ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇನ್ನೇನು ಎರಡು ದಿನದಲ್ಲಿ ಉಡುಪಿಗೆ ಆಗಮಿಸಲಿದ್ದಾರೆ. ನವೆಂಬರ್ 28, ಶುಕ್ರವಾರದಂದು ಪ್ರಧಾನಿ ಮೋದಿಯವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ. ಶ್ರೀಕೃಷ್ಣ ದೇವರ ದರ್ಶನ ಪಡೆದ ಬಳಿಕ ಪ್ರಧಾನಿ ಮೋದಿಯವರು "ಲಕ್ಷ ಕಂಠ ಗೀತ ಗಾಯನ" ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆ ನಂತರ ಜನರನ್ನು ಉದ್ದೇಶಿ ಮಾತಾನಾಡಲಿದ್ದಾರೆ.

ಇದೀಗ ಮೋದಿ ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯ ಮೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಉಡುಪಿಗೆ ಮೋದಿ ಆಗಮನ, ಇಲ್ಲೆಲ್ಲಾ ರಜೆ!
ಉಡುಪಿ ಜಿಲ್ಲಾಡಳಿತ ನವೆಂಬರ್ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ನವೆಂಬರ್ 28 ರಂದು ಪ್ರಧಾನಮಂತ್ರಿಗಳ ಭೇಟಿ ಇರುವ ಕಾರಣ, ಉಡುಪಿ ನಗರದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಶಿಫಾರಸಿನ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ್ ಅವರು ಈ ಆದೇಶ ಹೊರಡಿಸಿದ್ದಾರೆ. ಪ್ರಧಾನಮಂತ್ರಿಗಳ ಭದ್ರತಾ ವ್ಯವಸ್ಥೆಗಳಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ರಜೆ ಘೋಷಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು, ಪ್ರಧಾನಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು, ಕಚೇರಿಗಳು ಮತ್ತು ಬ್ಯಾಂಕ್‌ಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಡಳಿತವನ್ನು ವಿನಂತಿಸಿದ್ದಾರೆ. ಸುಮಾರು ಮೂರು ದಶಕಗಳ ನಂತರ ಪ್ರಧಾನಮಂತ್ರಿಯವರು ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದ, ಜನರು ಅವರನ್ನು ನೋಡಲು ಅನುಕೂಲವಾಗುವಂತೆ ರಜೆ ನೀಡಬೇಕೆಂದು ಅವರು ಮನವಿ ಮಾಡಿದ್ದರು.
ಈಗಾಗಲೇ ಪ್ರಧಾನ ಮಂತ್ರಿಗಳಿಗೆ ಭವ್ಯ ಸ್ವಾಗತ ನೀಡಲು ಕೃಷ್ಣಾ ನಗರಿ ಉಡುಪಿ ಸಜ್ಜಾಗಿದೆ. ಅಲ್ಲದೇ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ. ಆದ್ದರಿಂದ ಸಂಚಾರದಲ್ಲಿ ಅಡಚಣೆಯಾಗಬಹುದೆಂದು, ಬದಲಿ ಮಾರ್ಗಕ್ಕೂ ಸೂಚನೆ ಹೊರಡಿಸಲಾಗಿದೆ.
ರೋಡ್ ಶೋನಲ್ಲಿ "ನಮೋ"!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಉಡುಪಿಯಲ್ಲಿ ರೋಡ್‌ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನವೀನ್ ಶೆಟ್ಟಿಯವರು, ಬೆಳಗ್ಗೆ 11.40 ರ ಸುಮಾರಿಗೆ ಬನ್ನಂಜೆಯ ನಾರಾಯಣಗುರು ವೃತ್ತದಿಂದ ರೋಡ್‌ಶೋ ಆರಂಭವಾಗಿ ಕಲ್ಸಂಕ ಜಂಕ್ಷನ್‌ವರೆಗೆ ಸಾಗಲಿದೆ ಎಂದು ಹೇಳಿದ್ದಾರೆ.
ಕರಾವಳಿಯ ಕಲೆ ಅನಾವರಣ
ಬಿಜೆಪಿ ನಾಯಕರ ಪ್ರಕಾರ, ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ, ಹುಲಿವೇಷ ತಂಡಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ರೋಡ್‌ಶೋ ವೇಳೆ ಪ್ರದರ್ಶಿಸಲಾಗುವುದು ಎನ್ನಲಾಗಿದೆ. ರಸ್ತೆಯ ಒಂದು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಪ್ರಧಾನಮಂತ್ರಿಯವರನ್ನು ಸ್ವಾಗತಿಸಲು 30,000 ಕ್ಕೂ ಹೆಚ್ಚು ಜನರು ಸೇರಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬ್ರಿಜೇಶ್ ಚೌಟಾ ಹಾಗೂ ಜಿಲ್ಲೆಯ ಶಾಸಕರು ಮತ್ತು ಹಿರಿಯ ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications