ನವದೆಹಲಿ, ಫೆಬ್ರವರಿ 10: ದೇಶ ಮಾತ್ರವಲ್ಲದೇ ವಿಶ್ವದ ಅತಿದೊಡ್ಡ ಅತ್ಯನ್ನುತ ಹಾಗೂ ಬೃಹತ್ ಐಟಿ ಕಂಪೆನಿಗಳಲ್ಲಿ ಒಂದು ಇನ್ಫೋಸಿಸ್. ಪ್ರಸ್ತುತ 6,98,000 ಕೋಟಿ ರೂಪಾಯಿಗಳ ಬೃಹತ್ ಮಾರ್ಕೆಟ್ ಕ್ಯಾಪ್ ಹೊಂದಿದ್ದು ಇದರ ಬ್ರ್ಯಾಂಚ್‌ಗಳು ದೇಶ ವಿದೇಶದಲ್ಲಿ ಹಬ್ಬಿದೆ.
ನಾರಾಯಣ ಮೂರ್ತಿ ಅವರ 6 ಪಾಲುದಾರರೊಂದಿಗೆ 1981 ರಲ್ಲಿ ಇನ್ಫೋಸಿಸ್ ಅನ್ನು ಪ್ರಾರಂಭಿಸಿದ್ದು, ಇಂದು ಅವರೆಲ್ಲಾ ಪಾಲುದಾರರು ಬಿಲಿಯನೇರ್‌ಗಳಾಗಿದ್ದಾರೆ. ಅಂದು ಮೊಳಕೆಯಂತಿದ್ದ ಇನ್ಫೋಸಿಸ್ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು ನಿಲ್ಲಿಸುವ ಮೂಲಕ ಅದರ ಎಲ್ಲಾ ಸಂಸ್ಥಾಪಕರು ದೊಡ್ಡ ಸಾಧನೆ ಮಾಡಿದ್ದಾರೆ. ಈ ಮೂಲಕ ಪ್ರಪಂಚದಾದ್ಯಂತ ಅವರು ಹೆಸರುವಾಸಿಯಾಗಿದ್ದಾರೆ.

ಇನ್ಫೋಸಿಸ್ ಸಹ-ಸಂಸ್ಥಾಪಕರಲ್ಲಿ ಅತ್ಯುತ್ತಮ ನಾಯಕತ್ವಕ್ಕೆ ಹೆಸರಾಗಿರುವ ಕ್ರಿಸ್ ಎಂದೂ ಕರೆಯಲ್ಪಡುವ ಸೇನಾಪತಿ ಗೋಪಾಲಕೃಷ್ಣನ್ ಕೂಡಾ ಒಬ್ಬರಾಗಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಜನಿಸಿದ ಗೋಪಾಲಕೃಷ್ಣನ್ ಅವರು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.
ತಮ್ಮ ಅಧ್ಯಯನ ಪೂರ್ಣಗೊಂಡ ಬಳಿಕ 1979 ರಲ್ಲಿ ಅವರು ಪಾಟ್ನಿ ಕಂಪ್ಯೂಟರ್ ಸಿಸ್ಟಮ್ಸ್‌ಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರ್ಪಡೆಗೊಂಡರು. ಇದಾದ ಬಳಿಕ ಶೀಘ್ರದಲ್ಲೇ ಅವರು, ಇಂದು ರೂ 6,98,000 ಕೋಟಿ ಮಾರುಕಟ್ಟೆ ಕ್ಯಾಪ್ ಹೊಂದಿರುವ "ಇನ್ಫೋಸಿಸ್ " ಸಂಸ್ಥೆಯನ್ನು ಹುಟ್ಟುಹಾಕಲು ತಾವು ಕೆಲಸ ಮಾಡುತ್ತಿದ್ದ ಕಂಪನಿ ತೊರೆದರು.
ಸೇನಾಪತಿ ಗೋಪಾಲಕೃಷ್ಣನ್ ಅವರರು2011 ರಿಂದ 2014 ರವರೆಗೆ ಇನ್ಫೋಸಿಸ್‌ನ ಉಪಾಧ್ಯಕ್ಷರಾಗಿ ಮತ್ತು 2007 ರಿಂದ 2011 ರವರೆಗೆ ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಜಾಗತಿಕ ವ್ಯಾಪಾರ ಮತ್ತು ತಂತ್ರಜ್ಞಾನ ಚಿಂತನೆಯ ನಾಯಕ ಎಂದು ಗುರುತಿಸಲ್ಪಟ್ಟ ಅವರು, ಏಷ್ಯಾದ ಉನ್ನತ ಕಾರ್ಯನಿರ್ವಾಹಕರ ಸಾಂಸ್ಥಿಕ ಹೂಡಿಕೆದಾರರ ಶ್ರೇಯಾಂಕದಲ್ಲಿ "ಟಾಪ್ ಸಿಇಒ" (IT ಸೇವೆಗಳ ವಿಭಾಗ) ಆಗಿ ಆಯ್ಕೆಯಾದರು. 2011 ರಲ್ಲಿ ಕಾರ್ಪೊರೇಟ್ ಗವರ್ನೆನ್ಸ್ ಏಷ್ಯಾದಿಂದ 2 ನೇ ಏಷ್ಯನ್ ಕಾರ್ಪೊರೇಟ್ ಡೈರೆಕ್ಟರ್ ರೆಕಗ್ನಿಷನ್ ಅವಾರ್ಡ್‌ಗಳ ವಿಜೇತರಲ್ಲಿ ಒಬ್ಬರಾಗಿ ಆಯ್ಕೆಯಾದರು. ಗೋಪಾಲಕೃಷ್ಣನ್ 2014 ರಲ್ಲಿ ಇನ್ಫೋಸಿಸ್‌ನಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಇವರು ಆರಂಭಿಕ ಹಂತದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡುವ ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷರಾಗಿದ್ದಾರೆ.
ಸೇನಾಪತಿ ಗೋಪಾಲಕೃಷ್ಣನ್ ಓರ್ವ ಕೊಡುಗೈದಾನಿಯಾಗಿದ್ದಾರೆ. 105 ವರ್ಷಗಳಷ್ಟು ಹಳೆಯದಾದ ಸಂಸ್ಥೆ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅನೇಕರಿಂದ ದೇಣಿಗೆ ಪಡೆದಿದ್ದರೂ, ಬೃಹತ್ ಪ್ರಮಾಣದಲ್ಲಿ ದಾನ ಮಾಡಿದ ಏಕೈಕ ವ್ಯಕ್ತಿ ಕ್ರಿಸ್ ಅವರಾಗಿದ್ದಾರೆ. ಐಐಎಸ್‌ಸಿ ಬೆಂಗಳೂರಿಗೆ ಮೆದುಳಿನ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಅವರು 225 ಕೋಟಿ ರೂ. ನೀಡಿದ್ದು, ಇದರೊಂದಿಗೆ ಐಐಟಿ ಚೆನ್ನೈನಲ್ಲಿ ನ್ಯೂರೋಕಂಪ್ಯೂಟಿಂಗ್ ಮತ್ತು ಡೇಟಾ ಸೈನ್ಸ್‌ನಲ್ಲಿ ವಿಶಿಷ್ಠ ವಿಸಿಟಿಂಗ್ ಚೇರ್‌ಗಳನ್ನು ಸ್ಥಾಪಿಸಲು ಹೆಚ್ಚುವರಿ 60 ಕೋಟಿ ರೂ ನೀಡಿ ಅತಿ ದೊಡ್ಡ ಲೋಕೋಪಕಾರಿಯಾಗಿ ಹೊರಹೊಮ್ಮಿದ್ದಾರೆ.
ಇಲ್ಲಿಯವರೆಗೆ, ಅವರು ಆಟೋಮೊಬೈಲ್ ಸೇವೆಗಳ ಪೂರೈಕೆದಾರರಾದ ಕಿ ಮೊಬಿಲಿಟಿಯಂತಹ ಹಲವಾರು ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಭಾರತದ ಐಟಿ ಉದ್ಯಮದ ವಿಕಾಸವನ್ನು ವಿವರಿಸುವ ಇತಿಹಾಸ ಎಂಬ ಡಿಜಿಟಲ್ ಅಪ್ಲಿಕೇಶನ್ ಅನ್ನು ಸಹ ರಚಿಸಿದ್ದಾರೆ.


Click it and Unblock the Notifications