ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆಯು ಜನರಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿರುವುದು ಮಾತ್ರವಲ್ಲದೇ ಜನರನ್ನು ಸ್ವಾವಲಂಭಿಗಳನ್ನಾಗಿಯೂ ಮಾಡುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಅಗತ್ಯವಾದ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಮಾರ್ಗಸೂಚಿಗಳಲ್ಲಿ ಇದೀಗ ಸರ್ಕಾರವು ಒಂದಷ್ಟು ಬದಲಾವಣೆಗಳನ್ನು ಮಾಡಿದ್ದು ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲು ಸುಲಭವಾಗುವಂತೆ ಸರ್ಕಾರವು ನಿಯಮದಲ್ಲಿ ಅನೇಕ ಅಪ್ಡೇಟ್ ಗಳನ್ನು ಮಾಡಿದೆ. ಈ ಯೋಜನೆಯಡಿಯಲ್ಲಿ, ಕುಟುಂಬಗಳು ಪ್ರತಿ ತಿಂಗಳು 300 ಯುನಿಟ್‌ಗಳ ಉಚಿತ ವಿದ್ಯುತ್ ಅನ್ನು ಪಡೆಯಬಹುದು ಮತ್ತು ಅವರ ಮನೆಗಳ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು 78,000 ರೂಪಾಯಿಗಳವರೆಗೆ ಸಬ್ಸಿಡಿ ಪಡೆಯಬಹುದು.
ಸೌರ ಫಲಕಗಳ ಸ್ಥಾಪನೆಯನ್ನು ಹೆಚ್ಚು ಸುಲಭವಾಗಿಸಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ ಎರಡು ಹೊಸ ಪಾವತಿ ಆಯ್ಕೆಗಳನ್ನು ಅನುಮೋದಿಸಿದೆ. ಇದರರ್ಥ ಜನರು ಈಗ ಯಾವುದೇ ಹಣವನ್ನು ಮುಂಗಡವಾಗಿ ಖರ್ಚು ಮಾಡದೆಯೇ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು. ಯೋಜನೆಯ ಲಾಭ ಪಡೆಯುವವರು ಸೌರ ಫಲಕಗಳನ್ನು ಅಳವಡಿಸುವಾಗ ಆರ್ಥಿಕ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳುವುದು ಗುರಿಯಾಗಿದೆ.

ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಪ್ರಯೋಜನಗಳನ್ನು ಪಡೆಯುವುದು ಇನ್ನಷ್ಟು ಸುಲಭವಾಗಿದ್ದು. ಸರ್ಕಾರವು ಈ ಯೋಜನೆಯಲ್ಲಿ ಎರಡು ಹೊಸ ಪಾವತಿ ಮಾದರಿಗಳನ್ನು ಸೇರಿಸಿದೆ, ಇದರ ಮೂಲಕ ಒಂದು ಪೈಸೆ ಖರ್ಚು ಮಾಡದೆ ನಿಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಬಹುದಾಗಿದೆ.
ಹೊಸ ಪಾವತಿ ಮಾದರಿಗಳು
ರೆಸ್ಕೋ ಮಾದರಿ: ಈ ಮಾದರಿಯ ಅಡಿಯಲ್ಲಿ, ಥರ್ಡ್ ಪಾರ್ಟಿ ಸಂಸ್ಥೆಯು ಯಾವುದೇ ವೆಚ್ಚವಿಲ್ಲದೆ ನಿಮ್ಮ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸುತ್ತದೆ. ಇಲ್ಲಿ ಸೋಲಾರ್ ಪ್ಯಾನೆಲ್‌ನಿಂದ ಬಳಸುವ ವಿದ್ಯುತ್‌ಗೆ ಮಾತ್ರ ನೀವು ಪಾವತಿಸಬೇಕಾಗುತ್ತದೆ.
ULA ಮಾದರಿ: ಈ ಮಾದರಿಯಲ್ಲಿ, ವಿದ್ಯುತ್ ಕಂಪನಿಗಳು ಅಥವಾ ರಾಜ್ಯ-ನಾಮನಿರ್ದೇಶಿತ ಸಂಸ್ಥೆಗಳು ಯಾವುದೇ ಶುಲ್ಕವಿಲ್ಲದೆ ನಿಮ್ಮ ಮನೆಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುತ್ತವೆ. ಇದು ನಿಮಗೆ ಅಗ್ಗದ ವಿದ್ಯುತ್ ಲಾಭವನ್ನು ನೀಡುತ್ತದೆ.
ಸಬ್ಸಿಡಿಯ ವಿವರ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಸೂರ್ಯ ಘರ್ ಯೋಜನೆಯಲ್ಲಿ ಸರ್ಕಾರವು ಸೌರ ಶಕ್ತಿಯನ್ನು ಪ್ರೋತ್ಸಾಹಿಸಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಈ ಯೋಜನೆಯಡಿಯಲ್ಲಿ, ಜನರು ತಮ್ಮ ಮನೆಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಿದರೆ, ಸರ್ಕಾರ ಅವರಿಗೆ ಹಣವನ್ನು ನೀಡುತ್ತದೆ. ಉದಾಹರಣೆಗೆ, 2 ಕಿಲೋವ್ಯಾಟ್‌ಗಳ ಸೌರ ಫಲಕಕ್ಕೆ 30,000 ರೂಪಾಯಿ, 3 ಕಿಲೋವ್ಯಾಟ್‌ಗೆ 48,000 ರೂಪಾಯಿ ಮತ್ತು 3 ಕಿಲೋವ್ಯಾಟ್‌ಗಿಂತ ಹೆಚ್ಚಿನ ಸ್ಥಾಪನೆಗಳಿಗೆ 78,000 ರೂಪಾಯಿಗಳನ್ನು ಸರ್ಕಾರ ನೀಡುತ್ತದೆ. ಈ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಈ ಯೋಜನೆಯು ಕಡಿಮೆ ಮತ್ತು ಮಧ್ಯಮ-ಆದಾಯದ ಕುಟುಂಬಗಳಿಗೆ ಪ್ರಯೋಜನಕಾರಿಯಾಗಿದ್ದು ಇದು ವಿದ್ಯುತ್ ಮೇಲೆ ಸ್ವಾವಲಂಬನೆಯನ್ನು ನೀಡುತ್ತದೆ. ಜೊತೆಗೆ ಭಾರತದಲ್ಲಿ ಶುದ್ಧ ಶಕ್ತಿಯ ಬಳಕೆಯನ್ನು ಉತ್ತೇಜಿಸುತ್ತದೆ. ಸೌರಶಕ್ತಿ ಅಳವಡಿಕೆಗೆ ಉತ್ತೇಜನ ನೀಡುವ ಮೂಲಕ, ಸರ್ಕಾರವು ದೇಶಕ್ಕೆ ಹೆಚ್ಚು ಸಮರ್ಥನೀಯ ಮತ್ತು ಶಕ್ತಿ-ಸ್ವತಂತ್ರ ಭವಿಷ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಮಾಸಿಕ 300 ಯುನಿಟ್‌ನಷ್ಟು ವಿದ್ಯುತ್ತನ್ನು ಉಚಿತವಾಗಿ ಬಳಕೆ ಮಾಡಿಕೊಂಡು ಉಳಿದಿದ್ದನ್ನು ವಿದ್ಯುತ್ ವಿತರಣಾ ಸಂಸ್ಥೆಗೆ ಮಾರಾಟ ಮಾಡಬಹುದಾಗಿದೆ.


Click it and Unblock the Notifications