ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಎಂಸಿಎ ಪಿಎಂ ಇಂಟರ್ನ್‌ಶಿಪ್ ಸ್ಕೀಮ್ 2024 ರ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಿದೆ. ಇಂಟರ್ನ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಮತ್ತಷ್ಟು ಸಮಯಾವಕಾಶ ಸಿಕ್ಕಿದ್ದು, ನೋಂದಣಿ ಮಾಡಲು ಇಚ್ಚಿಸುವವರು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಸ್ಕೀಮ್‌ನ ಅಧಿಕೃತ ವೆಬ್‌ಸೈಟ್ pminternship.mca.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ಜಾಲತಾಣದಲ್ಲಿ "ನವೆಂಬರ್ 15ರವರೆಗೆ ನೋಂದಣಿಯನ್ನು ವಿಸ್ತರಣೆ ಮಾಡಲಾಗಿದೆ. ನಿಮ್ಮ ಭವಿಷ್ಯವನ್ನು ರೂಪಿಸಲು ಈ ಅವಕಾಶವನ್ನು ಬಳಸಿಕೊಳ್ಳಿ! ನವೀಕರಣಗಳಿಗಾಗಿ ಪೋರ್ಟಲ್, ಇಮೇಲ್ ಮತ್ತು ಫೋನ್ ಅನ್ನು ನಿಯಮಿತವಾಗಿ ಪರಿಶೀಲನೆ ಮಾಡಿ. ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ, ಯಾವುದೇ ನೋಂದಣಿ ಅಥವಾ ಅರ್ಜಿ ಶುಲ್ಕಗಳಿಲ್ಲ" ಎನ್ನುವ ಸಂದೇಶ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಮೊದಲನೆಯದಾಗಿ ಪಿಎಂ ಇಂಟರ್ನ್‌ಶಿಪ್ ಯೋಜನೆಯ ಅಧಿಕೃತ ವೆಬ್‌ಸೈಟ್ pminternship.mca.gov.in ನಲ್ಲಿ ಭೇಟಿ ನೀಡಿ.
ರಿಜಿಸ್ಟರ್ ಲಿಂಕ್ ಅನ್ನು ಕ್ಲಿಕ್ ಮಾಡಿ ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ.
ನೋಂದಣಿ ವಿವರಗಳನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.
ಅಭ್ಯರ್ಥಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪೋರ್ಟಲ್ ಮೂಲಕ ರೆಸ್ಯೂಮ್ (ಸ್ವ ವಿವರ) ರಚಿಸಲಾಗುತ್ತದೆ.
ಸ್ಥಳ, ವಲಯ, ಕ್ರಿಯಾತ್ಮಕ ಪಾತ್ರ ಮತ್ತು ಅರ್ಹತೆಗಳ ಆಧಾರದ ಮೇಲೆ 5 ಇಂಟರ್ನ್‌ಶಿಪ್ ಅವಕಾಶಗಳಿಗಾಗಿ ಅರ್ಜಿ ಸಲ್ಲಿಸಬಹುದು.
ಒಮ್ಮೆ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ ಮತ್ತು ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಭವಿಷ್ಯದ ಉಪಯೋಗಕ್ಕಾಗಿ ಹಾರ್ಡ್ ಕಾಪಿಯನ್ನು ಜೋಪಾನವಾಗಿ ಇಟ್ಟುಕೊಳ್ಳಲು ಸೂಚನೆ ನೀಡಲಾಗಿದೆ.
ಏನಿದು ಪಿಎಂ ಇಂಟರ್ನ್‌ಶಿಪ್ ಯೋಜನೆ?
ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆಯು ಕೌಶಲ್ಯ ಅಭಿವೃದ್ಧಿ, ಅಪ್ರೆಂಟಿಸ್‌ಶಿಪ್‌ಗಳು, ಇಂಟರ್ನ್‌ಶಿಪ್ ಮತ್ತು ವಿದ್ಯಾರ್ಥಿ ತರಬೇತಿ ಕಾರ್ಯಕ್ರಮಗಳು ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ಅಸ್ತಿತ್ವದಲ್ಲಿರುವ ಯೋಜನೆಗಳಿಂದ ಪ್ರತ್ಯೇಕವಾಗಿದ್ದು, ಎಲ್ಲಾ ಕೇಂದ್ರ/ರಾಜ್ಯ ಯೋಜನೆಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ.
ಪಿಎಂ ಇಂಟರ್ನ್‌ಶಿಪ್ ಯೋಜನೆಯ ಅವಧಿಯು 12 ತಿಂಗಳುಗಳಾಗಿದೆ. 12 ತಿಂಗಳಿನಲ್ಲಿ ಇಂಟರ್ನ್‌ಶಿಪ್ ಅವಧಿಯ ಅರ್ಧದಷ್ಟು ಸಮಯವನ್ನು ಕೆಲಸದ ಅನುಭವ/ಉದ್ಯೋಗದ ವಾತಾವರಣದಲ್ಲಿ ಕಳೆಯಬೇಕಾಗುತ್ತದೆ.
ಅಧಿಕೃತ ಸೂಚನೆಯ ಪ್ರಕಾರ, ಐದು ವರ್ಷಗಳಲ್ಲಿ ಅಗ್ರ 500 ಕಂಪನಿಗಳಲ್ಲಿ ಒಂದು ಕೋಟಿ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ. 2024-25ರ ಆರ್ಥಿಕ ವರ್ಷಕ್ಕೆ ಕೇಂದ್ರವು ಉನ್ನತ ಕಂಪನಿಗಳಲ್ಲಿ 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.


Click it and Unblock the Notifications