ನವದೆಹಲಿ, ಸೆಪ್ಟೆಂಬರ್ 20: ಜೀವನದಲ್ಲಿ ಅನೇಕ ಸವಾಲುಗಳು ಮತ್ತು ಹಲವಾರು ರಿಜೆಕ್ಷನ್ ಗಳ ಬಳಿಕ ಸೋಲದೆ, ಕಾರ್ಪೊರೇಟ್ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಓರ್ವ ಮಹಿಳೆಯ ಪ್ರಯಾಣವು ದೃಢತೆ ಮತ್ತು ವಿಶ್ವಾಸದ ಪ್ರತೀಕವಾಗಿದೆ. ದೈಹಿಕ ನ್ಯೂನತೆ ನಡುವೆಯೂ ತಮ್ಮ ಸ್ವಂತಿಕೆ ಬಿಡದೆ ಯಶಸ್ವಿನ ಉತ್ತುಂಗಕ್ಕೆ ಏರಿದವರು ರಾಧಿಕಾ ಗುಪ್ತಾ.! ಅವರ ಜೀವನ ಕಥೆಯು ಅಸಾಮಾನ್ಯವಾಗಿದ್ದು, ಕಷ್ಟ, ನ್ಯೂನತೆ ಎಂದು ಕೊರಗಿಕೊಂಡು ಇರೋ ಯಾರಿಗಾದರೂ ಸ್ಫೂರ್ತಿ ನೀಡುತ್ತದೆ.
1983ರ ಸೆಪ್ಟೆಂಬರ್ 14ರಂದು ಪಾಕಿಸ್ತಾನದಲ್ಲಿ ಜನಿಸಿದ ರಾಧಿಕಾ ಗುಪ್ತಾ ಅವರ ಆರಂಭಿಕ ಜೀವನವು ಒಂದೇ ಸ್ಥಳದಲ್ಲಿರಲಿಲ್ಲ. ಇದಕ್ಕೆ ಕಾರಣವೂ ಇದೆ. ರಾಧಿಕಾ ಅವರ ತಂದೆಯೂ ಭಾರತೀಯ ರಾಜತಾಂತ್ರಿಕ ಅಧಿಕಾರಿಯಾಗಿದ್ದು ಹೀಗಾಗಿ ವರ್ಗಾವಣೆಯ ಪ್ರಕಾರ ಅನೇಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬೇಕಿತ್ತು. ರಾಧಿಕಾ ಅವರು ಅನೇಕ ಜನ್ಮಜಾತ ಸಮಸ್ಯೆಗಳನ್ನು ಹೊಂದಿದ್ದರು. ಕತ್ತಿನ ಸಮಸ್ಯೆಯ ಜೊತೆಗೆ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದರು. ಆದರೆ ಅವರು ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಂಡಿರಲಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾ ಮೇರಿಮೌಂಟ್ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ರೋಮ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದರು. ಇದಾದ ಬಳಿಕ ವಾರ್ಟನ್‌ನಿಂದ ಅರ್ಥಶಾಸ್ತ್ರದಲ್ಲಿ ಪದವಿಯೊಂದಿಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ಪದವಿ ಪಡೆದರು.

ಅತ್ಯುತ್ತಮವಾದ ಶೈಕ್ಷಣಿಕ ಅರ್ಹತೆ ಅವರದ್ದಗಿದ್ದರೂ ಮುಂದಿನ ಹಾದಿ ಸುಗಮವಾಗಿರಲಿಲ್ಲ. ಪದವಿ ಪಡೆದ ನಂತರ ತೀವ್ರ ಖಿನ್ನತೆಗೆ ಒಳಗಾಗಬೇಕಾಯಿತು. ಇದಕ್ಕೆ ಕಾರಣ ಉದ್ಯೋಗ ಅರಸಿ ಹೊರಟ ಅವರಿಗೆ ಎದುರಾಗಿದ್ದು ನಿರಾಕರಣೆಗಳ ಉತ್ತರ. ಹೀಗೆ ಅನೇಕ ನಿರಾಕರಣೆಗಳ ನಂತರವೂ ಅವರ ಸಂಕಲ್ಪ ಅಚಲವಾಗಿತ್ತು. ತಮ್ಮ ಸ್ನೇಹಿತೆ ಮತ್ತು ವೈದ್ಯಕೀಯ ಸಹಾಯದೊಂದಿಗೆ, ಅವರು ತಮ್ಮ ಮಾನಸಿಕ ಖಿನ್ನತೆಯಿಂದ ಹೊರಬಂದು , ಮೆಕಿನ್ಸೆ ಕಂಪನಿಯಲ್ಲಿ ಪ್ರಮುಖ ಕೆಲಸವನ್ನು ಗಿಟ್ಟಿಸಿಕೊಂಡರು. ಈ ಮೂಲಕ ವೃತ್ತಿಜೀವನದ ಪಥದಲ್ಲಿ ಮಹತ್ವದ ತಿರುವು ಪಡೆದುಕೊಂಡರು.
ರಾಧಿಕಾ ಅವರ ವೃತ್ತಿಜೀವನವು ಮೈಕ್ರೋಸಾಫ್ಟ್‌ನಲ್ಲಿ ಆರಂಭವಾಗಿದ್ದು, ಮೈಕ್ರೋಸಾಫ್ಟ್, ಮೆಕಿನ್ಸೆ ಮತ್ತು ಕಂಪನಿ, ಮತ್ತು AQR ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನಂತಹ ಬಹುದೊಡ್ಡ ಸಂಸ್ಥೆಗಳೊಂದಿಗೆ ರಾಧಿಕಾ ಸೇವೆ ಸಲ್ಲಿಸಿದರು. 2009 ರಲ್ಲಿ, ಅವರು ಭಾರತದ ಮುಂಬೈನಲ್ಲಿ ಫೋರ್‌ಫ್ರಂಟ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಅನ್ನು ಸಹ-ಸ್ಥಾಪಿಸಿದ್ದು, 2014 ರಲ್ಲಿ ಎಡೆಲ್‌ವೀಸ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಇದನ್ನು ಸ್ವಾಧೀನಪಡಿಸಿಕೊಂಡಿತು. 2017 ರಲ್ಲಿ Edelweiss Mutual Fund (Asset Management Company Limited) ನಲ್ಲಿ CEO ಸ್ಥಾನಕ್ಕೆ ಏರಿದಾಗ, ಅವರ ಕಾರ್ಯತಂತ್ರದ ನಾಯಕತ್ವವು ಕಂಪನಿಯು ನಿರ್ವಹಿಸುತ್ತಿದ್ದ ಆಸ್ತಿಯೂ ₹ 6,700 ಕೋಟಿ ರೂ. ಯಿಂದ (ಮಾರ್ಚ್ 2017 ) ₹ 1,04,896 ಕೋಟಿಗೆ (ಮಾರ್ಚ್ 2023) ಏರಿಕೆಯಾಯಿತು. ಇದರೊಂದಿಗೆ ತಮ್ಮ ಅಧಿಕಾರಾವಧಿಯಲ್ಲಿ, ರಾಧಿಕಾ JP ಮೋರ್ಗಾನ್ ಮ್ಯೂಚುಯಲ್ ಫಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
ಇಂದು ರಾಧಿಕಾ ಅವರು ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ತೀರ್ಪುಗಾರರಾಗಿ ರಿಯಾಲಿಟಿ ಶೋ ಗಳ ಮೂಲಕವೂ ತಮ್ಮ ಛಾಪು ಮೂಡಿಸಿದರು, ತಮ್ಮ ಉದ್ಯಮಶೀಲತೆಯ ಸಾಮರ್ಥ್ಯ ಮತ್ತು ಹೊಸ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕೆಲಸವನ್ನು ಮಾಡಿದರು.
ದೇಶದ ಅತೀ ದೊಡ್ಡ ಮ್ಯೂಚ್ಯುವಲ್ ಫಂಡ್ ಕಂಪನಿ ಎಡಲ್‌ವಿಸ್ ಸಿಇಒ ರಾಧಿಕಾ ಗುಪ್ತಾ ಇಂದು ಯುವ ಸಮೂಹಕ್ಕೆ ಹೂಡಿಕೆ ಹಾಗೂ ಆರ್ಥಿಕತೆ ಶಿಸ್ತಿನ ಬಗ್ಗೆ ಆಗ್ಗಾಗ್ಗೆ ಸಲಹೆ ನೀಡುತ್ತಾರೆ. ಬೃಹತ್ ಬಂಗಲೆ, ಐಷರಾಮಿ ಕಾರು, ದುಬಾರಿ ವ್ಯಾನಿಟಿ ಬ್ಯಾಗು, ಮೈತುಂಬ ಒಡವೆ ಇಂತಹ ವಿಚಾರಗಳಿಗೆ ಗಮನಕೊಡದೆ, ನನ್ನ ಜೀವನ ನನ್ನ ಇಷ್ಟ. ನಾನು ಸವಕಳಿ ಆಸ್ತಿಗಿಂತ ಎಸ್ಐಪಿ ಎಂವ ಸಂಪತ್ತು ಕಡೆಗೆ ಗಮನ ಕೊಡುತ್ತೇನೆ ಎಂದು ವಿವರಿಸುತ್ತಾರೆ. ಮ್ಯೂಚ್ಯುವಲ್ ಫಂಡ್‌ನ ಎಸ್ಐಪಿ ಮೂಲಕ ಹೂಡಿಕೆ ಮಾಡಿ ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯವಿದೆ. ಇದಕ್ಕೆ ದೊಡ್ಡ ಮೊತ್ತದ ಬಂಡವಾಳ ಅಗತ್ಯವಿಲ್ಲ. ಸಣ್ಣ ಮೊತ್ತದ ಮೂಲಕ ಹೂಡಿಕೆ ಮಾಡಿ ಸುಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ರಾಧಿಕಾ ಗುಪ್ತಾ ಹೇಳಿದ್ದಾರೆ.


Click it and Unblock the Notifications