ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತಡೆಯಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ನಿರ್ವಹಣೆಯ ಜವಾಬ್ದಾರಿಯನ್ನು ಬೆಂಗಳೂರು ಜಲಮಂಡಳಿ (BWSSB) ಹೊಂದಿದ್ದರೆ, ಶುದ್ಧ ಕುಡಿಯುವ ನೀರಿನ ಘಟಕಗಳ (RO ಪ್ಲಾಂಟ್) ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೋಡಿಕೊಳ್ಳುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಈ ಎರಡೂ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ ಉಂಟಾಗಬಾರದು ಎಂದು ಡಿಸಿಎಂ ಅವರು ಸೂಚಿಸಿದ್ದಾರೆ.
ಈ ಕಾರಣಕ್ಕೆ "ಬೆಂಗಳೂರು ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳ (ಆರ್.ಓ ಪ್ಲಾಂಟ್ ಗಳ) ನಿರ್ವಹಣೆಯ ಜವಬ್ದಾರಿಯನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರ ಮಾಡಲು ಸೂಕ್ತ ಆದೇಶ ಹೊರಡಿಸಿ" ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಬಗ್ಗೆ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ಬೆಂಗಳೂರು ನಗರದ ನಾಗರೀಕರಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಜವಾಬಾರಿಯನ್ನು ಬೆಂಗಳೂರು ಜಲಮಂಡಳಿ ನಿರ್ವಹಿಸುತ್ತಿದೆ. ಆದರೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಈಗ ಬೇಸಿಗೆ ಆರಂಭವಾಗುತ್ತಿದ್ದು, ಒಂದು ವೇಳೆ ಕೊಳವೆಬಾವಿಗಳು ಬತ್ತಿ ಹೋದರೆ ಆರ್.ಓ. ಘಟಕಗಳಿಗೆ ಬೇಕಾಗುವ ನೀರನ್ನು ಬೆಂಗಳೂರು ಜಲಮಂಡಳಿ ಮುಖಾಂತರವೇ ಪೂರೈಸಬೇಕಾಗುತ್ತದೆ. ನೀರು ಸರಬರಾಜು ಮಾಡುವ ಕುರಿತು ಎರಡು ಸಂಸ್ಥೆಗಳ ನಡುವೆ ಯಾವುದೇ ರೀತಿಯ ಸಮನ್ವಯದ ಕೊರತೆ ಉಂಟಾದರೂ ನಾಗರೀಕರಿಗೆ ತೊಂದರೆಯಾಗುತ್ತದೆ. ಆದ ಕಾರಣಕ್ಕೆ ಈ ಅನಾನುಕೂಲತೆ ತಪ್ಪಿಸುವ ದೃಷ್ಟಿಯಿಂದ ಬಿಬಿಎಂಪಿಗೆ ಸೇರಿದ ಎಲ್ಲಾ ಆರ್.ಓ. ಪ್ಲಾಂಟ್ ಗಳನ್ನು ಬೆಂಗಳೂರು ಜಲಮಂಡಳಿಯೇ ನಿರ್ವಹಣೆ ಮಾಡುವುದು ಸೂಕ್ತ" ಎಂದು ಡಿಸಿಎಂ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ಸಂಚಾರ ಕೈಗೊಂಡು ಪರಿಶೀಲಿಸಿದ ವೇಳೆ ಬೆಂಗಳೂರು ನಗರದ ಕೆಲವು ಆರ್.ಓ. ಪ್ಲಾಂಟ್ ಗಳು ಕೆಲಸ ಮಾಡದೇ ಇರುವುದನ್ನು ಗಮನಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲಿಕೆಯ 8 ವಲಯಗಳಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ, ಎಷ್ಟು ಸುಸ್ಥಿತಿಯಲ್ಲಿವೆ, ಎಷ್ಟು ಸ್ಥಗಿತವಾಗಿವೆ ಎಂಬುದರ ಕುರಿತು ಸಮೀಕ್ಷೆ ನಡೆಸಿ ವಾರದೊಳಗಾಗಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದರು.
ನಗರದಲ್ಲಿ ಕಾವೇರಿ 5 ಹಂತದ ಯೋಜನೆ ಈಗಾಗಲೇ ಅನುಷ್ಠಾನದಲ್ಲಿದ್ದು, ನೀರಿನ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಭವಿಷ್ಯದ ನೀರಿನ ಅಗತ್ಯಗಳನ್ನು ಪೂರೈಸಲು ಸಹಾಯವಾಗಲು 1ನೇ ಏಪ್ರಿಲ್ 2025 ರಿಂದ ಕುಡಿಯುವ ನೀರಿನ ಸಂಪೂರ್ಣ ಜವಾಬ್ದಾರಿ ಜಲಮಂಡಳಿ ಇಲಾಖೆಯದ್ದೇ ಆಗಿರುತ್ತದೆ. ಈ ಸಂಬಂಧ ಪಾಲಿಕೆಯ ಒಡೆತನದಲ್ಲಿದ್ದ ಬೋರ್ ವೆಲ್ ಗಳನ್ನು ಹಸ್ತಾಂತರಿಸುವ ಸಂಬಂಧ ಜಲಮಂಡಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅದರ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಾ 1ನೇ ಏಪ್ರಿಲ್ 2025 ವೇಳೆಗೆ ಜಲಮಂಡಳಿಗೆ ಹಸ್ತಾಂತರಿಸಲಾಗುವುದು. ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗೆ ಬರುವ ಅನುದಾನವನ್ನು ಜಲಮಂಡಳಿಗೆ ವರ್ಗಾಯಿಸಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದರು.


Click it and Unblock the Notifications