ಮಡಿಕೇರಿ/ಚಿಕ್ಕಮಗಳೂರು: ಚಳಿ ವಾತಾವರಣದ ನಡುವೆಯೇ ರಾಜ್ಯದಲ್ಲಿ ಅಲ್ಲಲ್ಲಿ ಕಳೆದೆರಡು ದಿನಗಳಿಂದ ಲಘು ಮಳೆಯಾಗಿದೆ. ಆದ್ರೆ ಈ ಅಕಾಲಿಕ ಮಳೆಯಿಂದಾಗಿ ರೈತರು (Farmers) ಪರದಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಪ್ರಮುಖ ಕಾಫಿ ಬೆಳೆಯುವ (Coffee Crop) ಪ್ರದೇಶಗಳಲ್ಲಿ ಅಕಾಲಿಕ ಮಳೆಯಿಂದಾಗಿ ತೀವ್ರ ಸಮಸ್ಯೆಗಳು ಎದುರಾಗಿದೆ. ಕಟಾವು, ಕಟಾವಿನ ನಂತರದ ಸಂಸ್ಕರಣೆ ಹಾಗೂ ಮುಂದಿನ ಬೆಳೆಯ ಹೂಬಿಡುವ ಹಂತಕ್ಕೆ ಸಮಸ್ಯೆ ಎದುರಾಗಿದೆ.

ಬೆಳೆಗಾರರ ಪ್ರಕಾರ, ಮಳೆಯು ಕಾಫಿ ಕೊಯ್ಲು ಮತ್ತು ಒಣಗಿಸುವ ಸಂದರ್ಭದಲ್ಲೇ ಬಂದಿದೆ. ಮಳೆ ನಿರಂತ ಬಂದರೆ ಕಾಫಿ ಒಣಗದೆ, ಗುಣಮಟ್ಟ ಕುಸಿಯುವ ಅಪಾಯ ಹೆಚ್ಚಿಸಿದೆ. ಕಾಂಡ ಕೊಳೆ ಮತ್ತು ಬೇರು ರೋಗಗಳಂತಹ ಶಿಲೀಂಧ್ರ ಸೋಂಕುಗಳಿಂದಾಗಿ ಕಾಫಿ ಗಿಡಗಳು ಕೊಳೆಯಲು ಆರಂಭಿಸುತ್ತಿದೆ ಎಂದು ಹೇಳಲಾಗಿದೆ.
ವಿರಾಜಪೇಟೆಯ ಕಾಫಿ ಬೆಳೆಗಾರ ಸುಬಯ್ಯ ಎಂಬವರು ಈ ಬಗ್ಗೆ ಮಾತನಾಡಿದ್ದು, "ನಿರಂತರ ಮಳೆಯಿಂದ ಗಣನೀಯ ನಷ್ಟವಾಗಬಹುದು. ಹವಾಮಾನ ಶೀಘ್ರ ಸುಧಾರಿಸದಿದ್ದರೆ, ಪ್ರಸ್ತುತ ಹಾಗೂ ಮುಂದಿನ ಬೆಳೆ ಎರಡೂ ಅಪಾಯಕ್ಕೆ ಸಿಲುಕುತ್ತವೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನ ಕಾಫಿ ಬೆಳೆಗಾರ ಶಿಶಿರ್ ಎಂಬವರು, "ಅಕಾಲಿಕವಾಗಿ ಬಂದ ಈ ಮಳೆಯು ಕಟಾವಿಗೆ ತೊಂದರೆಯಾಗುತ್ತಿದೆ. ಇದು ಹೊಸ ಹೂಗಳನ್ನು ಹಾಳುಮಾಡಬಹುದು. ಇದು ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ದಾರಿಯಾಗಲಿದೆ" ಎಂದು ಹೇಳಿದ್ದಾರೆ.
ಕೊಡಗಿನಲ್ಲಿ ಅಬ್ಬರಿಸಿದ ಮಳೆರಾಯ
ಜನವರಿ 13, 2026 ರಿಂದ ಕೊಡಗು ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಜನವರಿ 14 ರಂದು ವಿರಾಜಪೇಟೆಯ ಕಡಂಗಮೂರಿನಲ್ಲಿ ಸುಮಾರು 1.30 ಇಂಚು ಮಳೆ ದಾಖಲಾಗಿದೆ. ಈ ಮಳೆಯಿಂದ ಕಾಫಿ ಬೀಜ ಒಣಗಿಸೋಕೆ ಸಮಸ್ಯೆಯಾಗಿದ್ದು, ಕಾಳುಗಳು ಕೂಡಾ ಹಾನಿಯಾಗುವ ಸಾಧ್ಯತೆ ಇದೆ ಎಂದು ಬೆಳೆಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಆತಂಕದಲ್ಲಿ ಬೆಳೆಗಾರರು!
ಹೌದು, ಕರ್ನಾಟಕದ ಕಾಫಿ ಬೆಳೆಗಾರರಿಗೆ ಇತ್ತೀಚಿನ ಅಕಾಲಿಕ ಮಳೆಯು ದೊಡ್ಡ ಸವಾಲನ್ನು ಸೃಷ್ಟಿಸಿದೆ. ಮುಖ್ಯವಾಗಿ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಈಗಾಗಲೇ ಕಾಫಿ ಕೊಯ್ಲು ಆರಂಭವಾಗಿದೆ. ಈ ಕಾರ್ಯಕ್ಕರ ಅಕಾಲಿಕ ಮಳೆ ತೀವೃ ತೊಂದರೆ ಉಂಟು ಮಾಡಿದೆ. ಅಲ್ಲದೇ ಬೆಳೆಗಾರರು ಆರ್ಥಿಕ ನಷ್ಟದ ಆತಂಕದಲ್ಲಿದ್ದಾರೆ.
ಇನ್ನು ಕರ್ನಾಟಕದ ಕಾಫಿ ಬೆಳೆ ರಾಜ್ಯದ ಆರ್ಥಿಕತೆಯ ದೃಷ್ಟಿಯಲ್ಲೂ ಬಹಳ ಮುಖ್ಯವಾಗಿದೆ, ವಾರ್ಷಿಕ ಸುಮಾರು 10,000 ಕೀಟಿ ಮೌಲ್ಯದ ಕಾಫಿ ಉತ್ಪಾದನೆಯಾಗುತ್ತದೆ. ಆದರೆ ಈ ಮಳೆಯಿಂದ ಒಂದು ವೇಳೆ ಕೊಯ್ಲು ವಿಳಂಬವಾದ್ರೆ ನಷ್ಟವಾಗಬಹುದು ಎಂದು ಬೆಳೆಗಾರರು ಆತಂಕದಲ್ಲಿದ್ದಾರೆ.
ಈಗಾಗಲೇ ಬೆಳೆಗಾರರು ಕಾಫಿ ಬೋರ್ಡ್ ಮತ್ತು ಕೃಷಿ ಇಲಾಖೆ ಸಹಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದಿಂದ ಬೆಳೆ ನಷ್ಟದ ಪರಿಹಾರ, ಸಾಲದಲ್ಲಿ ಬಡ್ಡಿ ರಿಯಾಯಿತಿ ಮತ್ತು ಮಾರುಕಟ್ಟೆ ಬೆಂಬಲ ನಿರೀಕ್ಷಿಸುತ್ತಿದ್ದಾರೆ. ಅದರ ಬೆನ್ನಲ್ಲೇ ಸರ್ಕಾರದ ಕೃಷಿ ಇಲಾಖೆ ಕೂಡಾ ಸರ್ವೇ ನಡೆಸಲು ಮುಂದಾಗಿದೆ. ಈ ವೇಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸಲಿದೆ ಎನ್ನಲಾಗಿದೆ.


Click it and Unblock the Notifications