ಭಾರತದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಶುಕ್ರವಾರದಂದು 2023ರ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದ (ಮೊದಲ ತ್ರೈಮಾಸಿಕ) ಹಣಕಾಸು ಫಲಿತಾಂಶವನ್ನು ಪ್ರಕಟಿಸಿದ್ದು, ಪ್ರತಿ ಹತ್ತು ರೂಪಾಯಿ ಮುಖಬೆಲೆಯ ಷೇರಿಗೆ 9 ರೂಪಾಯಿ ಲಾಭಾಂಶವನ್ನು (ಡಿವಿಡೆಂಡ್) ಘೋಷಣೆ ಮಾಡಲಾಗಿದೆ. ಕಂಪನಿಯ ನಿವ್ವಳ ಲಾಭವು ಕಳೆದ ವರ್ಷದ ಇದೇ ಅವಧಿಯಲ್ಲಿ ಬಂದಿದ್ದ 17,955 ಕೋಟಿ ರೂಪಾಯಿಗೆ ಹೋಲಿಸಿದಲ್ಲಿ ಶೇಕಡ 10.8ರಷ್ಟು ಇಳಿಕೆ ಆಗಿದ್ದು, 16,011 ಕೋಟಿ ರೂಪಾಯಿಗೆ ಇಳಿದಿದೆ.
ಈ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್‌ನ ಏಕೀಕೃತ ಆದಾಯವು 2,31,132 ಕೋಟಿ ರೂಪಾಯಿ ದಾಖಲಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಬಂದಿದ್ದ 2,42,529 ಕೋಟಿ ರೂಪಾಯಿಗೆ ಹೋಲಿಕೆ ಮಾಡಿದರೆ ಶೇಕಡಾ 4.6 ರಷ್ಟು ಇಳಿಕೆ ಆಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 31 ರಷ್ಟು ಕುಸಿತ ಕಂಡಿದ್ದರಿಂದಾಗಿ ತೈಲದಿಂದ ರಾಸಾಯನಿಕ (O2C) ವ್ಯವಹಾರದಲ್ಲಿ ಆದಾಯ ತುಂಬ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿದೆ.

ರಿಲಯನ್ಸ್ ಜಿಯೋ
ಪ್ರಸಕ್ತ ತ್ರೈ ಮಾಸಿಕದಲ್ಲಿ ರಿಲಯನ್ಸ್ ಜಿಯೋದ ಲಾಭವು ಶೇಕಡಾ 12ರಷ್ಟು ಹೆಚ್ಚಳವಾಗಿ, 4,863 ಕೋಟಿ ರೂಪಾಯಿಯನ್ನು ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಯೋ 4,335 ಕೋಟಿ ರೂಪಾಯಿ ಲಾಭ ದಾಖಲಿಸಿತ್ತು. ಇನ್ನು ಆದಾಯದಲ್ಲೂ ಏರಿಕೆಯನ್ನು ಕಂಡಿದೆ. ಕಳೆದ ಬಾರಿ ಇದೇ ಅವಧಿಗೆ 21,873 ಕೋಟಿ ರೂಪಾಯಿ ದಾಖಲು ಮಾಡಿತ್ತು. ಈ ಬಾರಿ 10 ರಷ್ಟು ಹೆಚ್ಚಳವಾಗಿ, 24,042 ಕೋಟಿ ರೂಪಾಯಿ ಮುಟ್ಟಿದೆ.
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ತನ್ನ ಪಾರಮ್ಯವನ್ನು ಮುಂದುವರಿಸಿದೆ. 2023 ರ ಏಪ್ರಿಲ್ ತಿಂಗಳ ಡೇಟಾದ ಪ್ರಕಾರ, ರಿಲಯನ್ಸ್ ಜಿಯೋ ಒಟ್ಟಾರೆ ಮಾರುಕಟ್ಟೆಯ ಶೇಕಡಾ 37.9ರ ಪಾಲನ್ನು ಹೊಂದಿದ್ದು, ಅಗ್ರ ಸ್ಥಾನದಲ್ಲಿದೆ. ಈ ತ್ರೈಮಾಸಿಕದಲ್ಲಿ 92 ಲಕ್ಷ ನಿವ್ವಳ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. 2023ರ ಜೂನ್ 30ಕ್ಕೆ ಕೊನೆಗೊಂಡ ಅವಧಿಗೆ ಜಿಯೋದ ಗ್ರಾಹಕರ ಸಂಖ್ಯೆಯು 44.85 ಕೋಟಿ ಆಗಿದೆ. ಇದೇ ವೇಳೆ ಜಿಯೋಗೆ ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯವು ರೂ. 180.5 ಆಗಿದ್ದು, ಕಳೆದ ವರ್ಷಕ್ಕಿಂತ ಈ ಸಲ ಶೇ 2.8ರಷ್ಟು ಹೆಚ್ಚಾಗಿದೆ.
ರಿಲಯನ್ಸ್ ರೀಟೇಲ್ ನಿವ್ವಳ ಲಾಭ ಎಷ್ಟಿದೆ?
ಭಾರತದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಶುಕ್ರವಾರ 2023ರ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಲಾಗಿದೆ. ರಿಲಯನ್ಸ್ ರೀಟೇಲ್ ನಿವ್ವಳ ಲಾಭವು ಶೇ 18.8 ರಷ್ಟು ಏರಿಕೆ ಕಂಡು, 2,448 ಕೋಟಿ ರೂಪಾಯಿ ತಲುಪಿದೆ. ಒಟ್ಟಾರೆ ಆದಾಯ ಕಳೆದ ವರ್ಷಕ್ಕಿಂತ ಈ ವರ್ಷ ಶೇ 19 ರಷ್ಟು ಹೆಚ್ಚಳವಾಗಿ, 69,948 ಕೋಟಿ ರೂಪಾಯಿ ಬಂದಿದೆ.


Click it and Unblock the Notifications