ಕೈತುಂಬಾ ವೇತನ ನೀಡುವ ಉದ್ಯೋಗವನ್ನು ತ್ಯಜಿಸಿ ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ ಅನೇಕರ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಸದ್ಯ ಈ ಗುಂಪಿಗೆ ಕೇರಳದ ಕೊಚ್ಚಿಯ ಅಜಯ್ ಗೋಪಿನಾಥ್ ಕೂಡ ಸೇರ್ಪಡೆಯಾಗಿದ್ದಾರೆ. ಉತ್ತಮ ವೇತನ ನೀಡುತ್ತಿದ್ದ ಕೆಲಸವಿದ್ದರೂ ತಾನು ಹಿಂದಿನಿಂದಲೂ ಇಚ್ಛೆ ಹೊಂದಿದ್ದ ಉದ್ಯಮವನ್ನು ಆರಂಭಿಸಿದ ಅಜಯ್ ಅವರು ಸದ್ಯ ತಿಂಗಳಿಗೆ 5 ಲಕ್ಷ ರೂ.ಗೂ ಅಧಿಕ ಹಣವನ್ನು ಸಂಪಾದಿಸುತ್ತಿದ್ದಾರೆ. ಇನ್ನು ಅಜಯ್ ಅವರಿಗೆ ಸಸ್ಯಗಳ ಮೇಲೆ ಹಿಂದಿನಿಂದಲೂ ಉತ್ಸಾಹ ಹೊಂದಿದ್ದು, ಸದ್ಯ ಆಸಕ್ತಿಯನ್ನು ಅವರು ಆರ್ಥಿಕವಾಗಿ ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅಜಯ್ ಅವರು ಆರಂಭಿಸಿದ ಉದ್ಯಮವೇನು ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಅಜಯ್ ಅವರು ಕೊಚ್ಚಿಯಲ್ಲಿರುವ ತಮ್ಮ ಮನೆಯ ಸಣ್ಣ ಕೋಣೆಯಲ್ಲಿ ಪೋಷಕಾಂಶ-ಭರಿತ ಮೈಕ್ರೋಗ್ರೀನ್‌ಗಳನ್ನು ಬೆಳೆಸುವ ಕಾಯಕ ಮಾಡಿಕೊಂಡಿದ್ದು, ತಿಂಗಳಿಗೆ 5 ಲಕ್ಷಕ್ಕೂ ಅಧಿಕ ಸಂಪಾದಿಸುತ್ತಿದ್ದಾರೆ. ಅಜಯ್ ಅವರು ತಮ್ಮ ಪೋಷಕಾಂಶಭರಿತ ಮೈಕ್ರೋಗ್ರೀನ್‌ಗಳನ್ನು ಜಿಮ್‌ಗಳು, ಆಸ್ಪತ್ರೆಗಳು, ಹೋಟೆಲ್‌ಗಳಿಗೆ ಪೂರೈಕೆ ಮಾಡುತ್ತಿದ್ದು, ಯಶಸ್ವಿ ಉದ್ಯಮಿಯಾಗಿದ್ದಾರೆ.
ಸಿಟಿಗ್ರೂಪ್ ನಲ್ಲಿ ಕೆಲಸದಲ್ಲಿದ್ದ ಅಜಯ್
ಇನ್ನು ಅಷ್ಟಕ್ಕೂ ಅಜಯ್ ಅವರು ಪ್ರಖ್ಯಾತ ಸಿಟಿ ಗ್ರೂಪ್ ನಲ್ಲಿ ಕೆಲಸಕ್ಕಿದ್ದು, ಉತ್ತಮ ವೇತನ ಕೂಡ ಪಡೆಯುತ್ತಿದ್ದರು. ಆದರೆ 2017 ರಲ್ಲಿ ಬೆಂಗಳೂರಿನಲ್ಲಿದ್ದ ವೇಳೆ ಅಜಯ್ ಅವರ ಜೀವನವನ್ನೇ ಬದಲಾಯಿಸಿತು ಎಂದರೆ ತಪ್ಪಾಗಲಾರದು. ಯಾಕೆಂದರೆ ಆ ವೇಳೆ ಊಟದ ಸಮಯದಲ್ಲಿ ಸಲಾಡ್ ಪ್ಲೇಟರ್‌ನಲ್ಲಿನ ಸಣ್ಣ ಸೊಪ್ಪಿನಿಂದ ಆಕರ್ಷಿತರಾದ ಅವರು ಸಂಶೋಧನೆ ಮಾಡಲು ಪ್ರಾರಂಭಿಸಿದರು ಮತ್ತು ಅವುಗಳ ಪೌಷ್ಟಿಕಾಂಶದ ಸಾಮರ್ಥ್ಯವನ್ನು ಕಂಡುಹಿಡಿದರು. ಮೈಕ್ರೋಗ್ರೀನ್‌ಗಳು ತರಕಾರಿಗಳು, ಧಾನ್ಯಗಳು ಮತ್ತು ಮೊಳಕೆ ಹಂತದಲ್ಲಿ ಕೊಯ್ಲು ಮಾಡಿದ ಗಿಡಮೂಲಿಕೆಗಳು, ಕೇಂದ್ರೀಕೃತ ಪೋಷಕಾಂಶಗಳನ್ನು ನೀಡುತ್ತವೆ ಎಂಬ ವಿಚಾರವನ್ನು ಅವರು ಅರಿತುಕೊಂಡರು. ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಕೊಂಡ ಅವರು ಮೈಕ್ರೋಗ್ರೀನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಾ ಸಾಗಿದರು. ಇನ್ನು ಹಲವು ದಿನಗಳ ಅವಧಿಯಲ್ಲಿ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ ಪರಿಣಾಮ 2018 ರ ವೇಳೆಗೆ ಮೈಕ್ರೋಗ್ರೀನ್‌ಗಳ ಬಗೆಗಿನ ಆಸಕ್ತಿಯನ್ನು ಉದ್ಯಮವನ್ನಾಗಿ ಪರಿವರ್ತಿಸುವತ್ತ ಮನಸ್ಸು ಮಾಡಿದರು. 2018 ರಲ್ಲಿ ಅಜಯ್ ಅವರು ಮನೆಯಲ್ಲಿ ಮೈಕ್ರೋಗ್ರೀನ್‌ಗಳನ್ನು ಬೆಳೆಯುವುದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದರು. ಸುಮಾರು ಎರಡು ವರ್ಷಗಳ ಕಾಲ ಇದರ ಬಗ್ಗೆ ಅಧ್ಯಯನ ನಡೆಸುತ್ತಾ ಸಾಗಿದ ಅವರು ಈ ಹಂತದಲ್ಲಿ ಹಲವು ಉಪಯುಕ್ತ ಅಂಶಗಳನ್ನು ಕಂಡುಕೊಂಡರು. ಹೀಗೆ ಹಲವು ರೀತಿಯ ಅಧ್ಯಯನ ಬಳಿಕ ಡಿಸೆಂಬರ್ 2020 ರಲ್ಲಿ ಅಜಯ್ ಅವರು ಬೆಂಗಳೂರಿನಲ್ಲಿದ್ದ ತಮ್ಮ ಬ್ಯಾಂಕ್ ನೌಕರಿಗೆ ರಾಜೀನಾಮೆ ನೀಡಿ, ತವರು ಕೊಚ್ಚಿಗೆ ಮರಳಿದರು.

ಮನೆಯಲ್ಲೇ ಸಣ್ಣ ಕೊಠಡಿಯಲ್ಲಿ ಉದ್ಯಮ ಆರಂಭ
ಹೀಗೆ ಬೆಂಗಳೂರಿನ ಉತ್ತಮ ವೇತನದ ಕೆಲಸ ತ್ಯಜಿಸಿ, ಕೊಚ್ಚಿಗೆ ಮರಳಿದ ಅಜಯ್ ಅವರು ತಮ್ಮ ಮನೆಯ ಸಣ್ಣ ರೂಂನಲ್ಲೇ ಕೇವಲ ಎರಡು ಟ್ರೇಗಳಲ್ಲಿ ಸಣ್ಣ, ಬೆಳೆಯುತ್ತಿರುವ ಮೈಕ್ರೋಗ್ರೀನ್ ಗಳನ್ನು ಬೆಳೆಸಲು ಪ್ರಾರಂಭಿಸಿದರು. ಸ್ನೇಹಿತರಿಗೆ ಉತ್ತಮ ಪ್ರತಿಕ್ರಿಯೆ ದೊರೆತ ಪರಿಣಾಮ ಉತ್ತೇಜಿತರಾದ ಅಜಯ್ ಅವರು ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿಕೊಂಡರು. 2022 ರ ಹೊತ್ತಿಗೆ ಅಜಯ್ ಅವರು ಮೈಕ್ರೊಗ್ರೀನ್ಸ್ ಫಾರ್ಮ್ ಅವರ ಮನೆಯಲ್ಲಿ 80 ಚದರ ಅಡಿ ಕೋಣೆಯಲ್ಲಿ ಬೆಳೆಸಲು ಪ್ರಾರಂಭಿಸಿದರು. ಒಳಾಂಗಣ ಲಂಬ ಕೃಷಿ ತಂತ್ರಗಳನ್ನು ಬಳಸಿಕೊಂಡು ಆರಂಭಿಸಿದ ಉದ್ಯಮವನ್ನು ಅವರು ಸದ್ಯ ಮೂಲಂಗಿ, ಸಾಸಿವೆ, ಬೀಟ್ ರೂಟ್, ಬೊಕ್ ಚಾಯ್, ಸೂರ್ಯಕಾಂತಿ ಮತ್ತು ಕೇಲ್ ಸೇರಿದಂತೆ 15 ಪ್ರಭೇದಗಳನ್ನು ಬೆಳೆಸುತ್ತಿದ್ದಾರೆ. ಅಜಯ್ ಅವರು ಪ್ರತಿದಿನ ಸುಮಾರು 5 ಕೆಜಿ ಸೊಪ್ಪನ್ನು ಕಟಾವು ಮಾಡುತ್ತಿದ್ದು, ಗ್ರೋ ಗ್ರೀನ್ಸ್ ಬ್ರಾಂಡ್‌ನಲ್ಲಿ 100 ಗ್ರಾಂಗೆ 150 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಮೈಕ್ರೊಗ್ರೀನ್‌ಗಳು ವಿಟಮಿನ್ ಸಿ, ಕೆ ಮತ್ತು ಬಿ 12 ನಂತಹ ಪೋಷಕಾಂಶಗಳು ಮತ್ತು ಪೊಟ್ಯಾಸಿಯಮ್ ಮತ್ತು ಸತುವಿನಂತಹ ಖನಿಜಗಳಿಂದ ತುಂಬಿದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಇವರ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ ಎನ್ನಲಾಗಿದೆ. ಅಜಯ್ ಅವರು ಅವರು ಭಾರತದಾದ್ಯಂತ ಫ್ರಾಂಚೈಸಿಗಳನ್ನು ಸ್ಥಾಪಿಸಿದ್ದು, ರೈತರಿಗೆ 30ಕ್ಕೂ ಅಧಿಕ ಮೈಕ್ರೋಗ್ರೀನ್ ಘಟಕಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ.
ಬೆಳೆಸುವ ವಿಧಾನ ಹೇಗೆ?
ಮೈಕ್ರೋಗ್ರೀನ್‌ಗಳನ್ನು ಕೋಕೋಪೀಟ್ ಗಳಲ್ಲಿ ಬೆಳೆಸುವ ವಿಧಾನವಾಗಿದ್ದು, ಅತ್ಯಂತ ಎಚ್ಚರಿಕೆಯಿಮ್ದ ನಿಯಂತ್ರಿತ ಪರಿಸ್ಥಿತಿಗಳಲ್ಲಿ ಬೆಳೆಸಲಾಗುತ್ತದೆ. ರೂಂನ ತಾಪಮಾನ 25°C ಗಿಂತ ಕಡಿಮೆ ಇರಬೇಕಿದೆ. ಅಲ್ಲದೆ ಕೊಠಡಿಯ ಹ್ಯುಮಿಡಿಟಿ 40ರಿಂದ 60 ಪ್ರತಿಶತದ ಆಸುಪಾಸಿನಲ್ಲಿರುತ್ತದೆ. ಸೂಕ್ತ ಬೆಳವಣಿಗೆಗೆ ಅನುಗುಣವಾಗಿ ಕೃತಕ ಲೈಟಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಬೇಕಿದೆ.


Click it and Unblock the Notifications