ಭಾರತದ ರಿಟೇಲ್ ಹಣದುಬ್ಬರವು ಸೆಪ್ಟೆಂಬರ್ ತಿಂಗಳಿನಲ್ಲಿ ಇಳಿಕೆಯಾಗಿದೆ. ಸುಮಾರು ಎರಡು ತಿಂಗಳುಗಳ ಬಳಿಕ ರಿಟೇಲ್ ಹಣದುಬ್ಬರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನ ಸಹಿಷ್ಣುಮಟ್ಟಕ್ಕಿಂತ ಕೆಳಕ್ಕೆ ಇಳಿದಿದ್ದು, ಸೆಪ್ಟೆಂಬರ್‌ನಲ್ಲಿ ಶೇಕಡ 5.02 ಕ್ಕೆ ತಲುಪಿದೆ.
ಮಂಗಳವಾರ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ ತಿಂಗಳಿನ ಭಾರತದ ರಿಟೇಲ್ ಹಣದುಬ್ಬರವು ಆಗಸ್ಟ್‌ಗಿಂತ ಅಧಿಕ ಇಳಿಕೆಯಾಗಿದೆ. ಆಗಸ್ಟ್‌ನಲ್ಲಿ ಹಣದುಬ್ಬರವು ಶೇಕಡ 6.83 ಆಗಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5 ರ ಮಟ್ಟಕ್ಕೆ ಇಳಿಕೆಯಾಗಿದೆ.

ತರಕಾರಿ ಬೆಲೆಗಳು ಮತ್ತು ಖಾದ್ಯ ತೈಲಗಳು ಸೇರಿದಂತೆ ಹಲವಾರು ಆಹಾರ ಪದಾರ್ಥಗಳ ಬೆಲೆಯು ತೀವ್ರವಾಗಿ ಕುಸಿತ ಕಂಡ ಕಾರಣದಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ತಣ್ಣಗಾಗಲಿದೆ ಎಂದು ಉದ್ಯಮದ ತಜ್ಞರುಗಳು ಈ ಹಿಂದೆಯೇ ಭವಿಷ್ಯ ನುಡಿದಿದ್ದರು.
ಜುಲೈ 2023 ರಲ್ಲಿ, ಭಾರತದ ಗ್ರಾಹಕ ಬೆಲೆ ಹಣದುಬ್ಬರವು ಶೇಕಡ 7.44 ರಷ್ಟಿದ್ದರೆ, ಅದೇ ವರ್ಷದ ಆಗಸ್ಟ್‌ನಲ್ಲಿ ಶೇಕಡ 6.83 ಕ್ಕೆ ಇಳಿದಿದೆ. ಅದಾದ ಬಳಿಕ ಈಗ ಮತ್ತಷ್ಟು ಇಳಿಕೆಯಾಗಿ ಆರ್‌ಬಿಐನ ಸಹಿಷ್ಣುಮಟ್ಟದ ಒಳಗಿದೆ.
ಸತತವಾಗಿ ಎರಡು ತಿಂಗಳುಗಳ ಕಾಲ ಹಣದುಬ್ಬರವು ಆರ್‌ಬಿಐನ ಸಹಿಷ್ಣುತೆ ಮಟ್ಟವಾದ ಶೇಕಡ 2-6 ಕ್ಕಿಂತ ಅಧಿಕವಾಗಿತ್ತು. ಇನ್ನು ಆರ್‌ಬಿಐ ಅಂದಾಜಿನ ಪ್ರಕಾರ ದೇಶದ ಹಣದುಬ್ಬರವು 2024-2025 ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 5 ಕ್ಕಿಂತ ಅಧಿಕವಾಗುತ್ತದೆ.
"ಸಿಪಿಐ ಹಣದುಬ್ಬರವು ನಮ್ಮ ನಿರೀಕ್ಷೆಗಳಿಗಿಂತ ಹೆಚ್ಚು ಇಳಿಕೆಯಾಗಿದೆ. ಆದರೆ ಹೆಚ್ಚಿನ ಕಚ್ಚಾ ತೈಲ ಬೆಲೆಗಳು, ಧಾನ್ಯಗಳು ಮತ್ತು ಬೇಳೆಕಾಳುಗಳ ಬೆಲೆ ಏರಿಕೆ ಒತ್ತಡ ಸೃಷ್ಟಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಕನಿಷ್ಠ ಮುಂದಿನ ವರ್ಷದ ಮಧ್ಯಭಾಗದವರೆಗೆ ರೆಪೋ ದರ ಸ್ಥಿರವಾಗಿರಿಸಬಹುದು ಎಂಬ ನಿರೀಕ್ಷೆಯಿದೆ," ಎಂದು ಮುಂಬೈನ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಉಪಸ್ನಾ ಭಾರದ್ವಾಜ್ ಹೇಳಿದರು.


Click it and Unblock the Notifications