ಬೆಂಗಳೂರು, ಅಕ್ಟೋಬರ್ 10: ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ (86) ಬುಧವಾರ ರಾತ್ರಿ ಮುಂಬೈನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ಸ್ವತಃ ಅವರೇ ನಾನು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಬುಧವಾರ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ರತನ್ ಟಾಟಾ ಅವರ ದೂರದೃಷ್ಟಿ ಮತ್ತು ಕನಸುಗಳಿಂದ ಟಾಟಾ ಸಮೂಹ ಬಹುರಾಷ್ಟ್ರೀಯ ಕಂಪನಿಯಾಗಿ ಜಾಗತಿಕಮಟ್ಟದಲ್ಲಿಯೂ ತನ್ನ ಸಾಮ್ರಾಜ್ಯವನ್ನು ಹೊಂದಿದೆ. ಉಪ್ಪಿನಿಂದ ಉಕ್ಕಿನ ತನಕ ಟಾಟಾ ಹಲವು ವಲಯಗಳಲ್ಲಿ ತನ್ನ ಛಾಪು ಮೂಡಿಸಿದೆ. ವಿಶ್ವಾಸಾರ್ಹತೆಯಿಂದಲೇ 'ಟಾಟಾ' ಎಂಬುದು ಬಹುದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿದೆ.

ಎರಡು ದಶಕಗಳ ಕಾಲ ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷರಾಗಿ ರತನ್ ಟಾಟಾ ಸಾಮ್ರಾಜ್ಯವನ್ನು ಮುನ್ನಡೆಸಿದ್ದರು. ದೇಶಕ್ಕೆ ಮತ್ತು ಕೈಗಾರಿಕಾ ವಲಯಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ರತನ್ ಟಾಟಾ ಚಿಕ್ಕಪ್ಪ ಜೆಆರ್‌ಡಿ ಟಾಟಾ ಬಳಿಕ 1991ರಲ್ಲಿ ರತನ್ ಟಾಟಾ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು. ಒಂದು ದಶಕದ ಬಳಿಕ ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾದರು. 100ಕ್ಕೂ ಅಧಿಕ ದೇಶಗಳಲ್ಲಿ 30ಕ್ಕೂ ಅಧಿಕ ಕಂಪನಿಗಳನ್ನು ಟಾಟಾ ಸಮೂಹ ಸಂಸ್ಥೆ ಒಳಗೊಂಡಿದೆ. ರತನ್ ಟಾಟಾ ಬಳಿಕ ಉತ್ತರಾಧಿಕಾರಿ ಯಾರು? ಎಂಬುದು ಸದ್ಯದ ಪ್ರಶ್ನೆಯಾಗಿದೆ.
ವಿಶ್ವದ ಅತಿ ದೊಡ್ಡ ಉದ್ಯಮದಲ್ಲಿ ಟಾಟಾ ಸಂಸ್ಥೆಯೂ ಒಂದು. 2023-24ನೇ ಹಣಕಾಸು ವರ್ಷದಲ್ಲಿ ಸಮೂಹ ಸಂಸ್ಥೆಗಳ ಒಟ್ಟು ವರಮಾನ ಸುಮಾರು 165 ಬಿಲಿಯನ್ ಡಾಲರ್. ವಿಶ್ವದ ಅತ್ಯಂತ ಪ್ರಭಾವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಎಂದಿಗೂ ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಪೈಪೋಟಿ ನಡೆಸಲಿಲ್ಲ. ಟಾಟಾ ಸಮೂಹದ ಮೂಲಕ ಅವರು ಸಮಾಜ ಸೇವೆಗಾಗಿಯೇ ಟಾಟಾ ಟ್ರಸ್ಟ್ ಕೂಡ ನಡೆಸುತ್ತಿದ್ದರು.
ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಯಾರು?: 2017ರಲ್ಲಿ ರತನ್ ಟಾಟಾ ಎನ್. ಚಂದ್ರಶೇಖರ್ ಅವರಿಗೆ ಜವಾಬ್ದಾರಿಯನ್ನು ವಹಿಸಿ ನಿವೃತ್ತರಾದರು. ಬುಧವಾರ ರಾತ್ರಿ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಎನ್. ಚಂದ್ರಶೇಖರ್, 'ರತನ್ ಟಾಟಾ ಇನ್ನಿಲ್ಲ. ರತನ್ ಟಾಟಾ ಅವರು ನನಗೆ ಸ್ನೇಹಿತ, ಗುರು, ಮಾರ್ಗದರ್ಶಿ' ಎಂದು ನೆನಪು ಮಾಡಿಕೊಂಡಿದ್ದಾರೆ.
ರತನ್ ಟಾಟಾ ಅವಿವಾಹಿತರಾಗಿದ್ದರು. ಆದ್ದರಿಂದ ರತನ್ ಟಾಟಾ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಎದುರಾಗಿದೆ. ಹಲವಾರು ಹೆಸರುಗಳು ಕೇಳಿ ಬರುತ್ತಿವೆ. ಮೊದಲು ಕೇಳಿ ಬರುವ ಹೆಸರು ನೋಯಲ್ ಟಾಟಾ. ರತನ್ ಟಾಟಾ ತಂದೆಯ ಎರಡನೇ ಪತ್ನಿ ಸಿಮೋನ್ ಅವರ ಪುತ್ರ ನೋಯಲ್ ಟಾಟಾ. ಟಾಟಾ ಕುಟುಂಬದ ಉದ್ಯಮ ಮುನ್ನಡೆಸುವಲ್ಲಿ ಕೌಟುಂಬಿಕವಾಗಿ ನೋಯಲ್ ಟಾಟಾ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ನೋಯಲ್ ಟಾಟಾ ಹಿರಿಯ ಪುತ್ರಿ ಲಿಯಾ ಟಾಟಾ ಹೆಸರು ಸಹ ಮುಂಚೂಣಿಯಲ್ಲಿದೆ. ಸ್ಪೇನ್‌ನಲ್ಲಿ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲಿಯಾ ಸದ್ಯ ಟಾಟಾ ಸಮೂಹದ ತಾಜ್ ಹೋಟೆಲ್, ರೆಸಾರ್ಟ್‌ಗಳನ್ನು ನೋಡಿಕೊಳ್ಳುತ್ತಿದ್ದಾರೆ.
34 ವರ್ಷದ ಮಾಯಾ ಟಾಟಾ ಹೆಸರು ಸಹ ಕೇಳಿ ಬರುತ್ತಿದೆ. ಬೇಯಸ್ ಬಿಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಟಾಟಾ ಆಪರ್ಚುನಿಟೀಸ್ ಫಂಡ್ ಮತ್ತು ಟಾಟಾ ಡಿಜಿಟಲ್‌ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಟಾಟಾ ನ್ಯೂ ಅಪ್ಲಿಕೇಶನ್‌ನಲ್ಲಿಯೂ ಮಾಯಾ ಟಾಟಾ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ನೆವಿಲ್ಲೆ ಟಾಟಾ ಟಾಟಾ ಕುಟುಂಬ ಒಡೆತನದ ಹಲವು ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಟಾಟಾ ಟ್ರೆಂಡ್ ಅಡಿಯಲ್ಲಿರುವ ಸ್ಟಾರ್ ಬಜಾರ್ ಅನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇವರ ಉದ್ಯಮದ ಚಾಕಚಕ್ಯತೆ ಇತ್ತು ದೂರದೃಷ್ಟಿ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂಬ ಮಾತುಗಳಿವೆ.


Click it and Unblock the Notifications