ಚಿತ್ರನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಸೇರಿದ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಅವರು ದುಬೈಯಿಂದ ಸುಮಾರು ₹12.56 ಕೋಟಿ ಮೌಲ್ಯದ 14.2 ಕಿಲೋಗ್ರಾಂ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತರಲು ಯತ್ನಿಸಿದ್ದ ಪ್ರಕರಣ ಮನೆ ಮಾತಾಗಿದೆ. ಇದರ ನಡುವೆ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಅದೇನೆಂದರೆ ನಟಿ ರನ್ಯಾ ರಾವ್ ಅವರ Ksiroda India Pvt Ltd ಕಂಪನಿಗೆ, ಫೆಬ್ರವರಿ 22, 2023ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಭೂಮಿ ಮಂಜೂರು ಮಾಡಿತ್ತು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮಾಹಿತಿ ಹಂಚಿಕೊಂಡಿದೆ.

2023ರ ಫೆಬ್ರವರಿ ತಿಂಗಳಲ್ಲಿ ಉಕ್ಕಿನ ಉತ್ಪಾದನಾ ಘಟಕ ಸ್ಥಾಪನೆಗಾಗಿ 12 ಎಕರೆ ಕೈಗಾರಿಕಾ ಭೂಮಿ ಮಂಜೂರು ಮಾಡಲಾಗಿತ್ತು. ಈ ಭೂಮಿ ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಗುರುತಿಸಲಾಗಿತ್ತು ಎನ್ನಲಾಗಿದೆ. 137ನೇ ರಾಜ್ಯ ಮಟ್ಟದ ಏಕಜಾಲರಿ ಅನುಮೋದನಾ ಸಮಿತಿಯ ಸಭೆಯಲ್ಲಿ ಈ ಭೂಮಿ ಹಂಚಿಕೆ ಮಂಜೂರಾಗಿತ್ತು. ಅಲ್ಲದೇ ಈ ಯೋಜನೆಯಡಿ ₹138 ಕೋಟಿ ಹೂಡಿಕೆ ಮಾಡಲಾಗುವುದು ಎಂಬ ಮಾತು ಕೇಳಿ ಬಂದಿದ್ದಲ್ಲದೇ, 160 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತೀರ್ಮಾನಿಸಲಾಗಿತ್ತು.
ಇನ್ನು KIADB ಬಿಡುಗಡೆ ಮಾಡಿದ ಈ ಒಂದೇ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಅಲೆಯನ್ನೇ ಸೃಷ್ಟಿಸಿದೆ. ಏಕೆಂದರೆ ಈಗ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರಕ್ಕೆ, ಬಿಜೆಪಿ ವಿರುದ್ಧ ತಿರುಗಿಬೀಳಲು ಹೊಸ ಪುಷ್ಠಿ ಸಿಕ್ಕಂತಾಗಿದೆ. ಕಾಂಗ್ರೆಸ್ ವಿರುದ್ಧ ಉರಿದು ಬೀಳುತ್ತಿರುವ ಕೇಸರಿಪಡೆ ಬಾಯಿ ಮುಚ್ಚಿಸಲು, ರನ್ಯಾ ರಾವ್ ಅವರ ಭೂ ವಿವಾದವೇ ದೊಡ್ಡ ಅಸ್ತ್ರವಾಗಿದೆ. ನಿಮ್ಮ ಸರ್ಕಾರವಿದ್ದಾಗಲೇ ಇಂಥ ಕೆಲಸಗಳು ನಡೆಯುವುದು ಎಂದು ತಿವಿಯಲು, ಚೂರಿ ಸಿಕ್ಕಂತಾಗಿದೆ. ನಟಿ ರನ್ಯಾ ರಾವ್ ದುಬೈನಿಂದ ಸುಮಾರು ₹12.56 ಕೋಟಿ ಮೌಲ್ಯದ 14.2 ಕಿಲೋಗ್ರಾಂ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತರಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿರುವ ಸುದ್ದಿ ಜಗಜ್ಜಾಹೀರಾಗಿದೆ. ಇದರ ನಡುವೆಯೇ 2023ರಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗಾಗಿ ಭೂಮಿಯನ್ನು ಮಂಜೂರು ಮಾಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದ್ದು, ರಾಜಕೀಯ ಲೇಪನ ಮೆತ್ತಿಕೊಂಡಂತಾಗಿದೆ.
ಹೌದು, ಹಲವು ವಿವಾದಗಳಿಂದ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗಳು ನಡೆಯುತ್ತಿವೆ. ಸರ್ಕಾರದ ಒಂದಷ್ಟು ವಿಫಲತೆಗಳನ್ನು ಇಟ್ಟುಕೊಂಡು ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ. ಸರ್ಕಾರದ ವೈಫಲ್ಯತೆಯನ್ನು ಹಿಡಿಯಲು ವಿರೋಧ ಪಕ್ಷವಾದ ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆಯೇ ರನ್ಯಾ ರಾವ್ ಅವರ ಭೂ ವಿವಾದ ಪ್ರಕರಣವೂ ಮುನ್ನೆಲೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ಇದು ಮುಜುಗರ ತರುವ ಸಂಗತಿ ಎನ್ನಲಾಗಿದೆ. ಹಳೆಯ ಸರ್ಕಾರದ ಅವಧಿಯಲ್ಲಿ ನಡೆದ ಈ ಭೂಮಿ ಹಂಚಿಕೆ ಪ್ರಕ್ರಿಯೆ ಪೂರ್ಣ ಪ್ರಮಾಣದ ಪರಿಶೀಲನೆಗೆ ಒಳಪಡಬೇಕೆಂದು ಸರ್ಕಾರ ಒತ್ತಾಯಿಸಿದೆ. ಮಾಜಿ ಸರ್ಕಾರದ ಆಡಳಿತಾವಧಿಯಲ್ಲಿ ಈ ಭೂಮಿ ಹಂಚಿಕೆ ನ್ಯಾಯಬದ್ಧವಾಗಿತ್ತಾ? ಅಥವಾ ಪ್ರಭಾವ ಬಳಸಿ ಮಂಜೂರಾತಿ ಪಡೆದಿತ್ತಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ರನ್ಯಾ ರಾವ್ ಅವರ ಕಂಪನಿಗೆ ಭೂಮಿ ಹಂಚಿಕೆ ಹಳೆಯ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಿದ್ದರೂ, ಇದು ಕಾನೂನುಬಾಹಿರ ಹಣ ಮಾರ್ಗೀಕರಣ ಅಥವಾ ರಾಜಕೀಯ ಪ್ರಭಾವದ ಪರಿಣಾಮವೇ? ಎಂಬ ಪ್ರಶ್ನೆಗಳು ಎದ್ದಿವೆ.
ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣ:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನ ತಪಾಸಣೆ ನಡೆಸಿದ, ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿತ್ತು. ಸುಮಾರು ₹12.56 ಕೋಟಿ ಮೌಲ್ಯದ ಚಿನ್ನದ ಬಾರ್‌ಗಳು ಪತ್ತೆಯಾಗಿದ್ದು ದೇಶದೆಲ್ಲೆಡೆ ದೊಡ್ಡಮಟ್ಟದ ಸುದ್ದಿಯಾಯಿತು. ಬಳಿಕ ಅವರು ವಾಸವಿದ್ದ ಮನೆ ಮೇಲೆ ದಾಳಿ ಮಾಡಿದಾಗ, ಅಲ್ಲಿ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹2.67 ಕೋಟಿ ನಗದು ವಶಪಡಿಸಿಕೊಳ್ಳಲಾಯಿತು. ಒಟ್ಟು ₹17.29 ಕೋಟಿ ಮೌಲ್ಯದ ಆಸ್ತಿ ಮತ್ತು ನಗದು ವಶ ಪಡಿಸಿಕೊಂಡು, ಈ ಪ್ರಕರಣವನ್ನು ಚಿನ್ನದ ಕಳ್ಳಸಾಗಾಣಿಕೆ ಮಾಫಿಯಾ ಜಾಲದ ಒಂದು ದೊಡ್ಡ ಹೊಡೆತ ಎಂದು ಅಧಿಕಾರಿಗಳು ಘೋಷಿಸಿದರು.
ಇನ್ನು ನಟಿ ರನ್ಯಾ ರಾವ್ ಯಾರೆಂಬುದು ಇತ್ತೀಚೆಗೆ ಬಹಳಷ್ಟು ಹರಿದಾಡಿಗೆ. ಕರ್ನಾಟಕದ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಗಳಾದ ಇವರು, ಇಂಥ ದೊಡ್ಡ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ನಿಜಕ್ಕೂ ಅಸಮಾಧಾನಕರ ಸಂಗತಿಯಾಗಿದೆ. ರಾಮಚಂದ್ರ ರಾವ್ ಪ್ರಸ್ತುತ ಕರ್ನಾಟಕ ಪೊಲೀಸ್ ಗೃಹ ವಿನ್ಯಾಸ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (KSPH & IDCL) ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರು ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿಲ್ಲ ಎಂದು ತಿಳಿದುಬಂದಿದೆ.


Click it and Unblock the Notifications