ಐಪಿಎಲ್ ಹರಾಜು ಪ್ರಕ್ರಿಯೆಗೆ ಸೌದಿ ಅರೇಬಿಯಾದ ಜಿದ್ದಾದ ಜೆಡ್ಡಾದ ಅಬಾದಿ ಅಲ್ ಜೋಹರ್ ಅರೆನಾದಲ್ಲಿ ಆದಿತ್ಯವಾರ ಭರ್ಜರಿ ಆರಂಭ ನೀಡಲಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಇನ್ನು ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇತಿಹಾಸ ಸೃಷ್ಟಿಯಾಗಿದ್ದು, ಕ್ರಿಕೆಟ್ ಪ್ರಿಯರ ಚಿತ್ತ ಹರಿಸುವಂತೆ ಮಾಡಿದೆ. ಕಳೆದ ಹಲವು ಐಪಿಎಲ್ ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದ ರಿಷಬ್ ಪಂತ್ ರನ್ನು ಈ ಬಾರಿ ಲಕ್ನೋ ಸೂಪರ್ ಜಾಯಂಟ್ಸ್ ಬರೊಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ರಿಷಬ್ ಪಂತ್ ಪಾತ್ರರಾಗಿದ್ದಾರೆ. ಹಾಗಾಗಿ ಮುಂದಿನ ಅಂದರೆ 2025 ರ ಸೀಸನ್ ಮೂಲಕ ರಿಷಬ್ ಲಕ್ನೋ ಸೂಪರ್ ಜಾಯಂಟ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ. ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ರಿಷಬ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಪಂಜಾಬ್ ಕಿಂಗ್ಸ್ ಖರೀದಿಸಲಿದೆ ಎಂದು ಮಾತುಗಳು ಕೂಡ ಪ್ರಬಲವಾಗಿ ಕೇಳಿಬಂದಿದ್ದವು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಸಂಪೂರ್ಣವಾದ ಭಿನ್ನ ಸಂಗತಿಗಳು ಗೋಚರಿಸಿದವು. ಹರಾಜು ಪ್ರಕ್ರಿಯೆಯಲ್ಲಿ ರಿಷಬ್ ಅವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಪಂಜಾಬ್ ಕಿಂಗ್ಸ್ ಯಾವುದೇ ಉತ್ಸಾಹ ತೋರಿರಲಿಲ್ಲ. ಆದರೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಲಕ್ನೋ ಸೂಪರ್ ಜಾಯಂಟ್ಸ್ ನಡುವೆ ಪೈಪೋಟಿ ನಡೆದಿತ್ತು. ಆದರೆ ಅಂತಿಮವಾಗಿ ರಿಷಬ್ ಅವರನ್ನು ಲಕ್ನೋ ಸೂಪರ್ ಜಾಯಂಟ್ಸ್ ಐತಿಹಾಸಿಕ ಮೊತಕ್ಕೆ ಖರೀದಿಸಿತು. ಇನ್ನು ಐತಿಹಾಸಿಕ ಮೊತಕ್ಕೆ ಸೇಲ್ ಆಗುವ ಮೂಲಕ ಕ್ರಿಕೆಟಿಂಗ್ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆದಿರುವ ರಿಷಬ್ ಪಂತ್ ಬಗ್ಗೆ ಕೆಲವು ವಿಚಾರಗಳನ್ನು ನೀವು ತಿಳಿಯಲೇ ಬೇಕಿದೆ. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಪಂತ್, ಕಳೆದ ಹಲವು ಐಪಿಎಲ್ ಆವೃತ್ತಿಗಳಲ್ಲೂ ಡೆಲ್ಲಿ ತಂಡದ ಪರ ಅತ್ಯದ್ಬುತ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ ಕೂಡ ಭಾರೀ ಮೊತ್ತಕ್ಕೆ ಇತರೆ ತಂಡಗಳಿಗೆ ಬಿಕರಿಯಾಗಿದ್ದರು.
ರಿಷಬ್ ಅವರ ಸಂಪತ್ತು
ಈಗಾಗಲೇ ಭಾರತೀಯ ತಂಡದ ಸಕ್ರಿಯ ಸದಸ್ಯರಾಗಿರುವ ಪಂತ್ ಭಾರತೀಯ ಕ್ರಿಕೆಟ್ ನಿಯಂತ್ರನ ಮಂಡಳಿಯ ಜೊತೆ ಗ್ರೇಡ್ 'ಬಿ' ಒಪ್ಪಂದವನ್ನು ಹೊಂದಿದ್ದಾರೆ. ಇನ್ನು 2024 ರ ಮಾಹಿತಿ ಪ್ರಕಾರ ರಿಷಬ್ ಅವರ ನಿವ್ವಳ ಮೌಲ್ಯವು ಅಂದಾಜು 100 ಕೋಟಿ ರೂ. ಆಗಿದೆ ಎನ್ನಲಾಗಿದೆ. ಇನ್ನು ಅವರ ಪ್ರಾಥಮಿಕ ಆದಾಯದ ಮೂಲಗಳು BCCI, IPL ಒಪ್ಪಂದಗಳು ಮತ್ತು ವಿವಿಧ ಜಾಹೀರಾತು ಕಂಪೆನಿಗಳ ಮೊತ್ತ ಕೂಡ ಒಳಗೊಂಡಿವೆ. BCCI ಒಪ್ಪಂದದ ಹೊರತಾಗಿ ರಿಷಬ್ ಅವರು ಪ್ರತೀ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. ಪಡೆಯುತ್ತಿದ್ದು, ಪ್ರತೀ ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಪಡೆಯುತ್ತಿದ್ದಾರೆ. ಅದೇ ರೀತಿ ರಿಷಬ್ ಅವರು ಪ್ರತೀ ಟಿ-ಟ್ವೆಂಟಿ ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಇನ್ನು ಒಟ್ಟಾರೆಯಾಗಿ ಅವರು ಐಪಿಎಲ್ ಮೂಲಕ 74 ಕೋಟಿ ರೂ. ಸಂಪಾದನೆ ಮಾಡಿದ್ದಾರೆ. ಸದ್ಯ ಐಪಿಎಲ್ ಹರಾಜಿನಲ್ಲಿ ಬರೊಬ್ಬರಿ ಮೊತ್ತಕ್ಕೆ ಸೇಲ್ ಆಗಿದ್ದು, ಅವರ ಆಸ್ತಿಯಲ್ಲಿ ಮತ್ತಷ್ಟು ಏರಿಕೆಯಾಗುವಂತೆ ಮಾಡಿದೆ. ರಿಷಬ್ ಪಂತ್ ಅವರ ನಿವಾಸವು ಉತ್ತರಾಖಂಡ್ ನ ರೂರ್ಕಿಯಲ್ಲಿದ್ದು, ಅಲ್ಲಿ ಅವರು ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಮನೆಯ ಮೌಲ್ಯ 60 ಲಕ್ಷ ರೂ.ನಿಂದ 1 ಕೋಟಿ ರೂ. ವರೆಗೆ ಮೌಲ್ಯ ಹೊಂದಿದೆ ಎನ್ನಲಾಗಿದೆ.

ಬೆಳೆಬಾಳುವ ಕಾರುಗಳ ಒಡೆಯ
ಎಲ್ಲಾ ಸೆಲೆಬ್ರಿಟಿಗಳಂತೆ ರಿಷಬ್ ಕೂಡ ಹಲವು ಖ್ಯಾತ ನಾಮ ಕಂಪೆನಿಗಳ ಕಾರುಗಳನ್ನು ಹೊಂದಿದ್ದಾರೆ. ರಿಷಬ್ ಅವರ ಬಳಿ ಭಾರೀ ಬೆಳೆಬಾಳುವ ಹಲವು ಕಾರುಗಳಿದ್ದು, ಅವರ ಸಂಪತ್ತನ್ನು ಪ್ರತಿನಿಧಿಸುವಂತಿದೆ. ರಿಷಬ್ ಬಳಿ 2 ಕೋಟಿ ರೂ. ಬೆಲೆಬಾಳುವ ಫೋರ್ಡ್ ಮಸ್ಟಾಂಗ್, 75 ಲಕ್ಷ ರೂ ಮೌಲ್ಯದ ಮರ್ಸಿಡಿಸ್-ಬೆನ್ಜ್ ಜಿಎಲ್‌ಸಿ, 1.3 ಕೋಟಿ ರೂ. ಮೌಲ್ಯದ ಆಡಿ ಎ8, 2 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಜಿಎಲ್‌ಇ ಮುಂತಾದ ಹಲವು ಕಾರುಗಳನ್ನು ರಿಷಬ್ ಹೊಂದಿದ್ದಾರೆ.


Click it and Unblock the Notifications