ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ವಿವಿಧ ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ 51,000 ಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಸೋಮವಾರ 8ನೇ ಆವೃತ್ತಿಯ ರೋಜ್‌ಗಾರ್ ಮೇಳವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದರು.
ರೋಜ್‌ಗಾರ್ ಮೇಳ ದೇಶದ 45 ಸ್ಥಳಗಳಲ್ಲಿ ನಡೆಯಲಿದೆ. ಯುವಕರಿಗೆ ಹೊಸ ಉದ್ಯೋಗ ಮಾರ್ಗಗಳನ್ನು ತೋರಿಸುವ ನಿಟ್ಟಿನಲ್ಲಿ ಅರೆಸೈನಿಕ ಪಡೆಗಳ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಇದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದರು.

ಅರೆಸೇನಾ ಪಡೆಗಳಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದ್ದು, ನೇಮಕಾತಿಯ ಸಮಯವನ್ನು ಕಡಿಮೆಗೊಳಿಸಲಾಗಿದೆ ಎಂದು ಹೇಳಿದರು. ಯುವಕರಿಗೆ ಉದ್ಯೋಗಾವಕಾಶಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಆಟೋಮೊಬೈಲ್, ಫಾರ್ಮಾ ಕ್ಷೇತ್ರಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಕೂಡಾ ತಿಳಿಸಿದರು.
"ಈ ದಶಕದಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ನಾನು ಈ ಭರವಸೆಯನ್ನು ನೀಡಿದಾಗ, ನಾನು ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ವಹಣೆ ಮಾಡುತ್ತೇನೆ," ಎಂದು ಪ್ರಧಾನಿ ಮೋದಿ ಹೇಳಿದರು. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಾಗಿ ಎಲ್ಲಾ ವಲಯದ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ಆಹಾರದಿಂದ ಫಾರ್ಮಾವರೆಗೆ, ಬಾಹ್ಯಾಕಾಶದಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಯಾವುದೇ ಆರ್ಥಿಕತೆಗಾಗಿ ಎಲ್ಲಾ ಕ್ಷೇತ್ರಗಳು ಬೆಳೆಯುವುದು ಅವಶ್ಯಕ," ಎಂದರು.
ಬ್ಯಾಂಕಿಂಗ್ ಕ್ಷೇತ್ರವನ್ನು ಸುಧಾರಿಸಲು ಮತ್ತು ಸಾಮಾನ್ಯ ಲಭ್ಯತೆಗೆ ಹೆಚ್ಚು ಲಭ್ಯವಾಗುವಂತೆ ಮಾಡುವ ನಿರ್ಧಾರಗಳ ಮೇಲೆ ಉಲ್ಲೇಖಿಸಿದ ಪ್ರಧಾನಿ ಮೋದಿ ಅವರು 9 ವರ್ಷಗಳ ಹಿಂದೆ ಆಗಸ್ಟ್ 28 ರಂದು ಜನ್ ಧನ್ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಉಲ್ಲೇಖಿಸಿದರು. ಈ ಯೋಜನೆಯು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಅರೆಸೈನಿಕ ಪಡೆಗಳ ಸಿಬ್ಬಂದಿ ತಮ್ಮ ಸೇವೆಯ ಸಮಯದಲ್ಲಿಯೂ ಕಲಿಯುವ ಇಚ್ಛೆಯನ್ನು ಮುಂದುವರಿಸಲು ಸೂಚಿಸಿದ ಪ್ರಧಾನಿ ಮೋದಿ, ಕೌಶಲ್ಯ ಅಭಿವೃದ್ಧಿ ಮತ್ತು ಕೋರ್ಸ್‌ಗಳಿಗೆ ಹೊಸ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಹೊಸದಾಗಿ ನೇಮಕಾತಿ ಹೊಂದಿದವರಿಗೆ ಒತ್ತಾಯಿಸಿದರು. "ಈ ಕೋರ್ಸ್‌ಗಳಲ್ಲಿ ನೀವು ಏನನ್ನು ಕಲಿಯುತ್ತೀರಿ ಅದು ಅತ್ಯುತ್ತಮ ಅಧಿಕಾರಿಯಾಗಲು ನಿಮಗೆ ಸಹಾಯ ಮಾಡುತ್ತದೆ," ಎಂದು ತಿಳಿಸಿದರು.
"ಮೇಡ್-ಇನ್-ಇಂಡಿಯಾಕ್ಕೆ ಹೆಚ್ಚು ಒತ್ತು ನೀಡುವ ಲ್ಯಾಪ್‌ಟಾಪ್‌ಗಳನ್ನು, ಕಂಪ್ಯೂಟರ್‌ಗಳ ಖರೀದಿಗೆ ಸರ್ಕಾರ ಗಮನ ಹರಿಸಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ರೋಜ್‌ಗಾರ್ ಮೇಳ ಇಂದು ಭಾರತದಾದ್ಯಂತ 45 ಸ್ಥಳಗಳಲ್ಲಿ ನಡೆಯಿತು.


Click it and Unblock the Notifications