ಒಂದರ ಹಿಂದೆ ಒಂದರಂತೆ ಮತ್ತೆ ಮತ್ತೆ ಬೆಲೆ ಏರಿಕೆ ಬಿಸಿ ರಾಜ್ಯದ ಜನತೆಗೆ ತಟ್ಟತೊಡಗಿದೆ. . ಬಸ್, ಮೆಟ್ರೋ ಪ್ರಯಾಣ ದರ ಏರಿಕೆ ನಡುವೆ ವಿದ್ಯುತ್ ದರ ಏರಿಕೆ, ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ತಯಾರಿ ನಡೆಸುತ್ತಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಇದೆಲ್ಲದರ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ದುಡ್ಡಿದದ್ದೆಲ್ಲಾ ಖರ್ಚಿಗೆ ಸೀಮಿತ ಎನ್ನುವ ಪರಿಸ್ಥಿತಿ ತಂದೊಡ್ಡಿದ್ದರೂ ದಿನ ಬಳಕೆಯ ವಸ್ತುಗಳ ದರ ಮಾತ್ರ ಏರಿಕೆಯ ಹಾದಿಯಲ್ಲೇ ಸಾಗುತ್ತಿದೆ.

ಇದಕ್ಕೆ ಈಗ ಹೊಸ ಸೇರ್ಪಡೆ ಅಡುಗೆ ಎಣ್ಣೆ. ಅಡುಗೆಗೆ ಖಾದ್ಯ ತೈಲ ಅತ್ಯಗತ್ಯ, ಆದರೆ ಕಳೆದ ತಿಂಗಳಿಂದ ಅದರ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹಿಂದಿನ ಬೆಲೆಗಳಿಗೆ ಹೋಲಿಸಿದರೆ, ಈಗ ಪ್ರತಿ ಲೀಟರ್‌ಗೆ 10 ರಿಂದ 20 ರೂಪಾಯಿಗಳಷ್ಟು ಹೆಚ್ಚಾಗಿದೆ. ಅದರಲ್ಲೂ ಪ್ರಮುಖವಾಗಿ ತೆಂಗಿನಕಾಯಿ ಎಣ್ಣೆ ದರ ಲೀಟರ್‌ಗೆ 300 ರೂ. ಗಡಿ ದಾಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಕಡಿಮೆಯಾಗಿರುವುದರಿಂದ ಅದರ ಬೆಲೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಸೂರ್ಯಕಾಂತಿ ಎಣ್ಣೆ, ಪಾಮ್ ಎಣ್ಣೆ, ಕಡಲೆಕಾಯಿ ಎಣ್ಣೆ, ಹತ್ತಿಬೀಜದ ಎಣ್ಣೆ ಮತ್ತು ಸಾಸಿವೆ ಎಣ್ಣೆಯ ಬೆಲೆಗಳು ಲೀಟರ್‌ಗೆ 10 ರಿಂದ 20 ರೂಪಾಯಿಗಳಷ್ಟು ಏರಿಕೆಯಾಗಿವೆ ಎಂದು ಖಾದ್ಯ ತೈಲ ಮಾರಾಟಗಾರರು ತಿಳಿಸಿದ್ದಾರೆ.
ತೆಂಗಿನಎಣ್ಣೆಯ ದರದಲ್ಲಿ ಜಿಗಿತ:
ರಾಜ್ಯದಲ್ಲಿ ಬೇಸಿಗೆ ಕಾಲಿಡುತ್ತಿದೆ. ಬಿಸಿಲಿನ ತೀವ್ರತೆಯೂ ಹೆಚ್ಚುತಿದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಎಳೆನೀರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಎಳನೀರು ಯಥೇಚ್ಛವಾಗಿ ರೈತರು ಮಾರಾಟ ಮಾಡಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುದಿಲ್ಲ. ಹೀಗಾಗಿ ಒಂದು ವರ್ಷದಿಂದ ಕ್ವಿಂಟಾಲ್‌ಗೆ 8 ರಿಂದ 8,500 ರೂ. ಇದ್ದ ಕೊಬ್ಬರಿ ಪ್ರಸ್ತುತ 14,500ರಿಂದ 15 ಸಾವಿರ ರೂ.ಗಳಿಗೆ ಜಿಗಿತ ಕಂಡಿದೆ. ಇನ್ನೊಂದೆಡೆ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಈ ಬಾರಿ ತೆಂಗಿನ ಇಳುವರಿ ಕಡಿಮೆಯಾಗಿದ್ದು, ಕೊಬ್ಬರಿ ಮಾರಾಲು ಯೋಚಿಸಿದರೆ, ಕಾಯಿ ಕೀಳಿಸಬೇಕು, ಸುಲಿಸಬೇಕು ಎಂಬ ಕಾರಣದಿಂದ ಎಳನೀರನ್ನೇ ಕಿತ್ತು ಮಾರಾಟ ಮಾಡಿದ ಪರಿಣಾಮ ಬೇಡಿಕೆಗೆ ಅನುಗುಣವಾಗಿ ತೆಂಗು ಹಾಗೂ ಕೊಬ್ಬರಿ ಸಿಗದೆ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಇದರಿಂದಾಗಿ ತೆಂಗಿನ ಎಣ್ಣೆ ದರ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ಲೀಟರ್ ತೆಂಗಿನಕಾಯಿ ಎಣ್ಣೆ ಬೆಲೆಯಲ್ಲಿ 50 ರೂ. ಹೆಚ್ಚಾಗಿದೆ.
ಇನ್ನೊಂದೆಡೆ ಮಲೇಷ್ಯಾದಲ್ಲಿ ತಾಳೆ ಎಣ್ಣೆ ಬೆಲೆ ಶೇ.೧೧ ರಷ್ಟು ಹೆಚ್ಚಾಗಿದ್ದು, ಇದರ ಪರಿಣಾಮ ಭಾರತಕ್ಕೆ ಆಮದು ಮಾಡಿಕೊಳ್ಳಲು ಪೂರ್ವನಿಗದಿಯಾಗಿದ್ದ ೭೦ ಸಾವಿರ ಟನ್ ಕಚ್ಚಾ ತಾಳೆ ಎಣ್ಣೆಯನ್ನು ಇಲ್ಲಿನ ಸಂಸ್ಕರಣಗಾರರು ಕ್ಯಾನ್ಸಲ್ ಮಾಡಿದ್ದಾರೆ. ಭಾರತ ಅತಿಹೆಚ್ಚು ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ದೇಶವಾಗಿದ್ದು, ಪರಸ್ಪರ ಸಮ್ಮತಿ ಮೇರೆಗೆ ರದ್ದುಪಡಿಸಿದ್ದಾರೆ. ಭಾರತ ಆಮದು ಶುಲ್ಕ ಹೆಚ್ಚಿಸುವ ಸಾಧ್ಯತೆ ಇದ್ದು, ಗೀಗಾಗಿ ದಾಸ್ತಾನು ಇಟ್ಟಿರುವ ಎಣ್ಣೆಯನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಯೋಚನೆಯಲ್ಲಿ ಸಂಸ್ಕರಣಗಾರರು ಇದ್ದಾರೆ ಎನ್ನಲಾಗಿದೆ. ಇವೆಲ್ಲದರ ಪರಿಣಾಮ ಅಡುಗೆ ಎಣ್ಣೆ ಏರಿಕೆ ಕಂಡಿರುವುದು ಜನ ಸಾಮಾನ್ಯರ ಜೇಬು ಬಿಸಿಯಾಗುವಂತೆ ಮಾಡಿದೆ.
ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ
ರೈತರು ಹಾಗೂ ಹಾಲು ಒಕ್ಕೂಟಗಳಿಂದ ದರ ಏರಿಸುವಂತೆ ಕೆಎಂಎಫ್ ಮೇಲೆ ಒತ್ತಡ ಹೇರುತ್ತಿರುವುದರಿಂದ ಹಾಲಿನ ದರ ಹೆಚ್ಚಳಕ್ಕೆಅವಕಾಶ ಮಾಡಿಕೊಡುವಂತೆ ಕೆಎಂಎಫ್ ಆಡಳಿತ ಮಂಡಳಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಪ್ರತಿ ಲೀಟರ್ ಹಾಲಿಗೆ 5 ರೂ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಮಾ. ೭ ರಂದು ರಾಜ್ಯ ಬಜೆಟ್ ಮಂಡನೆಯಾದ ಬಳಿಕ ನಂದಿನಿ ಹಾಲಿನ ದರ ಏರಿಕೆ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.


Click it and Unblock the Notifications