ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಏನ್‌ಎಸ್‌ಒ) ಮಂಗಳವಾರ, ಸೆಪ್ಟೆಂಬರ್ 12 ರಂದು ಒದಗಿಸಿದ ಮಾಹಿತಿಯ ಪ್ರಕಾರ ಭಾರತದಲ್ಲಿ ರಿಟೇಲ್ ಹಣದುಬ್ಬರವು ಜುಲೈನ ಗರಿಷ್ಠ ಮಟ್ಟದಿಂದ ಆಗಸ್ಟ್‌ನಲ್ಲಿ ಶೇಕಡ 6.83 ಕ್ಕೆ ಇಳಿಕೆ ಕಂಡಿದೆ. ಜುಲೈ ತಿಂಗಳಿನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕದಿಂದ ಅಳೆಯಲಾಗುವ ಈ ರಿಟೇಲ್ ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟವಾದ ಶೇಕಡ 7.44 ಕ್ಕೆ ಏರಿಕೆ ಕಂಡಿತ್ತು.
ಆಗಸ್ಟ್‌ನ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಶೇಕಡ 6.83 ರಷ್ಟಿದ್ದು, ಜುಲೈನಲ್ಲಿದ್ದ ಹಣದುಬ್ಬರಕ್ಕಿಂತ ಸುಮಾರು 61 ಬೇಸಿಸ್ ಪಾಯಿಂಟ್‌ಗಳು ಕಡಿಮೆಯಾಗಿದೆ. ಆದರೂ ಕೂಡಾ ಭಾರತದಲ್ಲಿ ರಿಟೇಲ್ ಹಣದುಬ್ಬರವು ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಿತಿಗಿಂತ ರಿಟೇಲ್ ಹಣದುಬ್ಬರ ಅಧಿಕವಾಗಿದೆ.

ಹಣದುಬ್ಬರವು ಆರ್‌ಬಿಐನ ಸಹಿಷ್ಣುತೆ ಮಟ್ಟವಾದ ಶೇಕಡ 2-6 ಕ್ಕಿಂತ ಅಧಿಕವಾಗಿರುವುದು ಸತತ ಎರಡನೇ ತಿಂಗಳಾಗಿದೆ. ಹೆಚ್ಚುವರಿಯಾಗಿ, ಸತತ 47 ನೇ ತಿಂಗಳು, ಇದು ಕೇಂದ್ರ ಬ್ಯಾಂಕ್ ನಿಗದಿಪಡಿಸಿದ ಶೇಕಡ 4 ರಷ್ಟರ ಮಿಡಿಯಂ ಟರ್ಮ್ ಗುರಿಯನ್ನು ಮೀರಿದೆ. ಆರ್‌ಬಿಐ ಅಂದಾಜಿನ ಪ್ರಕಾರ ದೇಶದ ಹಣದುಬ್ಬರವು 2024-2025 ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 5 ಕ್ಕಿಂತ ಅಧಿಕವಾಗುತ್ತದೆ.
ಇನ್ನು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 6.20 ಕ್ಕೆ ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿನ ನಗರ ಪ್ರದೇಶಗಳ ಸಿಪಿಐ ಜುಲೈನಲ್ಲಿ ಶೇಕಡ 7.20 ರಿಂದ ಶೇಕಡ 6.59 ಕ್ಕೆ ಕುಸಿದಿದ್ದರೆ, ಅದೇ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳ ಸಿಪಿಐ ಶೇಕಡ 7.63 ರಿಂದ ಶೇಕಡ 7.02 ಕ್ಕೆ ಕುಸಿದಿದೆ.
2023 ರಲ್ಲಿ ರಿಟೇಲ್ ಹಣದುಬ್ಬರ ದರ ಅಥವಾ ಸಿಪಿಐ ಆರ್‌ಬಿಐನ ಗರಿಷ್ಠ ಮಿತಿಯಾದ ಶೇಕಡ 2-6 ಗಿಂತ ಇದು ನಾಲ್ಕನೇ ಬಾರಿಗೆ ಅಧಿಕವಾಗಿದೆ. ನಾವು 2022ರ ಜುಲೈನಿಂದ ಲೆಕ್ಕಾಚಾರ ಹಾಕಿದಾಗ ಇದು ಏಳನೇ ಬಾರಿಗೆ ಆರ್‌ಬಿಐನ ಮಿತಿಯನ್ನು ಮೀರಿದೆ. ಬೆಂಚ್‌ಮಾರ್ಕ್ ಬಡ್ಡಿ ದರವನ್ನು (ರೆಪೋ ದರ) ನಿರ್ಧರಿಸುವಾಗ ಆರ್‌ಬಿಐ ಮುಖ್ಯವಾಗಿ ರಿಟೇಲ್ ಹಣದುಬ್ಬರವನ್ನು ಅವಲಂಭಿಸುತ್ತದೆ. ಮತ್ತೊಂದೆಡೆ, ಭಾರತದ ಕೈಗಾರಿಕಾ ಉತ್ಪಾದನೆಯು ಜೂನ್‌ನಲ್ಲಿ ಶೇಕಡ 3.8 ರಿಂದ ಜುಲೈನಲ್ಲಿ 5.7 ರಷ್ಟು ಹೆಚ್ಚಾಗಿದೆ.
ತರಕಾರಿ ಮಾತ್ರ ಇನ್ನೂ ದುಬಾರಿ
ಆಗಸ್ಟ್‌ನಲ್ಲಿ ರಿಟೇಲ್ ಹಣದುಬ್ಬರ ಇಳಿಕೆಯಾಗಿದ್ದರೂ ಕೂಡಾ ಆಹಾರ ಉತ್ಪನ್ನಗಳ ಪ್ರಮುಖವಾಗಿ ತರಕಾರಿ ದರವು ಇನ್ನೂ ಕೂಡಾ ದುಬಾರಿಯಾಗಿಯೇ ಉಳಿದಿದೆ. ಜುಲೈನಲ್ಲಿ ವರ್ಷದಿಂದ ವರ್ಷಕ್ಕೆ ಟೊಮೆಟೊ ದರವು ಶೇಕಡ 37.4 ರಷ್ಟು ಏರಿಕೆಯಾಗಿದೆ. ಆದರೆ ಈಗ ಕೊಂಚ ಇಳಿಕೆಯಾಗಿದೆ. ಆದರೆ ಕಳೆದ ತಿಂಗಳು ಅಂದರೆ ಆಗಸ್ಟ್‌ನಲ್ಲಿ ಶೇಕಡ 26.1 ರಷ್ಟಿದೆ.
ಸಿರಿಧಾನ್ಯಗಳ ಹಣದುಬ್ಬರವು ಜುಲೈನಲ್ಲಿ ಸುಮಾರು ಶೇಕಡ 13 ರಿಂದ ಆಗಸ್ಟ್‌ನಲ್ಲಿ ಶೇಕಡ 11.85 ಕ್ಕೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೆ ಬೇಳೆಕಾಳುಗಳ ಬೆಲೆಗಳು ತಮ್ಮ ವೇಗವನ್ನು ಕಾಯ್ದುಕೊಂಡಿದೆ. ಮತ್ತೆ ಶೇಕಡ 13 ರಷ್ಟು ಏರಿಕೆಯನ್ನು ದಾಖಲಿಸಿದೆ. ಹಣ್ಣುಗಳ ಹಣದುಬ್ಬರವು ಶೇಕಡ 4.05 ಕ್ಕೆ ಏರಿದೆ. ಆದರೆ ಖಾದ್ಯ ತೈಲಗಳ ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡ 15.3ರಿಂದ ಶೇಕಡ 16.8 ಕ್ಕೆ ಇಳಿದಿದೆ.


Click it and Unblock the Notifications