ಒಂದೆಡೆ ಕೊಲ್ಲಿ ರಾಷ್ಟ್ರಗಳಲ್ಲಿ ತೃತೀಯ ಮಹಾಯುದ್ದದ ಆತಂಕ ಹಾಗೂ ರಷ್ಯಾ-ಉಕ್ರೇನ್ ನಡುವಿನ ಯುದ್ದದ ನಡುವೆಯೂ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಸಾಗುತ್ತಿರುವು ಸಮಾಧಾನಕರ ಸಂಗತಿಯಾಗಿದೆ. ಅದರಲ್ಲೂ ಇತ್ತೀಚಿಗಿನ ವರ್ಷಗಳಲ್ಲಿ ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಭಾರೀ ವೃದ್ದಿಯಾಗುತ್ತಿದ್ದು, ಜಿಡಿಪಿ ಕೂಡ ಏರುಮಟ್ಟದಲ್ಲಿ ಸಾಗುತ್ತಿದೆ.
ಅದರಲ್ಲೂ ಸದ್ಯ ಭಾರತದಲ್ಲಿ ಹೆಚ್ಚಿನ ಬಿಲಿಯನೇರ್ ಉದ್ಯಮಿಗಳು ತಮ್ಮ ಉದ್ಯಮಗಳಲ್ಲಿ ಮಕ್ಕಳು ಹಾಗೂ ಮರಿಮೊಮ್ಮಕ್ಕಳುಗಳನ್ನು ಕೂಡ ಸೇರಿಸುತ್ತಿರುವುದು ನಾವು ಕಾಣುತ್ತಿದ್ದೇವೆ. ಅಂತಹ ಪ್ರಮುಖ ಬಿಲಿಯನೇರ್ ಉದ್ಯಮಿಗಳಲ್ಲಿ ದೇಶಾದ್ಯಂತ ಖ್ಯಾತಿ ಪಡೆದುಕೊಂಡಿರುವ ಡಿ-ಮಾರ್ಟ್ ಸಂಸ್ಥಾಪಕ, ಖ್ಯಾತ ಹೂಡಿಕೆದಾರ, ಉದ್ಯಮಿ ರಾಧಾಕಿಶನ್ ದಮಾನಿ ಕೂಡ ಒಬ್ಬರಾಗಿದ್ದಾರೆ.

ಡಿ-ಮಾರ್ಟ್ ಬಗ್ಗೆ
ಡಿ-ಮಾರ್ಟ್ ಎಂಬುದು ಸೂಪರ್‌ಮಾರ್ಕೆಟ್‌ಗಳು ಮತ್ತು ಹೈಪರ್‌ಮಾರ್ಕೆಟ್‌ಗಳ ಸರಣಿಯಾಗಿದೆ. ಕೇವಲ 2-3ವರ್ಷಗಳಲ್ಲಿ ಡಿ-ಮಾರ್ಟ್‌ನ ಖ್ಯಾತಿ ಉತ್ತುಂಗಕ್ಕೆ ಏರಿದೆ. ಬಿಲಿಯನ್ ಡಾಲರ್ ಉದ್ಯಮವನ್ನು ಮುನ್ನಡೆಸುತ್ತಿರುವ ರಾಧಾಕಿಶನ್ ದಮಾನಿ ಅವರು ಸದ್ಯ ತಮ್ಮ ಪುತ್ರಿ ಮಧು ಚಂದಕ್ ಅವರ ನೆರವು ಪಡೆಯುತ್ತಿದ್ದಾರೆ. ಡಿ-ಮಾರ್ಟ್‌ನಲ್ಲಿ ಹಲವು ರೀತಿಯ ವ್ಯವಹಾರಗಳನ್ನು ನಿರ್ವಹಿಸಲು ಮಧು ಚಂದಕ್ ಅವರು ತಮ್ಮ ತಂದೆ ದಮಾನಿಗೆ ಸಹಾಯ ಮಾಡುತ್ತಿದ್ದಾರೆ.
ಸದ್ಯ ಕಂಪೆನಿಯು ಅಕ್ಟೋಬರ್ 8ರ ಹೊತ್ತಿಗೆ ಬರೊಬ್ಬರಿ 2.91ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ದಮಾನಿ ಅವರು ಬರೊಬ್ಬರಿ 23 ಬಿಲಿಯನ್ ಡಾಲರ್ ಮೊತ್ತದ ಸಂಪತ್ತಿನ ಒಡೆಯರಾಗಿದ್ದಾರೆ. ಅವರ ಮೂವರು ಪುತ್ರಿಯರಾದ ಮಧು ಚಂದಕ್, ಮಂಜ್ರಿ ಚಂದಕ್ ಮತ್ತು ಜ್ಯೋತಿ ಕಾಬ್ರಾ ಅವರು ಸ್ಥಾಪಿಸಿದ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಈ ಪೈಕಿ ಮಧು ಚಂದಕ್ ಅವರು ಹೆಚ್ಚಿನ ಪ್ರಮಾಣದಲ್ಲಿ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಪರಿಪೂರ್ಣ ರೀತಿಯಲ್ಲಿ ಎಲ್ಲಾ ರಂಗಗಳಲ್ಲೂ ಭಾಗಿಯಾಗುತ್ತಿದ್ದಾರೆ. ಸದ್ಯ ಮಧು ಅವರು ಬರೊಬ್ಬರಿ 1,66,253 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ.
ರಿಟೇಲ್ ಉದ್ಯಮದ ಕಿಂಕ್ ರಾಧಾಕಿಶನ್ ದಮಾನಿ!
ತಮ್ಮ ರಿಟೇಲ್ ಉದ್ಯಮದ ಮೂಲಕ ಭಾರತದಲ್ಲಿ ಮನೆಮಾತಾಗಿರುವ ದಮಾನಿ ಅವರನ್ನು ಎಲ್ಲರೂ ರಿಟೇಲ್ ಉದ್ಯಮದ ಕಿಂಕ್ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರಸಿದ್ದ ಫೋರ್ಬ್ಸ್ ಮ್ಯಾಗಝಿನ್ ವರದಿ ಪ್ರಕಾರ ದಮಾನಿ ಅವರ ಮಗಳು ಮಧು ಅವರ ನಿವ್ವಳ ಸಂಪತ್ತು ಮೌಲ್ಯ 1,66,253 ಕೋಟಿ ರೂ. ಆಗಿರುವುದು ಅವರ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.
ಇಂಗ್ಲೆಂಡ್‌ನ ಕಾರ್ಡಿಫ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಮಧು ಅವರು ಸದ್ಯ ಬಾಂಬೆ ಸ್ವದೇಶಿ ಸ್ಟೋರ್ಸ್‌ನಲ್ಲಿ ನಿರ್ದೇಶಕಿಯೂ ಆಗಿದ್ದಾರೆ. ಬಾಂಬೆ ಸ್ವದೇಶಿ ಸ್ಟೋರ್ಸ್ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್, ಮುಮೊಹಂದಾಸ್ ರಾಮ್‌ಜಿ ಮತ್ತು ಕೈಗಾರಿಕೋದ್ಯಮಿ ಜೆಆರ್‌ಡಿ ಟಾಟಾರಿಂದ ಸ್ಥಾಪಿಸಲ್ಪಟ್ಟ ದೇಶದ ಅತ್ಯಂತ ಹಳೆಯ ಚಿಲ್ಲರೆ ವ್ಯಾಪಾರ ಸಂಸ್ಥೆಯಾಗಿದೆ. ಅಲ್ಲದೆ ಅಶೋಕ ವಿಶ್ವವಿದ್ಯಾನಿಲಯದ ಬೋರ್ಡ್ ಆಫ್ ಟ್ರಸ್ಟಿಯಲ್ಲಿ ದಮಾನಿ ಅವರನ್ನು ಮಗಳು ಮಧು ಪ್ರತಿನಿಧಿಸುತ್ತಿರುವುದು ಕೂಡ ವಿಶೇಷವಾಗಿದೆ.
ಹಲವು ಜವಾಬ್ದಾರಿಗಳನ್ನು ಹೊತ್ತಿರುವ ಮಧು!
ಇನ್ನು ಡಿ-ಮಾರ್ಟ್ ಉದ್ಯಮದ ಸಿಎಸ್‌ಆರ್ ಚಟುವಟಿಕೆಗಳನ್ನು ಕೂಡ ಮಧು ಅವರೇ ನಿರ್ವಹಿಸುತ್ತಾರೆ. ದಮಾನಿ ಭಾರತದ ಅತ್ಯಂತ ಪ್ರಸಿದ್ಧ ಷೇರು ಹೂಡಿಕೆದಾರರಲ್ಲಿ ಒಬ್ಬರು. ಅವರ ಆಸ್ತಿಯಲ್ಲಿ ಅಲಿಬಾಗ್‌ನಲ್ಲಿರುವ 156 ಕೋಣೆಗಳ ರಾಡಿಸನ್ ಬ್ಲೂ ರೆಸಾರ್ಟ್ ಅನ್ನು ಒಳಗೊಂಡಿದೆ.
ಇದು ಮುಂಬೈಗೆ ಸಮೀಪವಿರುವ ಜನಪ್ರಿಯ ಬೀಚ್‌ಫ್ರಂಟ್ ಗೆಟ್‌ಅವೇ ಕೂಡ ಆಗಿದೆ. ದಮಾನಿ ಅವರು ತಂಬಾಕು ಸಂಸ್ಥೆ ವಿಎಸ್‌ಟಿ ಇಂಡಸ್ಟ್ರೀಸ್ ಮತ್ತು ಸಿಮೆಂಟ್ ಉತ್ಪಾದಕ ಇಂಡಿಯಾ ಸಿಮೆಂಟ್ಸ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಪಾಲನ್ನು ಹೊಂದಿದ್ದಾರೆ. 69 ವರ್ಷದ ಬಿಲಿಯನೇರ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದಮಾನಿ ಅವರು ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮಧು ಅವರೇ ಎಲ್ಲಾ ವಿಭಾಗಗಳನ್ನು ಮುನ್ನಡೆಸಲಿರುವು ಬಹುತೇಕ ಖಚಿತ ಎಂಬಂತಿದೆ.
ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆ
ಒಟ್ಟಿನಲ್ಲಿ ಇಂದಿನ ಆಧುನಿಕ ಯುಗದಲ್ಲಿ ಭಾರತದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಅದರಲ್ಲೂ ದಮಾನಿ ಅವರ ಮೂವರೂ ಪುತ್ರಿಯರು ಕೂಡ ತಂದೆಯ ಸಾಹಸೋದ್ಯಮಕ್ಕೆ ಹೆಗಲು ನೀಡುತ್ತಿರುವುದು ಪ್ರೇರಣದಾಯಕ ಸಂಗತಿ. ಒಂದು ವಿಚಾರದಲ್ಲಿ ಮಧು ಚಂದಕ್ ಅವರ ಸಾಹಸ ಜೀವನವೇ ಇತರೆ ಮಹಿಳೆಯರಿಗೆ ಸ್ಪೂರ್ತಿದಾಯಕ ಎಂದರೆ ತಪ್ಪಾಗಲಾರದು.


Click it and Unblock the Notifications