ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅರೆಸ್ಟ್ ಆದ ಸುದ್ದಿ ರಾಜ್ಯ, ದೇಶದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿಸಿದೆ. ಇದೀಗ ಈ ಕೇಸ್‌ಗೆ ರಾಜಕೀಯ ಲೇಪನ ಕೂಡ ಮೆತ್ತಿಕೊಂಡಿದೆ. ಇದೊಂದು ದೊಡ್ಡ ದಂಧೆ ಎಂದೂ ಪರಿಗಣಿಸಲಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ನಡೆಸಿದ, ಈ ದಾಳಿ ಬಗ್ಗೆ ರಾಜಕೀಯ ವಿರೋಧಿಗಳು ಮೌನವಾಗಿರುವುದನ್ನು ಕರ್ನಾಟಕದ ಗೃಹಸಚಿವ ಡಾ. ಜಿ.ಪರಮೇಶ್ವರ್ ಖಂಡಿಸಿದ್ದಾರೆ. ಅಲ್ಲದೇ ಇದು ದಲ್ಲಿ ಪೊಲೀಸ್ ಶಿಷ್ಟಾಚಾರ ಸೇವೆಗಳ ದುರುಪಯೋಗದ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಪ್ರಮುಖ ನಾಯಕಿಯಾದ ನಟಿ ರನ್ಯಾ ರಾವ್ ಪೊಲೀಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಅವರ ಪುತ್ರಿ ಎಂಬುದು ಜಗಜ್ಜಾಹೀರಾಗಿದೆ. ಈಕೆ 14.2 ಕೆಜಿ ಚಿನ್ನವನ್ನು ಕಳ್ಳಸಾಗಿಸುತ್ತಿದ್ದಾಗ ಡಿಆರ್‌ಐ ಅಧಿಕಾರಿಗಳು ಅವರನ್ನು ತಡೆದರು. ಅಲ್ಲಿ ಗಮನಿಸಬಹುದಾದ ವಿಶೇಷವೇನೆಂದರೆ ಈ ನಟಿ ಪ್ರಮುಖ ಆರೋಪಿಯಾಗಿದ್ದರೂ, ಅವರಿಗೆ ಕಾನ್‌ಸ್ಟೇಬಲ್ ಒಬ್ಬರು ಬೆಂಗಾವಲಾಗಿ ನಿಂತುಕೊಂಡೇ, ನಟಿಯನ್ನು ಪ್ರೋಟೋಕಾಲ್ ಸೇವೆ ಅಡಿಯಲ್ಲಿ ವಿಮಾನ ನಿಲ್ದಾಣದ ಒಳಗಿನಿಂದ ಹೊರಗೆ ಕರೆದೊಯ್ದರು. ಪ್ರೋಟೋಕಾಲ್ ಸಿಬ್ಬಂದಿಯು ಈ ಬಗ್ಗೆ ಡಿಆರ್‌ಐಗೆ ಮಾಹಿತಿ ನೀಡಿದರೂ, ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ತನಿಖೆಗೆ ಆದೇಶಿಸಲಾಗಿಲ್ಲ.
ಇನ್ನು ಈ ವಿಚಾರ ವಿಧಾನಸಭೆಯಲ್ಲೂ ದೊಡ್ಡ ಸಂಚಲನ ಮೂಡಿಸಿತು. ಈ ಬಗ್ಗೆ ಮಾತು ಏರಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಈ ಪ್ರಕರಣವು ಚಿನ್ನದ ಕಳ್ಳಸಾಗಣೆ ಮಾಫಿಯಾ ಹಾಗೂ ಹವಾಲಾ ವಲಯಗಳೊಂದಿಗೆ ಸಂಬಂಧಿಸಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲ ಅವರು ರಾಜ್ಯ ಪೊಲೀಸ್ ಸಿಬ್ಬಂದಿ ಆರೋಪಿಗಳಿಗೆ ವಿಮಾನ ನಿಲ್ದಾಣದಲ್ಲಿ ವಿಶೇಷ ಪ್ರೋಟೋಕಾಲ್ ನೀಡಿರುವ ಕುರಿತು ಪ್ರಶ್ನೆಯನ್ನೂ ಮಾಡಿದರು. ಜೊತೆಗೆ ಇದೇ ವೇಳೆ ಈ ಪ್ರಕರಣದಲ್ಲಿ ಇಬ್ಬರು ಪ್ರಮುಖ ರಾಜ್ಯ ಸಚಿವರು ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ. ಹಾಗೆಯೇ ಸರ್ಕಾರವು ಈ ಸಚಿವರು ಯಾರು ಎಂಬ ವಿವರಗಳನ್ನು ಬಹಿರಂಗಪಡಿಸಬೇಕೆಂದು ಒತ್ತಾಯ ಕೂಡ ಮಾಡಿದರು.
ಈ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಮಾತನಾಡಿದರು. ನಟಿ ರನ್ಯಾ ಕಳೆದ 30 ಕ್ಕೂ ಹೆಚ್ಚು ಬಾರಿ ವಿದೇಶಗಳಿಗೆ ಪ್ರಯಾಣಿಸಿದ್ದಾರೆ. ಅಲ್ಲದೇ ಪ್ರತಿ ಬಾರಿಯೂ ಅವರನ್ನು ವಿಶೇಷ ಶಿಷ್ಟಾಚಾರ ವ್ಯವಸ್ಥೆ ಒದಗಿಸಿ ಸ್ವಾಗತಿಸಲಾಗಿದೆ ಎಂಬುದು ಅನುಮಾನ ಮೂಡಿಸುವ ವಿಷಯ ಎಂದು ಹೇಳಿದರು. ಈ ಇಬ್ಬರೂ ನಾಯಕರ ಆರೋಪ ವಿಧಾನಸಭೆಯಲ್ಲಿ ನಿಜಕ್ಕೂ ದೊಡ್ಡ ಸಂಚಲನ ಸೃಷ್ಟಿಸಿತು.
ಈ ವಿಚಾರ ವಿಧಾನಸಭೆಯಲ್ಲಿ ಗರಿಗೆದರಿದ ಬಳಿಕ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಒಂದು ಸ್ಪಷ್ಟನೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ, ಈ ಪ್ರಕರಣವನ್ನು ಡಿಆರ್‌ಐ ಮತ್ತು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದರೂ, ರಾಜ್ಯ ಸರ್ಕಾರ ತನಿಖೆಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಸಿಬಿಐ ಅಥವಾ ಡಿಆರ್‌ಐ ಈ ಪ್ರಕರಣದ ಪ್ರಗತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಶಗಳ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸಲಿದೆ ಎಂದು ಭರವಸೆ ಕೊಟ್ಟಿದ್ದಾರೆ.
ಸದ್ಯ ಈ ಪ್ರಕರಣ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು, ಇದಕ್ಕೆ ರಾಜಕೀಯ ಲೇಪನ ಮೆತ್ತಿಕೊಂಡಿದೆ. ಸದ್ಯ ಈ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇದನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳು ಪ್ರತ್ಯೇಕವಾಗಿ ನಡೆಸುವ ಸಾಧ್ಯತೆಯಿದೆ. ಶಿಷ್ಟಾಚಾರ ಸೇವೆಗಳ ದುರುಪಯೋಗ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿಯನ್ನು ಅರಿಯಲು ರಾಜ್ಯ ಸರ್ಕಾರ ತನಿಖೆ ನಡೆಸಲಿದೆ. ನಟಿ ರನ್ಯಾ ರಾವ್ ಈ ಪ್ರಕರಣದಲ್ಲಿ ನಿಜವಾಗಿಯೂ ಭಾಗಿಯಾಗಿದ್ದಾರಾ ಅಥವಾ ಬೇರೆ ಬಲಶಾಲಿಗಳ ಪರ ಕೆಲಸ ಮಾಡುತ್ತಿದ್ದಾರಾ ಎಂಬುದರ ಸ್ಪಷ್ಟತೆ ಬೇಕಾಗಿದೆ.
ಇನ್ನು ರನ್ಯಾ ರಾವ್ ಕಂಪನಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಕೈಗಾರಿಕಾ ಉದ್ಯಮಕ್ಕೆ ಭೂಮಿ ಮಂಜೂರು ಮಾಡಲಾಗಿದೆ ಎಂಬ ಸುದ್ದಿಯೂ ಹರಡಿದೆ. ಇದೀಗ ಬಿಜೆಪಿ ನಾಯಕರಿಗೂ ಕೂಡ ಈ ಪ್ರಕರಣದ ನಂಟು ಇದೆಯಾ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಈ ಪ್ರಕರಣವು ಭವಿಷ್ಯದಲ್ಲಿ ಈ ರೀತಿಯ ಕಳ್ಳಸಾಗಣೆ ಜಾಲಗಳನ್ನು ತಡೆಗಟ್ಟಲು ಕಠಿಣ ನಿಯಮಾವಳಿಗಳ ಅಗತ್ಯವನ್ನು ಒತ್ತಿಹೇಳುತ್ತದೆ. ತನಿಖೆಯ ಪ್ರಗತಿಯನ್ನೂ, ನ್ಯಾಯ ಪ್ರಾಪ್ತಿಯಾಗುವುದನ್ನೂ ದೇಶವೇ ಕಾತರದಿಂದ ಎದುರುನೋಡುತ್ತಿದೆ. ಸದ್ಯ ಈ ಪ್ರಕರಣ ಸಂಬಂಧ ತನಿಖೆ ಚುರುಕುಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಮಾಹಿತಿಗಳು ಹೊರ ಬೀಳುತ್ತವೆ, ಈ ಪ್ರಕರಣದಲ್ಲಿ ಯಾರದ್ದೆಲ್ಲಾ ಕೈವಾಡವಿದೆ, ಇದರ ಹಿಂದಿನ ಉದ್ದೇಶವೇನು, ಇದು ನಿಜಕ್ಕೂ ರಾಜಕೀಯ ಪ್ರೇರಿತವೋ ಎಂಬುದೆಲ್ಲಾ ತಿಳಿದುಬರಲಿದೆ.


Click it and Unblock the Notifications