ಪ್ರಧಾನಿ ಮೋದಿ ಅವರ ಇನ್‌ಸ್ಟಾಗ್ರಾಂ ಅಕೌಂಟ್‌ಗೆ 100 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೊಂದು ಹೊಸ ಸಾಧನೆಯಾಗಿದೆ. ಏಕೆಂದರೆ 100 ಮಿಲಿಯನ್ ಫಾಲೋವರ್ಸ್ ಮೈಲಿಗಲ್ಲನ್ನು ತಲುಪಿದ ಮೊದಲ ವಿಶ್ವ ನಾಯಕ ಮತ್ತು ರಾಜಕಾರಣಿಯಾಗಿದ್ದಾರೆ ಪ್ರಧಾನಿ ಮೋದಿ. ಈ ಸಾಧನೆಯ ಮೂಲಕ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಪ್ರಭಾವ ಹೊಂದಿರುವ ಪ್ರಮುಖ ಚುನಾಯಿತ ನಾಯಕನಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು 2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಅದೇ ವರ್ಷ ಇನ್ಸ್ಟಾಗ್ರಾಮ್ಗೆ ಸೇರಿದರು. ಕಳೆದ ಹತ್ತು ವರ್ಷಗಳಲ್ಲಿ ಅವರ ಖಾತೆ ಸರ್ಕಾರದ ಕಾರ್ಯಕ್ರಮಗಳು, ವಿದೇಶಾಂಗ ಭೇಟಿಗಳು, ಸಾಂಸ್ಕೃತಿಕ ಹಬ್ಬಗಳು ಹಾಗೂ ವೈಯಕ್ತಿಕ ಕ್ಷಣಗಳನ್ನು ಹಂಚಿಕೊಳ್ಳುವ ಪ್ರಮುಖ ವೇದಿಕೆಯಾಗಿಯೇ ರೂಪುಗೊಂಡಿದೆ. ಸಾಮಾನ್ಯ ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಅವರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.
ಪ್ರಸ್ತುತ ಇನ್ಸ್ಟಾಗ್ರಾಮ್ನಲ್ಲಿ ಮೋದಿಯವರ ಅನುಯಾಯಿಗಳ ಸಂಖ್ಯೆ ಇತರ ವಿಶ್ವ ನಾಯಕರಿಗಿಂತ ಬಹಳ ಹೆಚ್ಚಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 43 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಇತರ ನಾಯಕರ ಸಂಖ್ಯೆಗಳು ಇದಕ್ಕಿಂತ ಕಡಿಮೆ. ಇಂಡೋನೇಷ್ಯಾದ ಪ್ರಬೋವೊ ಸುಬಿಯಾಂಟೊ, ಬ್ರೆಝಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮತ್ತು ಅರ್ಜೆಂಟಿನಾ ಅಧ್ಯಕ್ಷ ಜೇವಿಯರ್ ಮಿಲೀ ಅವರ ಅನುಯಾಯಿಗಳ ಸಂಖ್ಯೆಯೂ ಮೋದಿಯವರಿಗಿಂತ ಬಹಳ ಕಡಿಮೆ.
ಭಾರತದೊಳಗೂ ಈ ಅಂತರ ಸ್ಪಷ್ಟವಾಗಿ ಕಾಣುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಲಕ್ಷಾಂತರ ಅನುಯಾಯಿಗಳಿದ್ದರೂ, ಅವರ ಸಂಖ್ಯೆಗಳು ಮೋದಿಯವರಿಗಿಂತ ಬಹಳ ಹಿಂದಿವೆ.
ಇದಕ್ಕೂ ನಡುವೆ ಪ್ರಧಾನಿ ಮೋದಿ ಇಸ್ರೇಲ್ಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅವರು ಇಸ್ರೇಲ್ ಸಂಸತ್ತಾದ ನೆಸ್ಸೆಟ್ನಲ್ಲಿ ಭಾಷಣ ಮಾಡಿದರು. ಭಾರತ-ಇಸ್ರೇಲ್ ಸಂಬಂಧಗಳನ್ನು ಬಲಪಡಿಸಲು ನೀಡಿದ ಕೊಡುಗೆಯನ್ನು ಗಮನಿಸಿ ಅವರಿಗೆ "ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ" ಎಂಬ ಅತ್ಯುನ್ನತ ಗೌರವ ನೀಡಲಾಯಿತು. ಭಾಷಣದ ನಂತರ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಗಮನಾರ್ಹವಾಗಿತ್ತು. ಅನೇಕ ಸದಸ್ಯರು ಅವರೊಂದಿಗೆ ಛಾಯಾಚಿತ್ರಗಳು ಮತ್ತು ಸೆಲ್ಫಿಗಳನ್ನು ತೆಗೆಸಿಕೊಂಡರು.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಭಾರತ ಮತ್ತು ಇಸ್ರೇಲ್ ನಡುವಿನ ಐತಿಹಾಸಿಕ ಹಾಗೂ ನಾಗರಿಕ ಸಂಬಂಧಗಳನ್ನು ಉಲ್ಲೇಖಿಸಿದರು. ಎರಡು ದೇಶಗಳ ಸಂಪರ್ಕವು ಸಾವಿರಾರು ವರ್ಷಗಳ ಹಿಂದೆಯೇ ಆರಂಭವಾಗಿತ್ತು ಎಂದು ಅವರು ಹೇಳಿದರು. ಪ್ರಾಚೀನ ಗ್ರಂಥಗಳಲ್ಲಿ ಭಾರತ ಉಲ್ಲೇಖವಾಗಿರುವುದನ್ನು ಅವರು ಸ್ಮರಿಸಿದರು. ಈ ಮೂಲಕ ಸಮಕಾಲೀನ ರಾಜತಾಂತ್ರಿಕ ಸಂಬಂಧಗಳನ್ನು ಐತಿಹಾಸಿಕ ನಂಟಿನೊಂದಿಗೆ ಜೋಡಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಒಟ್ಟಾರೆ, ಸಾಮಾಜಿಕ ಮಾಧ್ಯಮದಲ್ಲಿ 100 ಮಿಲಿಯನ್ ಅನುಯಾಯಿಗಳನ್ನು ದಾಟಿರುವುದು ಹಾಗೂ ಇಸ್ರೇಲ್ನಲ್ಲಿ ದೊರೆತ ಗೌರವವು ಪ್ರಧಾನಿ ಮೋದಿ ಅವರ ಜಾಗತಿಕ ಪ್ರಭಾವ ಮತ್ತು ನಾಯಕತ್ವವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ಡಿಜಿಟಲ್ ಯುಗದಲ್ಲಿ ಜನರೊಂದಿಗೆ ನೇರ ಸಂಪರ್ಕ ಹೊಂದುವ ಸಾಮರ್ಥ್ಯವು ರಾಜಕೀಯ ನಾಯಕರಿಗೆ ಎಷ್ಟು ಮಹತ್ವದ್ದೆಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.


Click it and Unblock the Notifications