ಬೈಜೂಸ್ ಆಪ್‌ನಲ್ಲಿ ಪೋಷಕರಿಗೆ ಆಮಿಷ ಒಡ್ಡಲಾಗಿದೆ ಹಾಗೂ ಸಾಲ ಒಪ್ಪಂದಗಳನ್ನು ಕೂಡಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜೂಸ್‌ನ ಸಿಇಒ ರವೀಂದ್ರನ್‌ಗೆ ಸಮನ್ಸ್ ನೀಡಿದೆ.
ಬೈಜೂಸ್ ಆರ್ಥಿಕ ನಷ್ಟ ಕಾಣುತ್ತಿರುವ ನಡುವೆಯೇ ಸಂಸ್ಥೆಯ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿದೆ. ಬೈಜೂಸ್‌ನಲ್ಲಿ ಸಾಲ ನೀಡುವ ಒಪ್ಪಂದಗಳನ್ನು ಮಾಡಲಾಗುತ್ತಿದೆ. ಪೋಷಕರಿಗೆ ಆಮಿಷ ಒಡ್ಡಲಾಗುತ್ತಿದೆ. ಹಾಗೆಯೇ ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
ಈ ನಡುವೆ ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜೂಸ್‌ನ ಸಿಇಒ ರವೀಂದ್ರನ್‌ಗೆ ನೋಟಿಸ್ ನೀಡಿದೆ. ಎನ್‌ಸಿಪಿಸಿಆರ್ ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆ 2005ರ ಅಡಿಯಲ್ಲಿ ರಚಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಇದರ ನಿರ್ವಹಣೆ ಮಾಡುತ್ತದೆ. ಈ ಆಯೋಗ ನೋಟಿಸ್ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಆರೋಪವೇನು, ಆಯೋಗ ಹೇಳುವುದೇನು?
ಬೈಜೂಸ್‌ನಲ್ಲಿ ಕೋರ್ಸ್‌ಗಳನ್ನು ಖರೀದಿ ಮಾಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಮಿಷ ಒಡ್ಡಿದ್ದಾರೆ. ಸಾಲ ಒಪ್ಪಂದಗಳನ್ನು ಮಾಡಿದ್ದಾರೆ. ದಬ್ಬಾಳಿಕೆ ಮಾಡಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕಾಗಿ ಬೈಜೂಸ್‌ನ ಸಿಇಒ ರವೀಂದ್ರನ್‌ಗೆ ಸಮನ್ಸ್ ನೀಡಿರುವ ಆಯೋಗವು ವಿಚಾರಣೆಗೆ ಖುದ್ಧಾಗಿ ಹಾಜರಾಗುವಂತೆ ತಿಳಿಸಿದೆ.
ಹಾಗೆಯೇ ಕೋರ್ಸ್ ಬಗ್ಗೆ ಮಾಹಿತಿ, ಶುಲ್ಕ ಎಷ್ಟಿದೆ, ನೋಂದಣಿ ಹೇಗೆ, ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ, ಕಂಪನಿಯ ಹಣ ಮರುಪಾವತಿ ನೀತಿ ಮೊದಲಾದವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು ಎಂದು ಕೂಡಾ ಆಯೋಗವು ಸೂಚಿಸಿದೆ.
ಗುಲಾಮರಂತೆ ಉದ್ಯೋಗಿಗಳು!
ಇನ್ನು ಈ ಹಿಂದೆ ಬೈಜೂಸ್‌ನಲ್ಲಿ ಉದ್ಯೋಗಿಗಳನ್ನು ಗುಲಾಮರಂತೆ ನೋಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ಬೈಜೂಸ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ 18 ಉದ್ಯೋಗಿಗಳು ಈ ಹಿಂದೆ ಕಾರ್ಯನಿರ್ವಹಣೆ ಮಾಡಿದ್ದ 8 ಮಂದಿ ಸೇರಿ ಒಟ್ಟು ಸುಮಾರು 21 ಬೈಜೂಸ್ ವಿರುದ್ಧ ಕಿಡಿಕಾರಿದ್ದಾರೆ. ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ಅಧಿಕ ಅವಧಿ ಕೆಲಸ ಮಾಡಿಸಲಾಗುತ್ತಿದೆ.
ದೈಹಿಕ ಹಾಗೂ ಮಾತಿನ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ. ಸಂಸ್ಥೆಯ ಆಪ್‌ನಲ್ಲಿ ಜನರು ಕೋರ್ಸ್ ಖರೀದಿ ಮಾಡದಿದ್ದರೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತದೆ. ವಾರಕ್ಕೆ 72 ಗಂಟೆಗೂ ಅಧಿಕ ಕಾಲ ಕೆಲಸ ಮಾಡಲು ಒತ್ತಡ ಹೇರಲಾಗುತ್ತದೆ ಎಂಬ ಆರೋಪಗಳು ಕೇಳಿಬಂದಿದೆ. 72 ಗಂಟೆಗೂ ಅಧಿಕ ಕಾಲ ಕೆಲಸ ಮಾಡದಿದ್ದರೆ ಕೆಲಸ ತೊರೆದು ಹೋಗಿ ಎಂದು ಕೂಡಾ ಹೇಳಲಾಗುತ್ತಿದೆ.
ಬೈಜೂಸ್ ಉದ್ಯೋಗಿಗಳು ಹೆಚ್ಚಾಗಿ ಕಾಲೇಜು ಪದವಿದರರಾಗಿದ್ದಾರೆ ಹಾಗೂ ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ. ಆದ್ದರಿಂದಾಗಿ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿ ಈ ಉದ್ಯೋಗಿಗಳು ಅವಧಿಗೂ ಅಧಿಕ ದುಡಿಯುತ್ತಿದ್ದಾರೆ ಎಂಬ ಮಾಹಿತಿಯೂ ಕೂಡಾ ಲಭ್ಯವಾಗಿದೆ.


Click it and Unblock the Notifications