಡಿಸಿದ್ದಾರೆ.
ಪಿಂಕ್ ಲೈನ್‌ನ ಅಂಡರ್‌ಗ್ರೌಂಡ್‌ನಲ್ಲಿ ಬರುವ ನಿಲ್ದಾಣಗಳು: ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್, ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ. ರಸ್ತೆ, ಶಿವಾಜಿನಗರ, ಕ್ಯಾಂಟೋನ್ಮೆಂಟ್ ಸ್ಟೇಷನ್, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಡುಗೊಂಡನಹಳ್ಳಿ ಮತ್ತು ನಾಗವಾರ.


Click it and Unblock the Notifications