ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಮತ್ತೊಮ್ಮೆ ಬೆಲೆ ಏರಿಕೆಯ ಸುದ್ದಿ ಜನರನ್ನು ತಲ್ಲಣಗೊಳಿಸಿದೆ. ಹೌದು... ಮುಂದಿನ ದಿನಗಳಲ್ಲಿ ಹಣದುಬ್ಬರದಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಏಕೆಂದರೆ ದಿನಬಳಕೆಯ ವಸ್ತುಗಳ ಬೆಲೆಗಳು ಹೆಚ್ಚಾಗುವ ಸಂಭವವಿದೆ.
ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಕಂಪನಿಗಳು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ. ವಾಸ್ತವವಾಗಿ ಆಹಾರ ಹಣದುಬ್ಬರ ಮತ್ತು ಏರುತ್ತಿರುವ ವೆಚ್ಚಗಳ ಪರಿಣಾಮವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕ ಕಾರ್ಯಕ್ಷಮತೆಯ ಮೇಲೆ ಗೋಚರಿಸುತ್ತದೆ. ಇದರಿಂದಾಗಿ ಕಂಪನಿಗಳ ಮಾರ್ಜಿನ್‌ನಲ್ಲಿ ಇಳಿಕೆ ಕಂಡುಬಂದಿದೆ. ಹೀಗಾಗಿ ಡಾಬರ್, ಹಿಂದೂಸ್ತಾನ್ ಯೂನಿಲಿವರ್, ಗೋದ್ರೇಜ್ ಗ್ರಾಹಕ ಉತ್ಪನ್ನಗಳು, ಐಟಿಸಿ ಮತ್ತು ಮಾರಿಕೋ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಹೆಚ್‌ಯುಎಲ್ (HUL), ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (GCPL), ಮರಿಕೋ (Marico), ಐಟಿಸಿ (ITC) ಮತ್ತು ಟಾಟಾ ಕನ್ಸೂಮರ್ ಪ್ರೊಡಕ್ಟ್ ಲಿಮಿಡೆಟ್ (TCPL) ನಂತಹ ಎಫ್‌ಎಂಸಿಜಿ (FMCG) ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ. ಹೀಗಾಗಿ ಬೆಲೆ ಏರಿಕೆಗೆ ಚಿಂತನೆಗಳು ನಡೆದಿವೆ ಎನ್ನಲಾಗುತ್ತಿದೆ. ಒಂದು ವೇಳೆ ಕಂಪನಿಗಳು ಬೆಲೆ ಏರಿಕೆ ಮಾಡಿದ್ದೇ ಆದಲ್ಲಿ ತಮ್ಮ ಮಾರಾಟದ ಪ್ರಮುಖ ಪಾಲನ್ನು ಹೊಂದಿರುವ ನಗರ ವಲಯದಲ್ಲಿ ವಸ್ತುಗಳ ಬಳಕೆಯ ಕುಸಿತದ ಬಗ್ಗೆಯೂ ಕಳವಳ ವ್ಯಕ್ತಪಡಿಸಿವೆ. ಹೀಗಾಗಿ ಸಾಕಷ್ಟು ಅಳೆದು ತೂಗಿ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.
ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (FMCG) ಮಾರಾಟಕ್ಕೆ ನಗರ ಮಾರುಕಟ್ಟೆಗಳು 65-68% ಕೊಡುಗೆ ನೀಡುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮೀಣ ಮಾರುಕಟ್ಟೆಯು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ತೋರಿಸಿದ್ದು ಬೆಳವಣಿಗೆಯ ದರವನ್ನು ಕಾಯ್ದುಕೊಂಡಿದೆ.
ಆದರೆ ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಮುಖ್ಯಸ್ಥ ಸುಧೀರ್ ಸೀತಾಪತಿ ಅವರು, 'ಪ್ರಸ್ತುತ ತೊಂದರೆಗಳನ್ನು ತಾತ್ಕಾಲಿಕ' ಎಂದು ವಿವರಿಸಿದ್ದಾರೆ. ಬೆಲೆ ಏರಿಕೆ ಮತ್ತು ಇಳಿಕೆ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಇದನ್ನು ಎಚ್ಚರಿಕೆಯಿಂದ ಅನುಷ್ಠಾನಗೊಳಿಸುವ ಮೂಲಕ ವೆಚ್ಚವನ್ನು ಭರಿಸಬೇಕು ಎಂದಿದ್ದಾರೆ.
ಭಾರತದಲ್ಲಿ ಹಲವಾರು ಬಾರಿ ತೈಲ ಬೆಲೆಯಲ್ಲಿ ಏರಿಳಿತವಾಗಿದೆ. ಇನ್ನಿತರ ವಸ್ತುಗಳ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಗ್ರಾಹಕರ ಬೇಡಿಕೆಯ ಕೊರತೆಯ ಹೊರತಾಗಿಯೂ, ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (GCPL) ಸ್ಥಿರವಾಗಿ ತಮ್ಮ ವಸ್ತುಗಳನ್ನು ಪೂರೈಸಿದೆ. ಆದರೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ವಸ್ತುಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ. ಹೀಗಾಗಿ ಇದನ್ನು ಸರಿದೂಗಿಸಲು ಬೆಲೆ ಏರಿಕೆ ಅನುವಾರ್ಯವಾಗಿದೆ.
ಎಫ್‌ಎಂಸಿಜಿ ಸವಾಲುಗಳು
ಈ ಆರ್ಥಿಕ ಒತ್ತಡಗಳಿಂದಾಗಿ ಎಫ್‌ಎಂಸಿಜಿ ವಲಯವು ಅಲ್ಪಾವಧಿಯ ಸವಾಲುಗಳನ್ನು ಎದುರಿಸಬಹುದು. ಈ ಹಂತವನ್ನು ಪರಿಣಾಮಕಾರಿಯಾಗಿ ಎದುರಿಸಲು ಕಂಪನಿಗಳು ಬೆಲೆ ಏರಿಕೆ ತಂತ್ರಗಳನ್ನು ಮಾಡುತ್ತಿವೆ. ಬೆಲೆಗಳನ್ನು ಎಚ್ಚರಿಕೆಯಿಂದ ಮಾಡುವ ಮೂಲಕ, ಗ್ರಾಹಕರ ಬೇಡಿಕೆಗೂ ಕೊರತೆಯಾಗದಂತೆ ಲಾಭವನ್ನು ಹೊಂದುವುದು ಎಫ್‌ಎಂಸಿಜಿನ ಸದ್ಯದ ಗುರಿಯಾಗಿದೆ.


Click it and Unblock the Notifications