ಪ್ಲಾಸ್ಟಿಕ್ ಬಳಕೆಯನ್ನು (Plastic) ನಿಷೇಧಿಸಬೇಕೆಂಬ ಕೂಗಿ ಈಗಿನಿಂದಲ್ಲ, ಬಹಳ ಹಿಂದಿನಿಂದಲೂ ಕೇಳಿಬರುತ್ತಲೇ ಇದೆ. ಆದ್ರೂ ಪ್ಲಾಸ್ಟಿಕ್ ಬಳಕೆ ಮಾತ್ರ ಇನ್ನೂ ನಿಂತಿಲ್ಲ. ಸರ್ಕಾರ ಈ ಬಗ್ಗೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಜನ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲ್‌ಗಳನ್ನು (Plastic Bottle) ಬಳಸುತ್ತಲೇ ಇದ್ದಾರೆ. ಆದರೆ ಇದೀಗ ಪ್ಲಾಸ್ಟಿಕ್ ಬಾಟಲಿಗಳನ್ನು ಸಭೆ-ಸಮಾರಂಭಗಳಲ್ಲಿ ಬಳಸುವವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಹೌದು, ಸರ್ಕಾರಿ ಕಚೇರಿಗಳಲ್ಲಿ, ಸಭೆ ಸಮಾರಂಭಗಳಲ್ಲಿ ಇನ್ಮೇಲೆ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಸಂಬಂಧಿತ ಆಹಾರ ಉತ್ಪನ್ನಗಳನ್ನು ಬಳಸಬಾರದು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಬಾಟಲಿಗಳನ್ನು ಬಳಸುವಂತೆ ಎಲ್ಲಾ ಇಲಾಖೆಯವರಿಗೂ ಕಟ್ಟುನಿಟ್ಟಿದ್ದ ಆದೇಶ ಹೊರಡಿಸಿದ್ದಾರೆ.
ಕೆಎಂಎಫ್ "ನಂದಿನಿ"ಗೆ ಆದ್ಯತೆ:
ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿ ಬಾಟಲಿಗಳನ್ನು ಬಳಸಬಾರದು ಎಂದು ಸೂಚನೆ ಹೊರಡಿಸಿದಲ್ಲದೇ, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಎಂಎಫ್‌ನ ನಂದಿನಿ (KMF Nandini) ತಿಂಡಿ ತಿನಿಸುಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ "ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರ ಬಳಕೆ ಮಾಡುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಮತ್ತು ಮುಖ್ಯಮಂತ್ರಿಗಳ, ಸಚಿವರುಗಳ ಸಭೆಗಳಲ್ಲಿ, ಸರ್ಕಾರದ ಎಲ್ಲಾ ಸಭೆ - ಕಾರ್ಯಕ್ರಮಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಎಂಎಫ್‌ನ ನಂದಿನಿ ತಿನಿಸುಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ." ಎಂದು ಆದೇಶ ಪ್ರತಿಯೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ದೇಶವಿದೇಶಗಳಲ್ಲು ಕರ್ನಾಟಕದ ನಂದಿನಿ ಬ್ರ್ಯಾಂಡ್!
ಇನ್ನು ವ್ಯಾಪಾರ ಜಗತ್ತಿನಲ್ಲಿ ದಿಗ್ಗಜ ಎನಿಸಿಕೊಂಡಿರುವ ಕೆಎಂಎಫ್ ನಂದಿನಿ ಬ್ರ್ಯಾಂಡ್ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಛಾಪು ಮೂಡಿಸುತ್ತಿದೆ. ತನ್ನ ಶುದ್ಧತೆ, ರುಚಿ, ಉತ್ತಮ ಸೇವೆಯಿಂದಾಗಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೇ ಕಾರಣದಿಂದ ಕೆಎಂಎಫ್ ನಂದಿನಿ ವಿದೇಶಗಳಲ್ಲೂ ತನ್ನ ವ್ಯಾಪಾರವನ್ನು ವಿಸ್ತರಿಸಲು ಸಾಧ್ಯವಾಗಿದೆ.
ಈಗಾಗಲೇ ನಂದಿನಿ ಉತ್ಪನ್ನಗಳು ವಿದೇಶಗಳಿಗೂ ರಫ್ತಾಗುತ್ತಿದ್ದು, ಮಧ್ಯಪ್ರಾಚ್ಯದ ದೇಶಗಳಾದ ದುಬೈ, ಕತಾರ್, ಇರಾನ್ ಹಾಗೂ ಇತರ ಗಲ್ಫ್ ದೇಶಗಳಲ್ಲಿ ವ್ಯಾಪಾರ ನಡೆಸುತ್ತಿದೆ. ಅಷ್ಟೇ ಅಲ್ಲದೇ ಸಿಂಗಾಪುರ, ಬಾಂಗ್ಲಾದೇಶ, ಆಫ್ರಿಕಾಲ್ಲೂ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಕೆಎಂಎಫ್ ನಂದಿನಿ ಸದ್ಯ ಭಾರೀ ಪ್ರಶಂಸೆ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ.
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗಾಗಲೇ ಒಟ್ಟು 25 ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ಥಿತ್ವ ಗಿಟ್ಟಿಸಿಕೊಂಡಿದೆ. ಇದರಲ್ಲಿ ಟೆಟ್ರಾ ಪ್ಯಾಕ್ ಹಾಲು, ಆಹಾರ ಉತ್ಪನ್ನಗಳು ಸಹ ಸೇರಿಕೊಂಡಿದೆ. ನಂದಿನಿಯ ಈ ಅಂತರರಾಷ್ಟ್ರೀಯ ಬೆಳವಣಿಗೆ ಕರ್ನಾಟಕದ ಗ್ರಾಮೀಣ ಭಾಗದ ರೈತರಿಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ. ಅಲ್ಲದೇ ಕೆಎಂಎಫ್ ಒಂದು ಬ್ರ್ಯಾಂಡ್ ಮಾತ್ರವಲ್ಲದೇ, ಕರ್ನಾಟಕದ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಿದೆ.


Click it and Unblock the Notifications