ಅದೆಷ್ಟೋ ಯುವಕರು ಪ್ರತಿದಿನ ಬೆಂಗಳೂರಿಗೆ (Bengaluru) ಉದ್ಯೋಗಕ್ಕಾಗಿ ಬರುತ್ತಾರೆ. ಇನ್ನೂ ಕೆಲವರು ಯಾವುದೋ ಕೆಲಸಕ್ಕಾಗಿಯೋ, ವ್ಯವಹಾರಕ್ಕಾಗಿಯೋ ಬೆಂಗಳೂರಿಗೆ ಬರುತ್ತಾರೆ. ಈ ವೇಳೆ ಬಹುತೇಕರು ಬಂದು ಇಳಿಯುವುದು ಬೆಂಗಳೂರಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ. ಬೆಂಗಳೂರಿನ ಅತಿದೊಡ್ಡ ಮತ್ತು ಪ್ರಮುಖ ಬಸ್ ನಿಲ್ದಾಣವೆಂದರೆ ಅದು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಅಥವಾ ಮೆಜೆಸ್ಟಿಕ್ ಬಸ್ ನಿಲ್ದಾಣ (Mejestic Bus Stand). ಇದು ನಗರದ ಹೃದಯಭಾಗದಲ್ಲಿದೆ. ಆದರೆ ಇದೀಗ ಈ ಐತಿಹಾಸಿಕ ಬಸ್ ನಿಲ್ದಾಣವೂ ಹೊಸ ನೋಟದೊಂದಿಗೆ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ಐತಿಹಾಸಿಕ ಕೆಂಪೇಗೌಡ ಬಸ್ ನಿಲ್ದಾಣ (Kempegowda Bus Stand) ಅಥವಾ ಮೆಜೆಸ್ಟಿಕ್ ಬಸ್ ನಿಲ್ದಾಣದ ಸುದ್ದಿ ಭಾರೀ ಹರಿದಾಡುತ್ತಿದೆ. ಹೌದು, ಇದೀಗ ಕೆಂಪೇಗೌಡ ಬಸ್ ನಿಲ್ದಾಣ ಹೊಸದಾಗಿ ಅಂದರೆ 1,500 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿದೆ ಎಂದು ವರದಿಯಾಗಿದೆ. ಭವಿಷ್ಯದಲ್ಲಿ ಸಾರಿಗೆ ಅಗತ್ಯಗಳನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣದ ಅಧ್ಯಯನಕ್ಕಾಗಿ ಹೊಸ ಸಂಸ್ಥೆಯ ನೇಮಕ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನವೆಂಬರ್ 14ರಂದು ಗುರುಗ್ರಾಮ್ ಮೂಲದ ರೆಸರ್ಜೆಂಟ್ ಇಂಡಿಯಾ ಲಿಮಿಟೆಡ್ ಸಂಸ್ಥೆಯನ್ನು ಕೂಡಾ ಈ ನಿರ್ಮಾಣ ಕಾರ್ಯಕ್ಕಾಗಿ ನೇಮಕ ಮಾಡಿದೆ. ಇದಕ್ಕಾಗಿ ₹6.5 ಕೋಟಿ ಮೌಲ್ಯದಲ್ಲಿ ಸಲಹೆ ನೀಡಲು ನಿಯೋಜಿಸಿದೆ. 2025-26ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಈ ಯೋಜನೆಗೆ ಸಂಬಂಧಿಸಿದಂತೆ, ಭೂ ಬಳಕೆಯ ಅಧ್ಯಯನ, ಸಂಚಾರ ಹರಿವಿನ ವಿಶ್ಲೇಷಣೆ (ಹೇಗೆ ಚಲಿಸಬೇಕು, ಎಷ್ಟು ವೇಗ) ಮತ್ತು ವಾಣಿಜ್ಯ ವ್ಯವಹಾರದ ಬಗ್ಗೆ ಈ ಸಂಸ್ಥೆ ಪರಿಶೀಲಿಸಲಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ನಡೆಯಲಿರುವ ಈ ಯೋಜನೆಯ ಕುರಿತಾದ ವರದಿಯು ಜನವರಿ ಅಂತ್ಯದ ವೇಳೆಗೆ ಸಿದ್ಧವಾಗಲಿದ್ದು, ನಂತರ ಸಚಿವ ಸಂಪುಟಕ್ಕೆ ವರದಿಯನ್ನು ಸಲ್ಲಿಸಿ, ನಂತರ ಅನುಮೋದನೆ ಪಡೆಯಲಾಗುತ್ತದೆ ಎನ್ನಲಾಗಿದೆ. ಆ ಬಳಿಕ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಖಾಸಗಿ ಪಾಲುದಾರರನ್ನು ಆಯ್ಕೆ ಮಾಡುವುದಕ್ಕಾಗಿ ಟೆಂಡರ್ ಕರೆಯುವ ನಿರೀಕ್ಷೆಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ ಎನ್ನಲಾಗಿದೆ.
32 ಎಕರೆಯಲ್ಲಿ ಅತ್ಯಾಧುನಿಕ ಬಸ್ ಟರ್ಮಿನಲ್!
ಯೋಜನೆಯ ಪ್ರಕಾರ, ಪ್ರಸ್ತುತ ಇರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳೆರಡನ್ನೂ ಕೆಡವಿ, ಒಟ್ಟು 32 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬಸ್ ಟರ್ಮಿನಲ್ ಮತ್ತು ವಾಣಿಜ್ಯ ಕೇಂದ್ರವನ್ನು ನಿರ್ಮಿಸಲಾಗುವುದು ಎಂದು ವರದಿಯಾಗಿದೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಅವರು ಈ ಯೋಜನೆಯನ್ನು ದೃಢಪಡಿಸಿದ್ದು, ಇದರ ಅಂದಾಜು ವೆಚ್ಚ 1,500 ಕೋಟಿ ರೂಪಾಯಿ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅಕ್ರಮ್ ಪಾಷಾ, "ಇದು ಇನ್ನೂ ಯೋಜನಾ ಹಂತದಲ್ಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಕಾರ್ಯವಿಧಾನಗಳನ್ನು ಅಂತಿಮಗೊಳಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ. ಈ ಪುನರಾಭಿವೃದ್ಧಿಯ ಪ್ರಮುಖ ಉದ್ದೇಶವೆಂದರೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಒಟ್ಟುಗೂಡಿಸುವುದು ಎಂದು ಹೇಳಲಾಗಿದೆ.
ಹಿರಿಯ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ಖಾಸಗಿ ಪಾಲುದಾರರು ಯೋಜನೆಯಲ್ಲಿ ಹೂಡಿಕೆ ಮಾಡಲಿದ್ದು, ಪರಸ್ಪರ ಒಪ್ಪಿದ ನಂತರವೇ ನಮ್ಮೊಂದಿಗೆ ಆದಾಯವನ್ನು ಹಂಚಿಕೊಳ್ಳುತ್ತಾರೆ. ನಾವು ಯಾವುದೇ ಹೂಡಿಕೆ ಮಾಡುವುದಿಲ್ಲ" ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಈ ಹೊಸ ಬಸ್ ನಿಲ್ದಾಣದ ಮೂಲಕ, ರೈಲು ನಿಲ್ದಾಣದ ಮೇಲ್ಛಾವಣಿಗೆ ನೇರ ಸಂಪರ್ಕ ಸೇರಿದಂತೆ, ಬಸ್ ನಿಲ್ದಾಣದ ಒಳಭಾಗದಲ್ಲಿ ಮೆಟ್ರೋ ಮತ್ತು ರೈಲು ನಿಲ್ದಾಣಗಳೊಂದಿಗೆ ನೇರವಾಗಿ ಸಂಪರ್ಕಿಸುವ ಯೋಜನೆ ಇದೆ ಎನ್ನಲಾಗಿದೆ. ಇದನ್ನೆಲ್ಲಾ ಸಲಹಾ ಸಂಸ್ಥೆಗಳು ಅಧ್ಯಯನ ಮಾಡಿ, ವರದಿ ನೀಡಲಿದೆ ಎನ್ನಲಾಗಿದೆ.
ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳ 32 ಎಕರೆ ಪ್ರದೇಶವನ್ನು ಪಿಪಿಪಿ ಮಾದರಿಯಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ಬಸ್, ರೈಲು, ಮೆಟ್ರೋ ಮತ್ತು ಉಪನಗರ ನಿಲ್ದಾಣಗಳನ್ನು ತಡೆರಹಿತ ಸಂಪರ್ಕಕ್ಕಾಗಿ ಒಟ್ಟುಗೂಡಿಸಲಾಗುತ್ತದೆ. ಖಾಸಗಿ ಏಜೆನ್ಸಿಗಳು ವಾಣಿಜ್ಯ ಸ್ಥಳಗಳನ್ನು ಅಲ್ಲಿ ನಿರ್ಮಿಸಿ ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಜೊತೆ ಆದಾಯವನ್ನು ಹಂಚಿಕೊಳ್ಳಲಿದೆ ಎನ್ನಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣದ ಸದ್ಯದ ಪರಿಸ್ಥಿತಿ
ಸದ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 80,000 ಕ್ಕೂ ಅಧಿಕ ಜನ ಓಡಾಡುತ್ತಾರೆ, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ 5 ಲಕ್ಷಕ್ಕೂ ಅಧಿಕ ಜನ ಓಡಾಡುತ್ತಾರೆ. ಒಟ್ಟು 11,150 ಬಸ್ಸುಗಳು ಪ್ರತಿದಿನ ಕಾರ್ಯನಿರ್ವಹಿಸುತ್ತವೆ. ಕೆಎಸ್‌ಆರ್‌ಟಿಸಿ 2,660 ಬಸ್‌ಗಳನ್ನು, ಇತರ ರಾಜ್ಯ ಆರ್.ಟಿ.ಸಿ.ಗಳು 283 ಬಸ್‌ಗಳನ್ನು ಮತ್ತು ಬಿಎಂಟಿಸಿ 8,200 ಬಸ್‌ಗಳನ್ನು ಓಡಿಸುತ್ತವೆ ಎಂದು ವರದಿಯಾಗಿದೆ. ಸದ್ಯ ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹೊಸದಾಗಿ ನಿರ್ಮಾಣವಾಗಲಿದ್ದು, ಹೊಸ ನೋಟವನ್ನು ನೀಡಲಿದೆ ಎನ್ನಲಾಗಿದೆ.


Click it and Unblock the Notifications