ವಿಶ್ವ ಬ್ಯಾಂಕ್ 2023ರ ಜಾಗತಿಕ ಬೆಳವಣಿಗೆ ಅಂದಾಜು ದರವನ್ನು ಏರಿಕೆ ಮಾಡಿದೆ. ಆದರೆ ಭಾರತದ 2023ರ ಜಿಡಿಪಿ ಬೆಳವಣಿಗೆ ದರವನ್ನು ಮಾತ್ರ ಇಳಿಕೆ ಮಾಡಿದೆ. ಹಣಕಾಸು ವರ್ಷ 2024ರಲ್ಲಿ ಭಾರತದ ಜಿಡಿಪಿ ದರವು ಶೇಕಡ 6.3ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಇನ್ನು ಈ ಹಿಂದೆ ಜನವರಿ 2023ರಲ್ಲಿ ಭಾರತದ ಜಿಡಿಪಿ ದರವು ಶೇಕಡ 6.6ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿತ್ತು. ಈ ಅಂದಾಜನ್ನು ಈಗ ವಿಶ್ವ ಬ್ಯಾಂಕ್ ಶೇಕಡ 6.3ಕ್ಕೆ ಇಳಿಕೆ ಮಾಡಿದೆ. ಇನ್ನು ಆರ್ಥಿಕ ತಜ್ಞರ ಅಂದಾಜು ಮೀರಿ ಭಾರತದ 2022-23ರ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಜಿಡಿಪಿ ದರವು ಶೇಕಡ 6.1ಕ್ಕೆ ಏರಿಕೆಯಾಗಿದೆ. ಜಿಡಿಪಿ ಕಡಿತಕ್ಕೆ ಇಲ್ಲಿದೆ ಪ್ರಮುಖ 3 ಕಾರಣ. ಮುಂದೆ ಓದಿ...

1. ಹಣದುಬ್ಬರವು ಹೆಚ್ಚಾಗಿರುವುದರಿಂದ ಕುಗ್ಗಿದ ಖಾಸಗಿ ಅನುಭೋಗ (Consumption)
ಏಪ್ರಿಲ್‌ನಿಂದ ಮಾರ್ಚ್‌ವರೆಗಿನ ಹಣಕಾಸು ವರ್ಷ 2023-24ರಲ್ಲಿ ವಿಶ್ವ ಬ್ಯಾಂಕ್ ಭಾರತದಲ್ಲಿ ಬೆಳವಣಿಗೆಯು ಶೇಕಡ 6.3ಕ್ಕೆ ನಿಧಾನವಾಗಲಿದೆ ಎಂದು ವಿಶ್ವ ಬ್ಯಾಂಕ್ ನಿರೀಕ್ಷಿಸುತ್ತದೆ. ಇದು ಹಿಂದಿನ ಅಂದಾಜು ಶೇಕಡ 6.6ಕ್ಕಿಂತ ಶೇಕಡ 0.3ರಷ್ಟು ಇಳಿಕೆಯಾಗಿದೆ. ಖಾಸಗಿ ಅನುಭೋಗವೆಂದರೆ ಜನರು ಖರ್ಚು ಮಾಡುವ ಪ್ರಮಾಣವಾಗಿದೆ.
ವಿಶ್ವಬ್ಯಾಂಕ್ ಭಾರತದ ಬೆಳವಣಿಗೆ ದರವನ್ನು ಕಡಿತಗೊಳಿಸಲು ಪ್ರಮುಖ ಕಾರಣ ಹೆಚ್ಚಿನ ಹಣದುಬ್ಬರವಾಗಿದೆ. ಹಣದುಬ್ಬರ ಹೆಚ್ಚಾಗಿರುವುದರಿಂದ ಅನುಭೋಗವು (Consumption) ನಿಧಾನಗತಿಯಾಗಿದೆ. ಹಣದುಬ್ಬರವು ಹೆಚ್ಚಳವಾದಾಗ, ಬೆಲೆ ಎರಿಕೆಯಾಗುತ್ತದೆ, ಇದರಿಂದಾಗಿ ಜನರು ಖರೀದಿ ಮೊದಲಾದವುಗಳಿಗೆ ಖರ್ಚು ಮಾಡುವ ಪ್ರಮಾಣ ಕಡಿಮೆಯಾಗಲಿದೆ ಅಂದರೆ ಅನುಭೋಗ ಕಡಿಮೆಯಾಗಲಿದೆ.
ಹೆಚ್ಚಿನ ಹಣದುಬ್ಬರದಿಂದಾಗಿ ಹೆಚ್ಚಿನ ಬಡ್ಡಿದರ ಇರಲಿದೆ. ಇದರಿಂದಾಗಿ ಸಾಲದ ಬಡ್ಡಿದರವು ಕೂಡಾ ಹೆಚ್ಚಳವಾಗಲು ಕಾರಣವಾಗಲಿದೆ. ಇದು ದೇಶದಲ್ಲಿ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡಲಿದೆ. ಇನ್ನು ಏಪ್ರಿಲ್‌ನಲ್ಲಿ ಸಿಪಿಐ ಆಧಾರಿತ ಹಣದುಬ್ಬರ ದರವು ಶೇಕಡ 4.7ಕ್ಕೆ ಇಳಿಕೆಯಾಗಿದೆ.
2. ಆರ್ಥಿಕ ಬಲವರ್ಧನೆಯಿಂದಾಗಿ ಪ್ರಭಾವಿತವಾದ ಸರ್ಕಾರದ ಅನುಭೋಗ (Consumption)
ವಿಶ್ವಬ್ಯಾಂಕ್ ಭಾರತದ ಜಿಡಿಪಿ ದರವನ್ನು ಕಡಿತಗೊಳಿಸಲು ಇನ್ನೊಂದು ಮುಖ್ಯ ಕಾರಣ ಆರ್ಥಿಕ ಬಲವರ್ಧನೆಯಿಂದಾಗಿ ಪ್ರಭಾವಿತವಾದ ಸರ್ಕಾರದ ಅನುಭೋಗ (Consumption) ಪ್ರಮಾಣವಾಗಿದೆ. ಅಷ್ಟಕ್ಕೂ ಆರ್ಥಿಕ ಬಲವರ್ಧನೆ (fiscal consolidation) ಏನು ಎಂಬುವುದು ತಿಳಿಯಿರಿ.
ಸರ್ಕಾರವು ಪ್ರಸ್ತುತ ಹಣಕಾಸಿನ ಕೊರತೆಯನ್ನು (fiscal deficit) ಹೊಂದಿದೆ. ಅಂದರೆ ಸರ್ಕಾರದ ವೆಚ್ಚವು ಅದರ ಆದಾಯಕ್ಕಿಂತ ಹೆಚ್ಚಾಗಿರುವುದು ಆಗಿದೆ. ಈ ಹಣಕಾಸಿನ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರವು ವೆಚ್ವವನ್ನು ಕಡಿತಗೊಳಿಸುತ್ತಿದೆ. ಸರ್ಕಾರವು ಎಂದಿಗೂ ಕೂಡಾ ಅತೀ ದೊಡ್ಡ ವೆಚ್ಚವನ್ನು ಮಾಡುತ್ತದೆ. ಆದರೆ ಇದರ ಕಡಿತವಾದಾಗ, ಬೆಳವಣಿಗೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಜಿಡಪಿ ಕಡಿಮೆಯಾಗುತ್ತದೆ.
3. ಭಾರತಕ್ಕೆ ಹೆಚ್ಚುತ್ತಿರುವ ಸಾಲದ ವೆಚ್ಚಗಳು
ಕೇಂದ್ರ ಬಜೆಟ್‌ನಲ್ಲಿ 2023-24ರ ಹಣಕಾಸು ವರ್ಷದಲ್ಲಿ ಸರ್ಕಾರದ ಒಟ್ಟು ಮಾರುಕಟ್ಟೆ ಸಾಲವು 15.43 ಲಕ್ಷ ಕೋಟಿ ರೂಪಾಯಿ ಆಗಿದೆ. ಬಡ್ಡಿದರಗಳು ಹೆಚ್ಚಾದಂತೆ, ಸರ್ಕಾರದ ಸಾಲ ವೆಚ್ಚವು ಕೂಡಾ ಅಧಿಕವಾಗುತ್ತಾ ಸಾಗುತ್ತದೆ. ಈ ನಡುವೆ ವಿತ್ತೀಯ ಕೊರತೆಯು ಕೂಡಾ ಇರುವುದಿಂದಾಗಿ ಖರ್ಚು ಮಾಡುವ ಪ್ರಮಾಣವನ್ನು ಕಡಿಮೆ ಮಾಡಬೇಕಾಗುತ್ತದೆ.
ಮಾರ್ಚ್ 2023 ರ ಕೊನೆಯ ಹಣಕಾಸು ವರ್ಷದಲ್ಲಿ ಭಾರತದ ವಿತ್ತೀಯ ಕೊರತೆಯು ಶೇಕಡ 6.4 ಆಗಿದೆ. ಇದು ಈ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಒಟ್ಟಾರೆಯಾಗಿ ಜನರು ಖರ್ಚು ಮಾಡುವ ಪ್ರಮಾಣ ಹಾಗೂ ಸರ್ಕಾರದ ವೆಚ್ಚ ಪ್ರಮಾಣವು ಕಡಿಮೆಯಾದಾಗ ಅದು ನೇರವಾಗಿ ಭಾರತದ ಜಿಡಿಪಿ ಮೇಲೆ ಪ್ರಭಾವ ಉಂಟು ಮಾಡುತ್ತದೆ.


Click it and Unblock the Notifications