ಬೆಂಗಳೂರು: ಜನರ ಅಗತ್ಯ ಸೌಲಭ್ಯಗಳಲ್ಲಿ ಒಂದಾಗ ಅಡುಗೆ ಅನಿಲದ ಬೆಲೆ ಏರಿಕೆ ಸುದ್ದಿ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಈಗಾಗಲೇ ಹಲವು ಬೆಲೆ ಏರಿಕೆ ಬಿಸಿಯಿಂದ ಕಂಗಾಲಾಗಿರುವ ಜನರು, ಎಲ್‌ಪಿಜಿ ಗ್ಯಾಸ್ ಬೆಲೆ ಏರಿಕೆಯಾಗುವ (LPG Gas Price Hike) ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾರ್ಚ್ 7, 2026 ರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಭಾರೀ ಏರಿಕೆಯಾಗಿದೆ. ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ನಲ್ಲಿ 60 ರೂ. ಮತ್ತು ಕಮರ್ಷಿಯಲ್ ಸಿಲಿಂಡರ್‌ನಲ್ಲಿ (Commercial Gas) 114.50-115 ರೂ. ಹೆಚ್ಚಳವಾಗಿದೆ. ಈ ಎಲ್‌ಪಿಜಿ ಗ್ಯಾಸ್ ಬೆಲೆ ಏರಿಕೆ ಬೆನ್ನಲ್ಲೇ, ಇದೀಗ ಬೆಂಗಳೂರಿಗರಿಗೆ (Bengaluru) ಮತ್ತೊಂದು ದರ ಏರಿಕೆ ಶಾಕ್ ಎದುರಾಗುವ ಸಾಧ್ಯತೆ ಇದೆ.

ಹೌದು, ಅತ್ತ ಗೃಹೋಪಯೋಗಿ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದ್ದು, ಸಾಮಾನ್ಯ ಜನರು, ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಶಾಕ್ ಆಗಿದ್ದಾರೆ. ಅಲ್ಲದೇ ಈ ಪರಿಣಾಮ ಬೆಂಗಳೂರಿನಲ್ಲಿ ಊಟವೂ ದುಬಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ಮೇಲೆ ಎಲ್‌ಪಿಜಿ ಗ್ಯಾಸ್ ದುಬಾರಿ!
ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್ (14.2 ಕೆಜಿ) ಬೆಲೆ 60 ರೂ. ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ 915.5 ರೂ. ಆಗಿದೆ. ಹಿಂದೆ 855.50 ರೂ.ಗೆ ಪಡೆಯಲಾಗುತ್ತಿತ್ತು.
ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ (19 ಕೆಜಿ) ಬೆಲೆ 115 ರೂ. ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಒಟ್ಟು ಬೆಲೆ 1,981 ರೂ. ಆಗಿದೆ. ಈ ಹಿಂದೆ 1866.50 ರೂ.ಗೆ ನೀಡಲಾಗುತ್ತಿತ್ತು.
ವ್ಯಾಪರಿಗಳ ಆತಂಕ
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದರಿಂದ, ಜಾಗತಿಕವಾಗಿ ಇಂಧನ ವೆಚ್ಚಗಳು ದುಬಾರಿ ಉಂಟಾಗಿದ್ದರಿಂದ, ಈ ಬದಲಾವಣೆಯಾಗಿದೆ. ಆ ಪರಿಣಾಮ ಎಲ್‌ಪಿಜಿ ಅವಲಂಬಿಸಿರುವ ವ್ಯವಹಾರಗಳಿಗೆ, ಉದ್ಯಮಿಗಳಿಗೆ ಭಾರೀ ಆತಂಕ ಶುರುವಾಗಿದೆ.
ಬೆಂಗಳೂರು ಬೃಹತ್ ಹೋಟೆಲ್ಸ್ ಅಸೋಸಿಯೇಷನ್ (BBHA) ಅಧ್ಯಕ್ಷ ಪಿ.ಸಿ. ರಾವ್ ಅವರು ಎಲ್‌ಪಿಜಿ ಬೆಲೆ ಏರಿಕೆ ಕುರಿತು ಮಾತನಾಡಿದ್ದು, ಹಿಂದೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಗರಿಷ್ಠ ಚಿಲ್ಲರೆ ಬೆಲೆಗೆ (MRP) ಹೋಟೆಲ್ ಮಾಲೀಕರು 150 ರಷ್ಟು ರಿಯಾಯಿತಿ ಪಡೆಯುತ್ತಿದ್ದರು. ಆದರೆ ಇದನ್ನೂ ಮಾರ್ಚ್ 1 ರಿಂದ ನಿಲ್ಲಿಸಲ್ಪಟ್ಟಿದೆ. ಆದ್ದರಿಂದ ಈಗ ಮಾಲೀಕರು ಸಂಪೂರ್ಣ ಎಮ್‌ಆರ್‌ಪಿ ಬೆಲೆಯನ್ನೇ ಕೊಡಬೇಕಾಗಿದೆ. ಇದೀಗ ಮಾರ್ಚ್ 7 ರಂದು ಕಮರ್ಷಿಯಲ್ ಸಿಲಿಂಡರ್‌ನಲ್ಲಿ 115 ರೂ. ಏರಿಕೆಯಾಗಿದ್ದು, ಈ ಹಿಂದೆ ನೀಡುತ್ತಿದ್ದ ರಿಯಾಯಿತಿ ಸೇರಿ ಒಟ್ಟು 265 ರೂ. ನೀಡುವಂತಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಗ್ಯಾಸ್ ಬೆಲೆ ಏರಿಕೆ, ಹೋಟೆಲ್‌ಗಳ ಮೇಲೆ ಪರಿಣಾಮ!
ಬೆಂಗಳೂರಿನ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಈ ಏರಿಕೆಯಿಂದಾಗಿ ಆತಂಕದಲ್ಲಿದ್ದಾರೆ. ಹಲವಾರು ರೆಸ್ಟೋರೆಂಟ್‌ಗಳು ದಿನಕ್ಕೆ ಹಲವು ಸಿಲಿಂಡರ್‌ಗಳನ್ನು ಬಳಸುತ್ತಿದೆ. ಆದರೆ ಇದೀಗ ಬೆಲೆ ಏರಿಕೆಯಿಂದಾಗಿ, ಹೋಟೆಲ್ ಮಾಲೀಕರ ಜೇಬು ಸುಡುವುದು ಗ್ಯಾರಂಟಿ. ಆದ್ದರಿಂದ ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಇದು ಸತ್ಯವಾದ್ರೆ, ಬೆಂಗಳೂರು ಜನರಿಗೆ ಇನ್ಮೇಲೆ ಹೋಟೆಲ್ ಆಹಾರಗಳು ಮತ್ತಷ್ಟು ದುಬಾರಿಯಾಗಲಿದೆ.


Click it and Unblock the Notifications