ಕೊರೊನಾವೈರಸ್ ಪರಿಣಾಮವಾಗಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ಸುಮಾರು 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದೆ.
ದೇಶಕ್ಕೆ ಮಹಾ ಆರ್ಥಿಕ ಸಂಕಟ ಬಂದಾಗ ಸರ್ಕಾರದ ಬಳಿ ಇರುವ ಚಿನ್ನವನ್ನು ಬಳಸಿಕೊಳ್ಳುತ್ತದೆ. ಅಂದರೆ ಚಿನ್ನವನ್ನು ಅಡ ಇಡುವ ಮೂಲಕ ಸಾಲ ಎತ್ತಿ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಶ್ರಮಿಸುವುದುಂಟು. ಅದೇ ರೀತಿ ಸಂಗ್ರಹವಾಗಿರುವ ವಿದೇಶಿ ವಿನಿಮಯ ಬಳಸಿಕೊಳ್ಳುವುದುಂಟು. ಈ ರೀತಿಯ ಪರಿಸ್ಥಿತಿ ಈಗ ಉದ್ಭವಿಸಿದೆ ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಚಿನ್ನವನ್ನು ಕರಗಿಸುವ ಜರೂರು ಬರದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ಕೆಲ ವರದಿಗಳು ಬಂದಿವೆ. ಈ ಕುರಿತು ಇಂಡಿಯನ್ ಎಕ್ಸಪ್ರೆಸ್ ಬೆಳಕು ಚೆಲ್ಲಿದೆ. ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಸಂಭವಿಸಿರುವ ಈ ಹೊತ್ತಿನಲ್ಲಿ ದೇಶದ ವಿದೇಶಿ ವಿನಿಮಯ ಏರಿಕೆ ಕಂಡಿದೆ ಎನ್ನಲಾಗಿದೆ.
493.48 ಬಿಲಿಯನ್ ಡಾಲರ್ ವಿದೇಶಿ ವಿನಿಮಯ
ಭಾರತದ ವಿದೇಶಿ ವಿನಿಮಯ ಮೀಸಲು ಹೆಚ್ಚುತ್ತಿದೆ. ಶೀಘ್ರದಲ್ಲೇ 500 ಬಿಲಿಯನ್ ಡಾಲರ್ ಗಡಿ ತಲುಪಲಿದೆ. ಮೇ ತಿಂಗಳಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಸಾರ್ವಕಾಲಿಕ ಗರಿಷ್ಠ 493.48 ಬಿಲಿಯನ್ ಡಾಲರ್ (ಸುಮಾರು 37.30 ಲಕ್ಷ ಕೋಟಿ ರೂ.) ಗೆ ಏರಿದೆ. ಇದು 1991 ಕ್ಕೆ ಹೋಲಿಸಿದರೆ ಶೇ 8,400 ರಷ್ಟು ಏರಿಕೆಯಾಗಿದೆ.
ವಿದೇಶಿ ಹೂಡಿಕೆ ಹೆಚ್ಚಾಗುತ್ತಿದೆ
ಬಿಕ್ಕಟ್ಟಿನ ಸಮಯದಲ್ಲಿ ಅಥವಾ ಸಾಲ ಪಡೆಯುವ ವ್ಯಾಪ್ತಿಯನ್ನು ಮೊಟಕುಗೊಳಿಸಿದಾಗ ಬಿಕ್ಕಟ್ಟನ್ನು ತಡೆದುಕೊಳ್ಳಲು ವಿದೇಶಿ ವಿನಿಮಯವನ್ನು ಬಳಸಲಾಗುತ್ತಿದೆ. ಆರ್ಥಿಕತೆಯ ಮಂದಗತಿಯ ಹೊರತಾಗಿಯೂ ವಿದೇಶಿ ವಿನಿಮಯ ಸಂಗ್ರಹವು ಹೆಚ್ಚುತ್ತಿದೆ. ಏರಿಕೆಗೆ ಪ್ರಮುಖ ಕಾರಣವೆಂದರೆ ಭಾರತೀಯ ಷೇರುಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ ಹೂಡಿಕೆ ಮತ್ತು ವಿದೇಶಿ ನೇರ ಹೂಡಿಕೆಗಳು (ಎಫ್‌ಡಿಐ). ವಿದೇಶಿ ಹೂಡಿಕೆದಾರರು ಕಳೆದ ಎರಡು ತಿಂಗಳುಗಳಲ್ಲಿ ಹಲವಾರು ಭಾರತೀಯ ಕಂಪನಿಗಳಲ್ಲಿ ಷೇರುಗಳನ್ನು ಪಡೆದುಕೊಂಡಿದ್ದರು.
ಶೇಕಡಾ 61 ರಷ್ಟು ವಿದೇಶಿ ವ್ಯಾಪಾರ ಇಳಿಕೆ
ಮತ್ತೊಂದೆಡೆ, ಕಚ್ಚಾ ತೈಲ ಬೆಲೆಗಳ ಕುಸಿತವು ತೈಲ ಆಮದು ಮೇಲಿನ ವಿನಿಮಯವನ್ನು ತಗ್ಗಿಸಿ, ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಿದೆ. ಅಂತೆಯೇ, ಸಾಗರೋತ್ತರ ವ್ಯಾಪಾರ ಮತ್ತು ವಿದೇಶಿ ಪ್ರಯಾಣವು ತೀವ್ರವಾಗಿ ಕುಸಿದಿದೆ. ಏಪ್ರಿಲ್‌ನಲ್ಲಿ ಶೇಕಡಾ 61 ರಷ್ಟು ವಿದೇಶಿ ವ್ಯಾಪಾರ ಇಳಿಕೆಯಾಗಿ 12.87 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಭಾರತಕ್ಕೆ ಉಳಿತಾಯವಾಗಿದೆ.
ರಿಸರ್ವ್ ಬ್ಯಾಂಕ್‌ಗೆ ಸಾಕಷ್ಟು ಅನುಕೂಲವನ್ನು ಕಲ್ಪಿಸುತ್ತದೆ
ವಿದೇಶಿ ವಿನಿಮಯ ಉಳಿತಾಯವು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸಾಕಷ್ಟು ಅನುಕೂಲವನ್ನು ಕಲ್ಪಿಸುತ್ತದೆ. ಆರ್ಥಿಕ ಮುಂಭಾಗದಲ್ಲಿ ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಒಂದು ದೊಡ್ಡ ಸಹಾಯವಾಗಿ ಅನುಕೂಲ ಆಗುತ್ತದೆ. ಜಿಡಿಪಿ ಅನುಪಾತಕ್ಕೆ ವಿದೇಶಿ ವಿನಿಮಯ ಮೀಸಲು ಶೇ 15 ರಷ್ಟಿದೆ. ವಿದೇಶಿ ವಿನಿಮಯದ ಬಗ್ಗೆ ಆರ್‌ಬಿಐ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸರ್ಕಾರದ ನೀತಿ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತದೆ.


Click it and Unblock the Notifications