ಕೇಂದ್ರ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯೂ ಒಂದು. ಪಿಎಂ ಕಿಸಾನ್ ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡಲು ವಿನ್ಯಾಸಗೊಳಿಸಲಾದ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ದೇಶದಲ್ಲಿ ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಹಲವಾರು ರೈತರು ಪ್ರಯೋಜನ ಪಡೆದಿದ್ದು, ಇದು ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ದೇಶದ ಎಲ್ಲಾ ಭೂಹಿಡುವಳಿ ಸಣ್ಣ ರೈತ ಕುಟುಂಬಗಳಿಗೆ ಹಣಕಾಸಿನ ನೆರವನ್ನು ನೀಡುತ್ತಿದೆ.ಈ ಯೋಜನೆಯಲ್ಲಿ ನೇರ ಲಾಭ ವರ್ಗಾವಣೆ(ಡಿಬಿಟಿ) ವ್ಯವಸ್ಥೆಯಡಿ ದೇಶದೆಲ್ಲೆಡೆಯಿರುವ ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗುತ್ತದೆ.
ಪ್ರಸ್ತುತ ಕೋಟ್ಯಂತರ ರೈತರು ಈ ಯೋಜನೆಗೆ ಸೇರುವ ಮೂಲಕ ಪ್ರತಿ ವರ್ಷ 6 ಸಾವಿರ ರೂಪಾಯಿಗಳ ಪ್ರಯೋಜನವನ್ನು ಪಡೆಯುತ್ತಿದ್ದು ಮುಂದಿನ ಸರದಿ 19 ನೇ ಕಂತಿನದ್ದಾಗಿದೆ. ಹೀಗಾಗಿ ರೈತರು 19ನೇ ಕಂತಿನ ಹಣ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ರೈತರ ಕಾತರಕ್ಕೆ ಇದೀಗ ಉತ್ತರ ದೊರಕ್ಕಿದ್ದು, ಫೆ. 24 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಣವನ್ನು ರೈತರ ಖಾತೆಗೆ ವರ್ಗಾಯಿಸಲಿದ್ದಾರೆ. ಈ ವಿಚಾರವನ್ನು ಪಿಎಂ ಕಿಸಾನ್ ಸನ್ಮಾನ್ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 24 ರಂದು ಬಿಹಾರದ ಭಾಗಲ್ಪುರಕ್ಕೆ ಭೇಟಿ ನೀಡಲಿದ್ದುಈ ಸಮಯದಲ್ಲಿ, ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ ಜೊತೆಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದ ಸಮಯವನ್ನು ಅಧಿಕೃತ ಪೋರ್ಟಲ್‌ನಲ್ಲಿಯೂ ಉಲ್ಲೇಖಿಸಲಾಗಿದೆ. ಈ ಸಂಪೂರ್ಣ ಕಾರ್ಯಕ್ರಮವು ಮಧ್ಯಾಹ್ನ 2 ಗಂಟೆಯಿಂದ 3:30 ರವರೆಗೆ ನಡೆಯಲಿದ್ದು, ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ 19 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.
ಅಕ್ಟೋಬರ್ 5 ರಂದು 18 ನೇ ಕಂತು ಬಿಡುಗಡೆಯಾದರೆ, ಈಗ 19 ನೇ ಕಂತು ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಂತಿನ ಹಣವನ್ನು ವರ್ಗಾಯಿಸಲಿದ್ದಾರೆ. ಅದೇ ಸಮಯದಲ್ಲಿ, 9.7 ಕೋಟಿ ಅರ್ಹ ರೈತರು 19 ನೇ ಕಂತಿನ ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ತಲಾ 2,000 ರೂ.ಗಳನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳನ್ನು ಪಡೆಯುತ್ತಾರೆ ಅಂದರೆ ವಾರ್ಷಿಕವಾಗಿ 6,000 ರೂ. ಹಣ ಡಿಬಿಟಿ ಮೂಲಕ ಸರ್ಕಾರ ರೈತರ ಖಾತೆಗೆ ವರ್ಗಾಯಿಸುತ್ತರೆ. ವಾರ್ಷಿಕವಾಗಿ ನೋಡುವುದಾದರೆ ಮೂರು ಸಮಾನ ಕಂತುಗಳಲ್ಲಿ ಪ್ರತಿ ವರ್ಷ ನೀಡಲಾಗುತ್ತದೆ. ಈ ಯೋಜನೆಯನ್ನು ಫೆಬ್ರವರಿ 24, 2019 ರಂದು ಕೇಂದ್ರ ಸರ್ಕಾರ ಆರಂಭಿಸಿದ್ದು 2019 ರ ಮಧ್ಯಂತರ ಬಜೆಟ್‌ನಲ್ಲಿ ಆಗಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಘೋಷಿಸಿದ್ದರು. ಇದು ಈಗ ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಯಾಗಿದೆ.
ಪಿಎಂ ಕಿಸಾನ್ 19ನೇ ಕಂತು: ಅರ್ಹತೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಗೆ ಬೇಕಾದ ಅರ್ಹತೆಗಳು
ಭಾರತೀಯ ನಾಗರಿಕನಾಗಿರಬೇಕು.
ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು
ಸಾಗುವಳಿ ಭೂಮಿಯ ಮಾಲೀಕತ್ವ ಹೊಂದಿರಬೇಕು
ತಿಂಗಳಿಗೆ ಕನಿಷ್ಠ 10,000 ರೂಪಾಯಿ ಪಿಂಚಣಿ ಪಡೆಯುವ ನಿವೃತ್ತರಾಗಿರಬಾರದು.
ಆದಾಯ ತೆರಿಗೆಗೆ ಪಾವತಿಸುವ ವ್ಯಕ್ತಿಗಳಾಗಿರಬಾರದು
ಸಾಂಸ್ಥಿಕ ಭೂಮಾಲೀಕರಾಗಿರಬಾರದು
ರೈತ ಗುರುತಿನ ಚೀಟಿ ಕಡ್ಡಾಯ:
ಪಿಎಂ-ಕಿಸಾನ್ ಯೋಜನೆಗೆ ಸೇರ್ಪಡೆಗೊಳಿಸುವ ಹೊಸ ಅರ್ಜಿದಾರರಿಗೆ "ರೈತ ಗುರುತಿನ ಚೀಟಿ"ಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಪ್ರಧಾನಮಂತ್ರಿ-ಕಿಸಾನ್ ನೇರ ನಗದು ವರ್ಗಾವಣೆ ಕಾರ್ಯಕ್ರಮದ ಅಡಿಯಲ್ಲಿ ಹೊಸ ಅರ್ಜಿದಾರರ ನೋಂದಣಿ ಪ್ರಕ್ರಿಯೆಯಲ್ಲಿ ಕೇಂದ್ರ ಕೃಷಿ ಸಚಿವಾಲಯವು ಪ್ರಮುಖ ಬದಲಾವಣೆಯನ್ನು ಈ ಹಿಂದೆ ಪ್ರಕಟಿಸಿದ್ದು, ಹೀಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ 'ಕಿಸಾನ್ ಪೆಹಚಾನ್ ಪತ್ರ' ಎಂದು ಕರೆಯಲಾಗುವ "ವಿಶಿಷ್ಟ ರೈತ ಐಡಿ" ಕಡ್ಡಾಯವಾಗಿದೆ.
ಕಿಸಾನ್ ಪೆಹಚಾನ್ ಪತ್ರ, ಅಥವಾ ಡಿಜಿಟಲ್ ಫಾರ್ಮರ್ ಐಡಿ, ನಿಜವಾದ ಭೂ-ಮಾಲೀಕ ರೈತರು ಮಾತ್ರ ರೈತ ಕಲ್ಯಾಣ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ ಎಂದು ಖಾತ್ರಿ ಪಡೆಯಲು ವಿನ್ಯಾಸಗೊಳಿಸಲಾದ ಅನನ್ಯ ಗುರುತಿನ ವ್ಯವಸ್ಥೆಯಾಗಿದೆ. ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆ ಇದು ಹೊಂದಿದ್ದು ಇದರಲ್ಲಿ ರೈತನ ಹೆಸರು, ಭೂಮಿಯ ಮಾಹಿತಿ, ಆ ಭೂಮಿಯಲ್ಲಿ ಬೆಳೆಯಲಾಗುತ್ತಿರುವ ಬೆಳೆ, ಕೃಷಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಇತರ ಸಂಬಂಧಿತ ಡೇಟಾ ಮತ್ತಿತರ ವಿವರಗಳನ್ನು ಇರುತ್ತವೆ.


Click it and Unblock the Notifications