ಇತ್ತೀಚೆಗಷ್ಟೇ ದೇಶದಲ್ಲಿ ಮೊಂಥಾ ಚಂಡಮಾರುತ (Cyclone Montha) ಮತ್ತು ನೈಋತ್ಯ ಮಾನ್ಸೂನ್ ಹಿಂದಿರುಗುವಿಕೆಯಿಂದ ಮಳೆಯಬ್ಬರ ಜೋರಾಗಿತ್ತು. ಅದರಲ್ಲೂ ಮೊಂಥಾ ಚಂಡಮಾರುತದ ಅಬ್ಬರಕ್ಕೆ ಕೆಲ ರಾಜ್ಯಗಳು ತತ್ತರಿಸಿ ಹೋಗಿತ್ತು. ಹವಾಮಾನ ಇಲಾಖೆ ನವೆಂಬರ್‌ನಲ್ಲಿ ಮಳೆ ಪ್ರಮಾಣ ಇಳಿಕೆಯಾಗಲಿದೆ ಎಂದು ಸೂಚನೆ ನೀಡಿತ್ತು. ಆದ್ರೆ ಇದೀಗ ಮತ್ತೆ ನವೆಂಬರ್ 4 ರಿಂದ ಮಳೆ ಬರುವ ಸಾಧ್ಯತೆ ಇದೆ ಎಂದು ದಿಢೀರ್ ಮುನ್ಸೂಚನೆ ನೀಡಿದೆ. ಒಂದು ವಾರ ಬಿಡುವು ಕೊಟ್ಟಿದ್ದ ಮಳೆ, ಇದೀಗ ಮತ್ತೆ ಬರುವ ಮುನ್ಸೂಚನೆ ನೀಡಿದೆ. ಆದ್ದರಿಂದ ಈ ವಾರಾಂತ್ಯದಲ್ಲಿ ಬೆಂಗಳೂರು (Bengaluru) ಸೇರಿ ರಾಜ್ಯದ ಹಲವೆಡೆ ಮಧ್ಯಮದಿಂದ ಸಾಧಾರಣ ಮಳೆಯಾಗುವ (Rain Alert) ನಿರೀಕ್ಷೆಯಿದೆ.

ಮುಂದಿನ 4 ದಿನ ರಾಜ್ಯದಲ್ಲಿ ಮಳೆ:
ನವೆಂಬರ್ 4 ರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವರುಣಾರ್ಭಟ ಶುರುವಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಅಲ್ಲದೇ ನವೆಂಬರ್ 5 ರಿಂದ 7 ರವರೆಗೆ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನವೆಂಬರ್ 4 ರಂದು ಈ ಜಿಲ್ಲೆಯಲ್ಲಿ ಮಳೆ:
ನವೆಂಬರ್ 4, ಮಂಗಳವಾರ ಉತ್ತರ ಕರ್ನಾಟಕದ ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಮಧ್ಯಮದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಜನರು ಹವಾಮಾನ ಮುನ್ಸೂಚನೆಯನ್ನು ನೋಡಿಕೊಂಡು ಮುಂದುವರೆದರೆ ಉತ್ತಮ.
ನವೆಂಬರ್ 5 ರಿಂದ ಇಲ್ಲೆಲ್ಲಾ ಭಾರೀ ಮಳೆ!
ಇನ್ನು ನವೆಂಬರ್ 5 ರ ನಂತರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಿಸಲಾಗಿದೆ. ಇದು ನವೆಂಬರ್ 7 ರವರೆಗೂ ಮುಂದುವರೆಯುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನವೆಂಬರ್ 4 ರಿಂದ ಉತ್ತರ ಭಾರತದಾದ್ಯಂತ ಹವಾಮಾನದಲ್ಲಿ ವೈಪರೀತ್ಯ ಕಾಣಲಿದೆ. ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ, ದೇಶದ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಈ ಪರಿಣಾಮ ನವೆಂಬರ್ 4 ರಿಂದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ, ಲಡಾಖ್, ಉತ್ತರಾಖಂಡಗಳಲ್ಲಿ ಗುಡುಗು ಸಹಿತ, ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರ್ವಜನಿಕರಿಗೆ ಸಲಹೆ: ಸಾಮಾನ್ಯವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಸ್ವಲ್ಪ ಮಳೆಯಾದರೆ ಸಾಕುಮ ರಸ್ತೆಗಳೆಲ್ಲಾ ಜಲಾವೃತವಾಗುತ್ತದೆ. ಈ ಸಂದರ್ಭಗಳಲ್ಲಿ ಹಲವು ಕಡೆಗಳಲ್ಲಿ ಟ್ರಾಫಿಕ್ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ಆದ್ದರಿಂದ ಪ್ರಯಾಣಿಕರು ಎಚ್ಚರವಹಿಸುವುದು ಅಗತ್ಯ.


Click it and Unblock the Notifications