ಹೊಸ ವರ್ಷ (New Year) ಆರಂಭವಾಗುತ್ತಿದ್ದಂತೆ ಬೆಂಗಳೂರಿನ ಅಭಿವೃದ್ಧಿ ಕಾರ್ಯ ಶುರುವಾಯ್ತು ನೋಡಿ. ಸಾರ್ವಜನಿಕರ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ, ಮಹಾನಗರ ಪಾಲಿಕೆ, ಜಲಮಂಡಳಿ, ಬೆಸ್ಕಾಂ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ವಿದ್ಯುತ್ ಪೂರೈಕೆಯನ್ನು ಮತ್ತಷ್ಟು ಗುಣಮಟ್ಟಗೊಳಿಸುವ ಉದ್ದೇಶದಿಂದ ಬೆಸ್ಕಾಂ (BESCOM) ಇಲಾಖೆ ನಗರದ ಪ್ರಮುಖ ಪ್ರದೇಶಗಳಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿದೆ. ಈ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜನವರಿ 3 ರಿಂದ 17 ದಿನಗಳ ಕಾಲ ವಿದ್ಯುತ್ ಕಡಿತ (Power Cut) ಉಂಟಾಗಲಿದೆ.

ಬೆಸ್ಕಾಂ ಇಲಾಖೆಯ ಸೂಚನೆ ಪ್ರಕಾರ, ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ಅಂದರೆ, ಜನವರಿ 3 ರಿಂದ 17 ದಿನಗಳ ಕಾಲ ಪವರ್ ಕಟ್ ಆಗಲಿದೆ ಎಂದು ವರದಿಯಾಗಿದೆ. EPIP ಸಬ್‌ಸ್ಟೇಷನ್‌ನಲ್ಲಿರುವ 31.5 MVA ವಿದ್ಯುತ್ ಟ್ರಾನ್ಸ್‌ಫಾರ್ಮರ್ 3 ರ ರೆಟ್ರೋಫಿಲ್ಲಿಂಗ್ ಮತ್ತು ನಿರ್ವಹಣಾ ಕಾರ್ಯಗಳನ್ನು ಬೆಸ್ಕಾಂ ಇಲಾಖೆ ಕೈಗೊಂಡಿದೆ. ಆದ್ದರಿಂದ ದೀರ್ಘಾವಧಿಯ ಗುಣಮಟ್ಟದ ಸೇವೆಗೆ ಬೆಸ್ಕಾಂ ಈ ಕಾಮಗಾರಿ ಕೈಗೊಂಡಿದೆ ಎನ್ನಲಾಗಿದೆ.
17 ದಿನ ಇರಲ್ಲ ಕರೆಂಟ್!
ಜನವರಿ 3, ಶನಿವಾರದಿಂದ ಜನವರಿ 19, ಸೋಮವಾರದವರೆಗೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ. ಇದು ನಿರಂತರ ಸ್ಥಗಿತವಿಲ್ಲದೆ, ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗಳು ಕಂಡುಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನಗರದ ಹಲವು ಐಟಿ ಪಾರ್ಕ್‌ಗಳು, ವಾಣಿಜ್ಯ ಹಾಗೂ ಕೈಗಾರಿಕಾ ವಲಯಗಳು, ಮತ್ತು ಸುತ್ತಮುತ್ತಲಿನ ವಸತಿಗಳಿಗೆ ಈ ವಿದ್ಯುತ್ ಕಡಿತದ ಪರಿಣಾಮ ತಟ್ಟಲಿದೆ.
ಎಲ್ಲೆಲ್ಲಿ ಇರಲ್ಲ ಕರೆಂಟ್?
ನಿರ್ದಿಷ್ಟವಾಗಿ, EPIP ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, L&TRMZ ನೆಕ್ಸ್ಟ್, ರಾಗಿಹಳ್ಳಿ-ಸಿದ್ದಾಪುರ ಗೇಟ್, EPIP ಲೇಔಟ್, TCS ಸಾಫ್ಟ್‌ವೇರ್, SJR ಟೆಕ್ ಪಾರ್ಕ್ (EPIP ಲೇಔಟ್), M/S VSNL ಫೀಡರ್, ರಿಲಯನ್ಸ್ (ಬಿಗ್ ಬಜಾರ್), ಓರಿಯೆಂಟಲ್ ಹೋಟೆಲ್, ಏರ್‌ಟೆಲ್, ಬುಶ್ರಾ ಟೆಕ್ ಪಾರ್ಕ್ (EPIP ಲೇಔಟ್), ಗೋಪಾಲನ್ ಎಂಟರ್‌ಪ್ರೈಸಸ್, ಸಾದಾ ಟೆಕ್ ಪಾರ್ಕ್ (EPIP ಲೇಔಟ್), ಕ್ವಾಲ್‌ಕಾಮ್, ಕ್ವಾಲ್‌ಕಾಮ್-2, GE BE ಕಂಪನಿ ಮತ್ತು ಬಾಗಮನೆ ನಿಯಾನ್ ಬ್ಲಾಕ್‌ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ವರದಿಯಾಗಿದೆ.
ಇದಲ್ಲದೆ, ಜನವರಿ 2 ರಂದು ಸಹ ಬೆಂಗಳೂರಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಬೆಸ್ಕಾಂ, ಅಗತ್ಯ ನಿರ್ವಹಣೆ ಮತ್ತು ಹೊಸ ಯಂತ್ರಗಳ ಅಳವಡಿಸುವ ಕಾರ್ಯ ಕೈಗೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು.
ಸಾರ್ವಜನಿಕರಿಗೆ ಸಲಹೆ:
ನಗರದ ಕೆಲವು ಪ್ರದೇಶಗಳಲ್ಲಿ ಮಾತ್ರ ವಿದ್ಯುತ್ ಕಡಿತ ಉಂಟಾಗಲಿದ್ದು, ಆಯಾ ಪ್ರದೇಶದ ಜನರು ತಮ್ಮ ಅಗತ್ಯ ಕೆಲಸಗಳನ್ನು ಮೊದಲೇ ಪ್ಲಾನ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಮೊಬೈಲ್ ಚಾರ್ಜ್ ಮಾಡುವುದಾಗಲಿ, ಲ್ಯಾಪ್‌ಟಾಪ್, ಅಡುಗೆ ಹೀಗೆ ಅಗತ್ಯ ಕೆಲಸಗಳನ್ನು ಬಾಧಿತ ದಿನಗಳಲ್ಲಿ ಮೊದಲೇ ಮಾಡಿ ಮುಗಿಸಿದರೆ ಉತ್ತಮ.


Click it and Unblock the Notifications