ಇನ್ನೇನು ಕೆಲವಾರಗಳಲ್ಲಿ 2025ರ ಹೊಸವರ್ಷವನ್ನು ಎದುರುಗೊಳ್ಳಲು ನಾವೆಲ್ಲಾ ಸಿದ್ದರಾಗಿದ್ದೇವೆ. ಇದಕ್ಕಾಗಿ ರಾಜ್ಯ ರಾಜಧಾನಿ ಬೆಂಗಳೂರು ಕೂಡಾ ಸಜ್ಜಾಗಿ ನಿಂತಿದೆ. ಡಿ 31ರಂದು ರಾತ್ರಿ ಹಳೆ ವರ್ಷಕ್ಕೆ ವಿದಾಯ ಹೇಳಿ, ಹೊಸವರ್ಷ ಬರ ಮಾಡಿಕೊಳ್ಳುವ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಲಿದೆ. ಹೊಸ ವರ್ಷದ ಹಿನ್ನಲೆಯಲ್ಲಿ ಐಟಿ ಕಂಪನಿಗಳ ನಗರವಾಗಿರುವ ಬೆಂಗಳೂರು ವ್ಯಾಪಾರದ ದೃಷ್ಟಿಯಿಂದ ಕೂಡ ಗಮನಾರ್ಹ ಬದಲಾವಣೆಗಳನ್ನು ಕಾಣಲಿದೆ.
ನಗರದ ವಿವಿಧ ಭಾಗಗಳಲ್ಲಿ ಹೊಸ ವರ್ಷಕ್ಕೆ ವಿಶೇಷ ಕಾರ್ಯಕ್ರಮಗಳು ಮತ್ತು ಸಂಭ್ರಮವನ್ನು ಆಯೋಜಿಸಲಾಗುತ್ತಿದೆ. ಅನೇಕ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಗಳು ನಗರದ ಬೇರೆ ಬೇರೆ ಭಾಗದಲ್ಲಿ ಲೈಟ್ ಡಿಸ್ಪ್ಲೇ, ಪಾರ್ಟಿಗಳು, ಸಂಗೀತ ಕಚೇರಿಗಳು, ಡಾನ್ಸ್ ಫ್ಲೋರ್ ಗಳು ಮತ್ತು ಮೆಗಾ ಡಿಜೆ ಪಾರ್ಟಿಗಳನ್ನು ಆಯೋಜಿಸುವುದರ ತಯಾರಿಯಲ್ಲಿ ತೊಡಗಿದೆ. ಕೊರೊನಾ ಬಳಿಕ ಕಳೆದೆರಡು ವರ್ಷಗಳಿಂದ ಸಂಭ್ರಮದಿಂದ ನವ ವರ್ಷದ ಆಚರಣೆ ನಡೆಯುತ್ತಿದೆ.

ಹೊಸ ವರ್ಷದ ಸಂಭ್ರಮದಲ್ಲಿ, ಬೆಂಗಳೂರಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಗಳು ಈ ಬಾರಿ ಬಂಪರ್ ಆದಾಯವನ್ನು ನಿರೀಕ್ಷಿಸುತ್ತಿವೆ. ನಗರದ ಪ್ರಮುಖ ಹೋಟೆಲ್ ಗಳು ಹಾಗೂ ರೆಸ್ಟೋರೆಂಟ್ ಗಳು ಈಗಾಗಲೇ ಬುಕಿಂಗ್ ಗಳಿಂದ ತುಂಬಿವೆ. ವಿಶೇಷ ಡಿನ್ನರ್ ಗಳು, ಪಾರ್ಟಿಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಹೋಟೆಲ್ ಗಳು ಮುಂದಾಗುತ್ತಿವೆ.
ಎಲ್ಲೆಲ್ಲಿ ಸಿದ್ದತೆ?
ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ.ಜಿ. ರೋಡ್ ಹೊಸ ವರ್ಷದ ಆಚರಣೆಗೆ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಹೊಸವರ್ಷಕ್ಕೆ ರಂಗುರಂಗಿನ ದೀಪಾಲಂಕಾರ ಮಾಡಲಾಗುತ್ತದೆ. ಪಾರ್ಟಿ , ಪಬ್ , ಡಿಜೆ ಜೊತೆಗೆ ಈ ಪ್ರದೇಶಕ್ಕೆ ಯುವಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ.
ಇದಲ್ಲದೇ ಬ್ರೀಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಇತರ ಟೆಕ್ ಕಾರಿಡಾರ್ ಗಳು ಡಿ.೩೧ರಂದು ಪಾರ್ಟಿ ಮೂಡ್ ಗೆ ತೆರೆದುಕೊಳ್ಳುವತ್ತ ಸಿದ್ದತೆ ಮಾಡಿಕೊಳ್ಳುತ್ತವೆ ಪಬ್ ರೆಸ್ಟೋರೆಂಟ್ ಗಳು ಡಿಸೆಂಬರ್ 31ರ ಮಧ್ಯರಾತ್ರಿಯ ಪಾರ್ಟಿ, ವಿಶೇಷ ಚಟುವಟಿಕೆಗೆ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಈಗಲೇ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದೆ.
ಕೋಟ್ಯಾಂತರ ರೂಪಾಯಿ ವಹಿವಾಟು ನಿರೀಕ್ಷೆ
ಐಟಿ-ಬಿಟಿ ಸಿಟಿಯಲ್ಲಿ ನವ ವರ್ಷ ಸೆಲಬ್ರೇಟ್ ಮಾಡಲು ವಿದೇಶಗಳು, ಅನ್ಯ ರಾಜ್ಯಗಳು, ಹೊರ ಜಿಲ್ಲೆಗಳಿಂದ ಜನ ಹರಿದುಬರುವುದರಿಂದ ಪಬ್, ಪಾರ್ಟಿ ಲಾನ್, ಫಾರ್ಮ್ ಹೌಸ್, ಬಾರ್ ಆಂಡ್ ರೆಸ್ಟೋರೆಂಟ್ ಮುಂಗಡ ಬುಕ್ಕಿಂಗ್ ಆಗುವುದರ ಜೊತೆಗೆ ಸುಮಾರು ರಾಜ್ಯ ರಾಜಧಾನಿಯೊಂದರಲ್ಲೇ ಸರಿಸುಮಾರು 800 ರಿಂದ 1000 ಕೋಟಿ ರೂಪಾಯಿವರೆಗೆ ವಹಿವಾಟು ನಡೆಯುವ ನಿರೀಕ್ಷೆ ಇದೆ. ಇದರಲ್ಲಿ ಹೆಚ್ಚು ಕಡಿಮೆ 300 ಕೋಟಿ ರೂಪಾಯಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಂದಾಯವಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೋಟೆಲ್ ಉದ್ಯಮಕ್ಕೆ ಉತ್ತಮ ಆದಾಯ ಹರಿದುಬರುವ ನಿರೀಕ್ಷೆಯಿದೆ.
ಸಣ್ಣ ವ್ಯಾಪಾರಿಗಳಿಗೆ ಅವಕಾಶ:
ಹೊಸ ವರ್ಷದ ಸಂದರ್ಭದಲ್ಲಿ, ಬೆಂಗಳೂರಿನ ಸಣ್ಣ ವ್ಯಾಪಾರಿಗಳಿಗೂ ಅವಕಾಶಗಳು ಹೆಚ್ಚಾಗಿವೆ. ಹೂವುಗಳು, ಕೇಕ್‌ಗಳು, ಗಿಫ್ಟ್‌ಗಳು ಮತ್ತು ಇತರ ಸರಕುಗಳ ಮಾರಾಟದಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆ ಇದೆ.
ಇನ್ನು ಹೊಸವರ್ಷಾಚರಣೆಗೆ ಪೊಲೀಸ್ ಇಲಾಖೆಯು ಸಿದ್ದವಾಗಿದ್ದು, ನಗರಾದ್ಯಂತ ಕಟ್ಟೆಚ್ಚರ ವಹಿಸಿರುವ ಪೊಲೀಸ್ ಇಲಾಖೆ ತಡರಾತ್ರಿ 1ಗಂಟೆಯವರೆಗೆ ಸಂಭ್ರಮಾಚರಣೆಗೆ ಡೆಡ್ ಲೈನ್ ನಿಗದಿ ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೇಲ್ಸೇತುವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಮೇಲ್ಸೇತುವೆ ಗಳಲ್ಲಿ ಡಿ.31 ರಂದು ರಾತ್ರಿ 11 ಗಂಟೆಯಿಂದ ಮರುದಿನ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.


Click it and Unblock the Notifications