ಈಗಿನ ಕಾಲದಲ್ಲಿ ಮಹಿಳೆ ಎಷ್ಟೇ ಸ್ವಾವಲಂಬಿಯಾಗಿ ಬದುಕಿದ್ರೂ, ಆಕೆಯನ್ನ ಗುರುತಿಸುವುದು ನಾಲ್ಕು ಗೋಡೆಯ ಮಧ್ಯೆ ಇರಬೇಕಾದವಳು ಎಂದು. ಮಹಿಳೆ ನಾಲ್ಕು ಗೋಡೆಯ ಮಧ್ಯೆ ದುಡಿದರೂ ಅದು ಶ್ರಮ ಎಂದು ಪರಿಗಣನೆ ಆಗುವುದಿಲ್ಲ. ಆದರೂ ವರ್ಷಕ್ಕೊಮ್ಮೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾರೆ. ಮಹಿಳೆ ಎಲ್ಲದರಲ್ಲೂ ವೇಸ್ಟ್ ಎಂದು ಎಷ್ಟೋ ಜನ ಇಂದಿಗೂ ತಮ್ಮ ಅಭಿಪ್ರಾಯದ ಮೇಲೆ ಗಟ್ಟಿಯಾಗಿ ನಿಂತಿದ್ದಾರೆ. ಆದರೆ ನಿಮಗೆಷ್ಟು ಗೊತ್ತು ಮಹಿಳೆಯರು ಪಾವತಿಸುವ ತೆರಿಗೆ ಬಗ್ಗೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚು ತೆರಿಗೆ ಪಾವತಿಸುತ್ತಾರೆ. ಪುರುಷರ ವಸ್ತುಗಳ ಮೇಲಾಗದ ಖರ್ಚು ಮಹಿಳೆಯರ ಮೇಲೆಯೇ ಏಕಾಗುತ್ತದೆ ಎನ್ನುವುದೇ ದೋರಣೆಯಾಗಿದೆ. ಈ ತೆರಿಗೆಯನ್ನು ಪಿಂಕ್ ಟ್ಯಾಕ್ಸ್ ಎಂದು ಕರೆಯುತ್ತಾರೆ. ಇದು ಹೇಳುತ್ತೆ ಮಹಿಳೆಯರಿಗೆ ಮಾತ್ರ ಇರುವ ಅಡಗಿದ ಆರ್ಥಿಕ ಹೊರೆಯ ಕಥೆ.

ಪಿಂಕ್ ಟ್ಯಾಕ್ಸ್ ಅಂದ್ರೆ ಏನು?
ಈ ಪಿಂಕ್ ಟ್ಯಾಕ್ಸ್ ಎಂಬುದು ಸರ್ಕಾರ ವಿಧಿಸುವ ತೆರಿಗೆ ಅಲ್ಲ, ಆದರೆ ಇದನ್ನು ಖಾಸಗಿ ಮಾರುಕಟ್ಟೆಯ ಉತ್ಪನ್ನಗಳು ಅಳವಡಿಸುತ್ತವೆ. ಇದನ್ನು ದರ ವ್ಯತ್ಯಾಸ ಲಿಂಗ ಆಧಾರಿತ ಬೆಲೆ ಪಿಡುಗು ಎಂದು ಗುರುತಿಸಲಾಗಿದೆ. ಅಂದರೆ ಮಾರಾಟ ಮಾಡುವ ಉತ್ಪನ್ನಗಳು ಪುರುಷರಿಗಿಂತ ಹೆಚ್ಚು ದುಬಾರಿಯಾಗಿರಬಹುದು. ಈ ಪಿಂಕ್ ಟ್ಯಾಕ್ಸ್ ಮಹಿಳೆಯರ ಖರೀದಿ ಶಕ್ತಿಯನ್ನು ಕುಂದಿಸುತ್ತಿದೆ.
ಪಿಂಕ್ ಟ್ಯಾಕ್ಸ್‌ನ ಉದಾಹರಣೆಗಳು:
ಮಹಿಳೆಯರು ವೈಯಕ್ತಿಕವಾಗಿ ಬಳಸುವ ಉತ್ಪನ್ನಗಳು ಹೆಚ್ಚು ದುಬಾರಿಯಾಗಿರುತ್ತವೆ. ಅಂದರೆ ಮಹಿಳೆಯರು ಬಳಸುವ ರೇಜರ್ ಬ್ಲೇಡ್, ಶ್ಯಾಂಪೂ, ಸಾಬೂನು, ಪರ್ಫ್ಯೂಮ್ಸ್ ಪುರುಷರ ಉತ್ಪನ್ನಗಳಿಗಿಂತ ಹೆಚ್ಚು ಬೆಲೆಯಾಗಿರುತ್ತವೆ. ಹಾಗೆಯೇ ಬಟ್ಟೆಗಳಲ್ಲಿ ಪುರುಷರಿಗಿಂತ ಮಹಿಳೆಯರ ಜೀನ್ಸ್, ಟಿ-ಶರ್ಟ್, ಶೂಗಳು ಹೆಚ್ಚು ದುಬಾರಿಯಾಗಿರುತ್ತವೆ. ಬಾಲಕಿಯರ ಆಟಿಕೆ ವಸ್ತುಗಳು, ಬ್ಯಾಕ್‌ಪ್ಯಾಕ್, ಸೈಕಲ್ ಹೆಚ್ಚು ದುಬಾರಿಯಾಗಿರುತ್ತವೆ. ಹೇರ್‌ಕಟ್, ಡ್ರೈಕ್ಲೀನಿಂಗ್ ಸೇವೆಗಳಿಗೆ ಪುರುಷರಿಗಿಂತ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ಪಿಂಕ್ ಟ್ಯಾಕ್ಸ್‌ನಿಂದಾಗುವ ಪರಿಣಾಮಗಳೇನು..?
ನ್ಯೂಯಾರ್ಕ್ ರಾಜ್ಯ ಗ್ರಾಹಕರ ವ್ಯವಹಾರಗಳ ಇಲಾಖೆ ಅಧ್ಯಯನದ ಪ್ರಕಾರ, ಮಹಿಳೆಯರ ಉತ್ಪನ್ನಗಳು ಪುರುಷರಿಗಿಂತ ಸರಾಸರಿ 7% ಹೆಚ್ಚು ದುಬಾರಿಯಾಗಿವೆ ಎನ್ನಲಾಗಿದೆ. ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಕೂಡ ಮಹಿಳೆಯರ ವಸ್ತುಗಳು ಪುರುಷರಿಗಿಂತ 13% ಹೆಚ್ಚು ಬೆಲೆ ಹೊಂದಿವೆ.
ಹಾಗೆಯೇ ಯುಕೆ ತಪಾಸಣಾ ವರದಿ ತಿಳಿಸಿರುವ ಪ್ರಕಾರ, ಮಹಿಳೆಯರ ಡಿಯೋಡರೆಂಟ್ 8.9% ಹೆಚ್ಚು ದುಬಾರಿಯಾಗಿದೆ. ಇತ್ತ ಮಹಿಳೆಯರ ಫೇಶಿಯಲ್ ಮಾಯಿಶ್ಚರೈಸರ್ ಕೂಡ ಪುರುಷರಿಗಿಂತ 34.28% ಹೆಚ್ಚು ಬೆಲೆ ಹೊಂದಿದೆ. ಇವುಗಳಿಂದ ಪಿಂಕ್ ಟ್ಯಾಕ್ಸ್ ಮಹಿಳೆಯರ ಖರೀದಿ ಶಕ್ತಿಯನ್ನು ಕುಂಠಿತಗೊಳಿಸುತ್ತಿದೆ. ಇದು ಲಿಂಗ ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ಗಂಭೀರಗೊಳಿಸಿ, ಮಹಿಳೆಯರ ಆರ್ಥಿಕ ಸಬಲಿಕರಣವನ್ನು ದುರ್ಬಲಗೊಳಿಸುತ್ತಿದೆ.
ಪಿಂಕ್ ಟ್ಯಾಕ್ಸ್ ತಪ್ಪಿಸುವುದು ಹೇಗೆ..?
ಈ ಪಿಂಕ್ ಟ್ಯಾಕ್ಸ್‌ನ ತಪ್ಪಿಸಲು ಮಹಿಳೆಯರು ಕಡಿಮೆ ಬೆಲೆಯ ಉತ್ಪನ್ನಗಳನ್ನು ಹೊಂದಬೇಕಾಗುತ್ತದೆ. ಅಂದರೆ ಮಹಿಳೆಯರು ಬೆಲೆ ಹೋಲಿಸಿ ಖರೀದಿಸಿದರೆ ಉತ್ತಮ. ಹಾಗೆಯೇ ಯುನಿಸೆಕ್ಸ್ ಬ್ರಾಂಡ್‌ಗಳನ್ನು ಖರೀದಿಸುವುದರಿಂದಲೂ ಈ ಪಿಂಕ್ ಟ್ಯಾಕ್ಸ್‌ನ ತಡೆಗಟ್ಟಬಹುದು. ಈ ರೀತಿ ಮಾಡಿದರೆ ಹಣ ಉಳಿಸಬಹುದು. ಹೆಚ್ಚು ಬೆಲೆಯ ಉತ್ಪನ್ನಗಳಿಂದ ಹೆಚ್ಚು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಅದನ್ನೇ ತಡೆದರೆ ಈ ಪಿಂಕ್ ಟ್ಯಾಕ್ಸ್‌ನ ಕೂಡ ಕಡಿಮೆ ಮಾಡಬಹುದು.
ಇನ್ನು ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಸರಾಸರಿ ವೇತನ, 19%ನಷ್ಟು ವ್ಯತ್ಯಾಸವಿದೆ. ಕೃಷಿಯಿಂದ ಹಿಡಿದು ಐಟಿ ಉದ್ಯೋಗದವರೆಗೂ ಸಾಮಾಜಿಕ-ಆರ್ಥಿಕ ಕಾರಣಗಳಿಂದ ಈ ಗ್ಯಾಪ್ ಇರುತ್ತದೆ. ಜಾಗತಿಕವಾಗಿ, ಮಹಿಳೆಯರು ಪುರುಷರು ಗಳಿಸುವ ಪ್ರತೀ 1 ಡಾಲರ್‌ಗೆ ಕೇವಲ 77 ಸೆಂಟ್ ಮಾತ್ರ ಗಳಿಸುತ್ತಾರೆ. 129 ದೇಶಗಳಲ್ಲಿ ಮಹಿಳೆಯರ ಉದ್ಯೋಗ ಭಾಗವಹಿಸುವಿಕೆ ಪುರುಷರಿಗಿಂತ ಕಡಿಮೆಯಾಗಿದೆ. ಇದರ ನಡುವೆಯೂ ಮಹಿಳೆ ಕಟ್ಟುವ ಟ್ಯಾಕ್ಸ್ ಅತ್ಯಧಿಕವಾಗಿದ್ದರೆ ಇದೊಂದು ದೊಡ್ಡ ಹೊರೆಯೆಂದೇ ಪರಿಗಣಿಸಬಹುದಾಗಿದೆ. ಹೀಗಾಗಿ ಮಹಿಳೆಯರು ಕೊಳ್ಳುವ ವಸ್ತುಗಳ ಮೇಲೆ ಭಾರಿ ನಿಗಾ ವಹಿಸಬೇಕಿರುತ್ತದೆ.


Click it and Unblock the Notifications