ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನ ಸಿಸಿಬಿ ಪೊಲೀಸರು ಅತಿ ದೊಡ್ಡ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 97 ಕೋಟಿ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ. ನಗರದ ನಾಗರಭಾವಿಯಲ್ಲಿರುವ ಬ್ಯಾಂಕ್‌ನಲ್ಲಿ ಜನರು ವಿಐಪಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಬಳಿಕ ಬ್ಯಾಂಕ್ ಸಿಬ್ಬಂದಿಗಳ ಕೈವಾಡದಿಂದಲೇ ವಂಚನೆ ಮಾಡಲಾಗಿತ್ತು.
ಬಂಧಿತರನ್ನು ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್‌ಮೆನ್ ಮನೋಹರ್, ರಾಕೇಶ್, ಕಾರ್ತಿಕ್, ಅಕೌಂಟ್ ಹೋಲ್ಡರ್ ಕೆಂಚೇಗೌಡ, ರಘು, ಲಕ್ಷ್ಮೀಕಾಂತ್, ಮಾಲ ಎಂದು ಗುರುತಿಸಲಾಗಿದೆ. 1.5 ಕೋಟಿ ರೂ. ಹೂಡಿಕೆ ಮಾಡಿದ್ದ ಒಬ್ಬರಿಗೆ ವಂಚನೆ ನಡೆದಿರುವುದು ತಿಳಿದಿದೆ. ಬಳಿಕ ಪರಿಶೀಲನೆ ನಡೆಸಿದರೆ ಸೈಬರ್ ಕ್ರೈಂ ಠಾಣೆಯಲ್ಲಿ ಈ ವಿಚಾರವಾಗಿ 200ಕ್ಕೂ ಅಧಿಕ ದೂರುಗಳು ದಾಖಲಾಗಿದ್ದವು.

ವಿಐಪಿ ಷೇರು ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ಲಾಭ ಬಂದಾಗ ಹೆಚ್ಚಿನ ಮೊತ್ತ ನೀಡುವುದಾಗಿ ಹಣವನ್ನು ಹೂಡಿಕೆ ಮಾಡಿಸಲಾಗಿತ್ತು. ಬಳಿಕ ವಂಚನೆ ಮಾಡಲಾಗಿದೆ. ಇಂತಹ ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್ ಬಂಧನಕ್ಕೊಳಗಾಗಿರುವುದು ಇದೇ ಮೊದಲು. 1.5 ಕೋಟಿ ರೂ. ಹೂಡಿಕೆ ಮಾಡಿದ್ದವರು 28 ಕೋಟಿ ರೂ. ಲಾಭ ಬಂದಿರುವುದು ತಿಳಿದು ಅದನ್ನು ಕೇಳಲು ಹೋದಾಗ ಆರೋಪಿಗಳು ನಡೆಸುತ್ತಿದ್ದ ವಂಚನೆ ಬೆಳಕಿಗೆ ಬಂದಿದೆ.
ಬ್ಯಾಂಕ್ ಮ್ಯಾನೇಜರ್ ಬಂಧನದ ಕುರಿತು ಬ್ಯಾಂಕ್ ಖಚಿತಪಡಿಸಿದೆ. ಈ ಕುರಿತು ಬ್ಯಾಂಕ್ ಮಟ್ಟದಲ್ಲಿ ಮತ್ತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ನಾವು ತನಿಖೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದೆ. ಸಿಬ್ಬಂದಿಗಳು ಹೇಗೆ ಭಾಗಿಯಾಗಿದ್ದರು?, ನಡೆದಿರುವ ವಂಚನೆ ಎಷ್ಟು ಎಂದು ಬ್ಯಾಂಕ್ ಮಟ್ಟದಲ್ಲಿಯೂ ತನಿಖೆ ನಡೆಯುತ್ತಿದೆ.
ಉತ್ತರ ಬೆಂಗಳೂರಿನ ಯಲಹಂಕ ಮೂಲದ ವ್ಯಕ್ತಿ ಮಾರ್ಚ್‌ನಲ್ಲಿ ಒಂದು ದೂರು ನೀಡುತ್ತಾರೆ. ವಾಟ್ಸ್‌ಪ್ ಗ್ರೂಪ್ ಒಂದಕ್ಕೆ ನನ್ನನ್ನು ಸೇರಿಸಲಾಗಿದ್ದು, ಸ್ಟಾಕ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ, 10 ಪಟ್ಟು ಹೆಚ್ಚು ಲಾಭ ಕೊಡುವುದಾಗಿ ಅದರಲ್ಲಿ ಮಾಹಿತಿ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಮೊದಲು 50 ಸಾವಿರ ರೂ. ಹೂಡಿಕೆ ಮಾಡಿದ ಅವರು ಅದಕ್ಕೆ ಸರಿಯಾದ ಲಾಭವನ್ನು ಪಡೆದರು. ಬಳಿಕ ಜೂನ್ ವೇಳೆಗೆ 1.5 ಕೋಟಿ ರೂ. ಹೂಡಿಕೆ ಮಾಡಿದರು. ಆಗ ವಾಟ್ಸಪ್ ಗ್ರೂಪ್‌ನಲ್ಲಿ 28 ಕೋಟಿ ಲಾಭ ಬಂದಿದೆ ಎಂದು ಸ್ಕ್ರೀನ್‌ಶಾಟ್ ಶೇರ್ ಮಾಡಲಾಗಿತ್ತು. ಲಾಭದ ಪಾಲನ್ನು ಹೂಡಿಕೆ ಮಾಡಿದ ವ್ಯಕ್ತಿ ಕೇಳಲು ಹೋದಾಗ ಸರ್ವರ್ ಮ್ಯಾನೇಜ್‌ಮೆಂಟ್‌ಗೆ 75 ಲಕ್ಷ ರೂ. ನೀಡುವಂತೆ ಬೇಡಿಕೆ ಇಡಲಾಗಿತ್ತು.
ಆಗ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು. ತನಿಖೆ ಆರಂಭಿಸಿದ ಪೊಲೀಸರು ಹಲವು ಬ್ಯಾಂಕ್ ಖಾತೆಗಳಿಗೆ ಲಿಂಕ್ ಇರುವ ಕುರಿತು ಮಾಹಿತಿ ಪಡೆದರು. ಎರಡು ಕರೆಂಟ್ ಅಕೌಂಟ್‌ಗಳು ನಾಗರಭಾವಿಯ ಆಕ್ಸಿಸ್ ಬ್ಯಾಂಕ್‌ಗೆ ಸಂಪರ್ಕ ಹೊಂದಿದ್ದವು. ಖಾತೆಯನ್ನು ಚಿಕ್ಕಮಗಳೂರಿನ ಇಬ್ಬರ ಹೆಸರಿನಲ್ಲಿ ತೆರೆಯಲಾಗಿತ್ತು. ಆದರೆ ಅದಕ್ಕೆ ಯಾವುದೇ ವಿಳಾಸದ ದೃಢೀಕರಣ ದಾಖಲೆ ಇರಲಿಲ್ಲ.
ಇನ್ನೂ ನಾಲ್ಕು ಖಾತೆಗಳನ್ನು ಇದೇ ಮಾದರಿಯಲ್ಲಿ ತೆರೆಯಲಾಗಿದ್ದು, ಒಟ್ಟು 6 ಖಾತೆಗಳಿಗೆ ಸುಮಾರು 97 ಕೋಟಿ ರೂ. ವರ್ಗಾವಣೆಯಾಗಿತ್ತು. ಆಗ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಮತ್ತು ಸೇಲ್ಸ್ ಎಕ್ಸಿಕ್ಯುಟಿವ್ ವಿಚಾರಣೆ ನಡೆಸಿದರು. ಸೆಪ್ಟೆಂಬರ್ 26ರಂದು ಇಬ್ಬರನ್ನು ಬಂಧಿಸಿ, ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬಯಲಾಗಿದೆ.
ತನಿಖೆ ಮುಂದುವರೆಸುತ್ತಾ ಹೋದ ಪೊಲೀಸರಿಗೆ ಆರು ಖಾತೆಯನ್ನು ಚಿಕ್ಕಮಗಳೂರು ಮೂಲದ ವ್ಯಕ್ತಿಗಳ ಹೆಸರಿನಲ್ಲಿ ತೆರೆಯಲಾಗಿದೆ. ಅಲ್ಲದೇ ಅದರಲ್ಲಿ ಒಬ್ಬರು ಮಹಿಳೆ ಎಂಬುದು ತಿಳಿದುಬಂದಿದೆ. ಸೆಪ್ಟೆಂಬರ್ 29ರಂದು ಎಲ್ಲರನ್ನೂ ಬಂಧಿಸಿ, ವಿಚಾರಣೆಯನ್ನು ಕೈಗೊಳ್ಳಲಾಗಿದೆ. ಬ್ಯಾಂಕ್ ಮ್ಯಾನೇಜರ್ ಮತ್ತು ಸೇಲ್ಸ್ ಎಕ್ಸಿಕ್ಯುಟಿವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಪ್ರಕರಣದ ಕುರಿತು ದೇಶಾದ್ಯಂತ ಸುಮಾರು 250ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಇವುಗಳಲ್ಲಿ 9 ವ್ಯಕ್ತಿಗಳ ಕೈವಾಡ ಇರುವ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಈ ಮಾದರಿಯ ಯಾವುದೇ ಹೂಡಿಕೆಯನ್ನು ಮಾಡಬೇಡಿ ಎಂದು ಗ್ರಾಹಕರಿಗೆ ಮನವಿ ಮಾಡಿದೆ.


Click it and Unblock the Notifications