ಎಲ್ಲೆಲ್ಲೂ ರೋಬೋಟ್‌ಗಳ ಹಾವಳಿ..ದೊಡ್ಡ ದೊಡ್ಡ ಹೋಟೆಲ್ ಸರ್ವಿಸ್, ಐಟಿ ವಲಯ, ಎಲ್ಲಾ ವಲಯವನ್ನೂ ತಿರುಗಾಡಿದ ರೋಬೋಟ್ ಈಗ, ಮನೆಕೆಲಸಕ್ಕೂ ಜಾಯಿನ್ ಆಗಿದೆ. ಹೌದು, ಬೆಂಗಳೂರಿನ ಐಟಿ ನಿವಾಸಿಗಳು ಮನೆ ನಿರ್ವಹಿಸಲು ಮೊದಲೆಲ್ಲ ಕೆಲಸದವರನ್ನು ಇಟ್ಟುಕೊಳ್ತಿದ್ರು. ಆದ್ರೆ ಈಗ ಅವರ ಸಹಾಯವಿಲ್ಲದೇ ಅವರ ಮನೆ ನಿರ್ವಹಣೆ ನಡೆಯುತ್ತಿದೆ. ಹೇಗೆ ಅಂತೀರಾ, ಅವರ ಮನೆಯಲ್ಲಿ ಕೆಲಸದಾಕೆ ಬದಲು ಎಲ್ಲಾ ಕೆಲಸ ಮಾಡ್ತಿರೋದು ರೋಬೋಟ್.

ಇತ್ತೀಚೆಗೆ ವ್ಯಾಪಕವಾಗಿ ಎಲ್ಲಾ ವಲಯಗಳಲ್ಲೂ ಬಳಕೆಯಾಗುತ್ತಿರುವ ಆರ್ಟಿಫಿಸಿಯಲ್ ಇಂಟಲಿಜೆನ್ಸ್, ಅದೆಷ್ಟೋ ಜನರ ಕೆಲಸಕ್ಕೆ ಕೊಡಲಿ ಬೀಳುವಂತೆ ಮಾಡಿತು. ಇದೀಗ ದಿನಕೂಲಿಯಂತೆ ಅವರಿವರ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ, ಬಡ ಜನರ ಕೆಲಸಕ್ಕೂ ಹೊಡೆತ ಬೀಳುವಂತೆ ಮಾಡ್ತಿದ್ಯಾ ಎಂಬ ಆತಂಕ ಶುರುವಾಗಿದೆ. ಏಕೆಂದರೆ ದೇಶದ ಸಿಲಿಕಾನ್ ವ್ಯಾಲಿಯಿಂದ ಹೆಚ್ಚಿನ ಜನರು ಸ್ವಯಂಚಾಲಿತ ಸಾಧನಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅಂದರೆ ಮನೆಕೆಲಸ ಮಾಡುತ್ತಿದ್ದ ಮಹಿಳೆಯರು ಮೊದಲು, ಶುಚಿಗೊಳಿಸುವ ಕೆಲಸ, ಅಡುಗೆ ಮಾಡುವ ಕೆಲಸ ಮಾಡ್ತಿದ್ರು. ಇದೀಗ ಅವರ ಸ್ಥಾನವನ್ನು ರೋಬೋಟ್ ತುಂಬುತ್ತಿದೆ.
ಹೆಬ್ಬಾಳ ಮನೀಷಾ ರಾಯ್ ಮನೆಯಲ್ಲಿ ರೋಬೋಟ್:
ಆಗಲೇ ಹೇಳಿದಂತೆ ಈ ರೋಬೋಟ್‌ಗಳು ಮನೆ ಕೆಲಸದವರ ಸ್ಥಾನವನ್ನೂ ತುಂಬುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬೆಂಗಳೂರಿನ ಹೆಬ್ಬಾಳದಲ್ಲಿ ನೆಲೆಸಿರುವ ಮನೀಷಾ ರಾಯ್. ಇವರು ಏಳು ತಿಂಗಳ ಹಿಂದೆಯೇ ತಮ್ಮ ಮನೆಯಲ್ಲಿ ಹೈಟೆಕ್ ಅಡುಗೆ ಕೆಲಸಗಾರನನ್ನು ಇರಿಸಿಕೊಂಡಿದ್ದಾರೆ. ಅಂದರೆ ರೋಬೋಟ್. ಇವರ ಈ ನಿರ್ಧಾರ ಒಂದು ದಿಕ್ಕನ್ನೇ ಬದಲಿಸಿದೆ ಎಂದರೆ ತಪ್ಪಾಗಲ್ಲ. ಅವರು ಹೇಳುವುದೇನೆಂದರೆ ನಮ್ಮ ಮನೆಯಲ್ಲಿ ಆಹಾರ ತಯಾರಾಗುವಾಗ ನಾನು ಬೇರೆ ಕೆಲಸಗಳನ್ನು ಆರಾಮವಾಗಿ ಮಾಡಿಕೊಳ್ಳಬಹುದ. ಏಕೆಂದರೆ ನಮ್ಮ ಮನೆಯಲ್ಲಿ ಅಡುಗೆ ಹಾಳಾಗುವುದಿಲ್ಲ, ಹೆಚ್ಚಾಗಿ ಸುಡುವುದಿಲ್ಲ ಎಂದು ವ್ಯಕ್ತಪಡಿಸಿದ್ದಾರೆ.
ರೋಬೋಟ್ ಅಡುಗೆ ತುಂಬಾ ಫಾಸ್ಟ್:
ಇನ್ನು ಈ ರೋಬೋಟ್ ಏನು ಕೆಲಸ ಮಾಡಲ್ಲ ಹೇಳಿ. ಎಲ್ಲವನ್ನೂ ಮಾಡುತ್ತೆ. ಪ್ರೀ-ಪ್ರೋಗ್ರಾಮ್ ಮಾಡಲಾದ ಪಾಕವಿಧಾನಗಳು ಚೆನ್ನಾಗೇ ಗೊತ್ತಿದೆ. ತರಕಾರಿ ಕತ್ತರಿಸೋದು, ಫ್ರೈ ಮಾಡುವುದು, ಹಬೆಯಲ್ಲಿ ಬೇಯಿಸುವುದು, ಮಸಾಲ ಬೆರೆಸುವುದು ಎಲ್ಲವನ್ನೂ ಅಚ್ಚುಕಟ್ಟಾಗೇ ಮಾಡುತ್ತವೆ. ಹೆಬ್ಬಾಳದ ಮನೀಷಾ ಸರಳವಾಗಿ ಪದಾರ್ಥಗಳನ್ನು ಸೇರಿಸುತ್ತಾರೆ ಅಷ್ಟೇ. ಮುಂದಿನದ್ದೆಲ್ಲ ರೋಬೋಟ್‌ದೇ ಕೆಲಸ. ನಿಜ ಹೇಳಬೇಕಂದ್ರೆ ರೋಬೋಟ್ ಮ್ಯಾಜಿಕ್‌ನೇ ಮಾಡಿಬಿಡುತ್ತದೆ.
ಅವರು ಹೇಳೋದೇನೆಂದರೆ, ಅವರು ಮೊದಲೇ ಲೋಡ್ ಮಾಡಿದ ಪಾಕವಿಧಾನದ ಪ್ರಕಾರ ಪ್ಯಾನೆಲ್‌ನಲ್ಲಿ ತೋರಿಸಿರುವ ಪದಾರ್ಥಗಳನ್ನು ಸೇರಿಸುತ್ತೇನೆ. ತರಕಾರಿಗಳನ್ನು ಕತ್ತರಿಸುವುದು ಅಥವಾ ಹುರಿಯುವಂತಹ ಕೆಲಸಗಳನ್ನು ರೋಬೋಟ್ ನಿರ್ವಹಿಸುವಾಗ ನಾನು ಸುತ್ತಲೂ ಇರಬೇಕಾಗಿಲ್ಲ ಎಂದಿದ್ದಾರೆ. ಈ ರೋಬೋಟ್‌ನಿಂದ ಮನೀಷಾ ಅವರ ಸಮಯ ಕೂಡ ಉಳಿಯುತ್ತದೆ ಎಂದಿದ್ದಾರೆ.
ಹಾಗೆಯೇ ನಾನು ಮನೆಕೆಲಸದಾಕೆಗೆ ತಿಂಗಳಿಗೆ 2,500 ರೂ.ಗಳನ್ನು ಪಾವತಿಸುತ್ತಿದ್ದೆ, ಆದರೆ ಕೊನೆಯಲ್ಲಿ ನಾನೇ ಬಹಳಷ್ಟು ಕೆಲಸವನ್ನು ಮಾಡುತ್ತಿದ್ದೆ ಎಂಬುದನ್ನೂ ಹೇಳಿದ್ದಾರೆ. ಈಗ ರೋಬೋಟ್ ಸಹಾಯದಿಂದ ವರ್ಷಕ್ಕೆ ಕಡಿಮೆ ಎಂದರೂ ವರ್ಷಕ್ಕೆ 9,000 ರೂ.ಗಳವರೆಗೆ ಉಳಿತಾಯವಾಗುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಮನೆ ಶುಚಿಗೊಳಿಸುವುದಲ್ಲೂ ಚತುರ ರೋಬೋಟ್:
ಮನೆಯಲ್ಲಿ ಅಡುಗೆಗೆ ಸಹಾಯ ಮಾಡುವುದಷ್ಟೇ ಅಲ್ಲ. ಮನೆ ಕ್ಲೀನ್ ಮಾಡುವುದರಲ್ಲೂ ರೋಬೋಟ್‌ಗಳು ನಿಪುಣ. ಇದರ ಬಗ್ಗೆ ವಾಸ್ತುಶಿಲ್ಪಿಯಾದ ಮೀರಾ ವಾಸುದೇವ್ ಎಂಬುವರು ತಮ್ಮ ಅನುಭವ ತಿಳಿಸಿದ್ದಾರೆ. 18 ತಿಂಗಳ ಹಿಂದೆ ಅವರು ತನ್ನ ಸೇವಕಿ ಸೇವೆಯನ್ನು ತ್ಯಜಿಸಿ ರೋಬೋಟಿಕ್ ಶುಚಿಗೊಳಿಸುವ ಉಪಕರಣಗಳನ್ನು ಬಳಸಿಕೊಂಡರು. ಅವರ ರೋಬೋಟ್ ಮನೆಯಲ್ಲಿರುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದವು. ಅವುಗಳನ್ನು ಪೀಠೋಪಕರಣಗಳನ್ನು ಶುಚಿಗೊಳಿಸುತ್ತಿದ್ದವು. ಬಳಿಕ ತಮ್ಮ ಚಾರ್ಜಿಂಗ್ ಡಾಕ್‌ಗೆ ವಾಪಾಸ್ ಆಗುತ್ತಿದ್ದವು. ಹೀಗಾಗಿ ಮೀರಾ ಅವರು ಹೇಳುವುದೇನೆಂದರೆ, ಈ ಸೇವೆ ಭಾರತದಲ್ಲಿ ಹೆಚ್ಚು ಸಾಮಾನ್ಯವಾಗಬೇಕೆಂದು ಅಭಿಪ್ರಾಯಿಸುತ್ತಾರೆ.
ರೋಬೋಟ್ ಮನೆಕೆಲಸದಲ್ಲಿ ನಿಜಕ್ಕೂ ಫ್ಯೂಚರ್?
ಬದಲಾದ ಕಾಲ, ಬದಲಾದ ತಂತ್ರಜ್ಞಾನ, ಈಗ ಮನೆಕೆಲಸದ ಮಹಿಳೆಯರಿಗೂ ಸ್ಪರ್ಧೆ ಯಂತ್ರಗಳೊಂದಿಗೆ. ರೋಬೋಟ್‌ಗಳು ಈಗ ಅಡುಗೆ, ಸ್ವಚ್ಛತೆ, ಸಾಮಾನ್ಯ ಗೃಹಪಾಲನೆ ಎಲ್ಲಕ್ಕೂ ಪೂರಕವಾಗುತ್ತಿವೆ. ಸಮಯ ಉಳಿಯುತ್ತಿದೆ, ಶ್ರಮ ಕಡಿಮೆಯಾಗಿದೆ, ಆದರೆ ಹಳೆಯ ರೀತಿಯ ಮಾನವ ಶ್ರಮದ ಅವಶ್ಯಕತೆ ಹೀಗಾಗಿ ನಿಧಾನವಾಗಿ ಹಿಗ್ಗುತ್ತಿರುವ ದಾರಿಯಲ್ಲಿದೆ.
ಈ ಬೆಳವಣಿಗೆಯು ನಿರಂತರವಾಗಿದ್ರೆ, ಮನೆಕೆಲಸದಲ್ಲೂ "ಡಿಜಿಟಲ್ ಡಿಸ್ರಪ್ಷನ್" ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಬಡ ಮಹಿಳೆಯರಿಗೆ ಇದು ಉದ್ಯೋಗದ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂಬ ಆತಂಕವೂ ಸಹ ಮರೆತಂತಿಲ್ಲ. ಆದರೆ ಮನೀಷಾ ರಾಯ್, ಮೀರಾ ವಾಸುದೇವ್ ಮುಂತಾದವರು ತಾವು ಅನುಭವಿಸಿದ ಅನುಕೂಲಗಳನ್ನು ಹಂಚಿಕೊಳ್ಳುತ್ತಿರುವುದು ತಂತ್ರಜ್ಞಾನದ ಇನ್ನೊಂದು ಮುಖವನ್ನೂ ನಮಗೆ ತೋರಿಸುತ್ತಿದೆ.
ಹೀಗಾಗಿ, ತಂತ್ರಜ್ಞಾನ ಎಲ್ಲಿ ಬೇಕಾದರೂ ಬರುವುದನ್ನು ತಡೆಯಲಾಗದು. ಆದರೆ ಅದನ್ನು ಎಲ್ಲರಿಗೂ ಲಾಭವಾಗುವ ರೀತಿಯಲ್ಲಿ ಬಳಸುವ ಜವಾಬ್ದಾರಿ ನಮಗೆ ಸರ್ವರಿಗೂ ಇದೆ. ಮುಂದಿನ ದಿನಗಳಲ್ಲಿ ರೋಬೋಟ್‌ಗಳು ಮನೆಗಳ ಅಂಗವಾಗಬಹುದಾದರೂ, ಮಾನವೀಯ ಸ್ಪರ್ಶವಿಲ್ಲದ ಸಮಾಜವನ್ನು ನಾವು ರೂಪಿಸಬಾರದು ಎಂಬ ಪ್ರಶ್ನೆಯೂ ಇಂದಿನ ಪರಿಗಣನೆಗೆ ಬರುತ್ತದೆ.


Click it and Unblock the Notifications