ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಅಚ್ಚರಿಯ ಘಟನೆ ನಡೆದಿದೆ. ಅದೇನಂದ್ರೆ ಗೋಕರ್ಣ ಹತ್ತಿರದ ರಾಮತೀರ್ಥ ಬೆಟ್ಟಗಳ ಕಾಡಿನ ಮಧ್ಯದಲ್ಲಿರುವ ಗುಹೆಯಲ್ಲಿ, ರಷ್ಯಾ ಮೂಲದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಇಬ್ಬರು ಮಕ್ಕಳು ಜೊತೆಗಿರುವ 40 ವರ್ಷದ ನೀನಾ ಕುಟಿನಾ ಅಲಿಯಾಸ್ ಮೋಹಿ ಎಂಬ ಈ ಮಹಿಳೆ, ಕಳೆದ ಎರಡು ವಾರಗಳಿನಿಂದ ಎಲ್ಲರ ಕಣ್ಣಿಗೆ ದೂರವಾದ ಆ ಗುಹೆಯಲ್ಲಿ ವಾಸಿಸುತ್ತಿದ್ದಳು ಎಂಬುದು ಈ ಘಟನೆಯಲ್ಲಿನ ಅಚ್ಚರಿಯ ಅಂಶ.

ಹಿಂದೂ ಧರ್ಮದತ್ತ ಆಕರ್ಷಣೆ:
ಮೋಹಿಯು ಹಲವು ವರ್ಷಗಳ ಹಿಂದೆ ವ್ಯಾಪಾರ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಮೂಲತಃ ರಷ್ಯಾದ ನಾಗರಿಕರಾಗಿರುವ ಅವರು, ಮೊದಲು ಗೋವಾದಲ್ಲಿ ನೆಲೆಸಿದ್ದರು. ನಂತರ ಹಿಂದೂ ಧರ್ಮ, ಉಪನಿಷತ್ತು, ಯೋಗ ಮತ್ತು ಧ್ಯಾನದತ್ತ ಆಕರ್ಷಿತರಾಗಿ, ಕರ್ನಾಟಕದ ಗೋಕರ್ಣಕ್ಕೆ ಪಯಣಿಸಿದರು. ಗೋಕರ್ಣವನ್ನು ಅವರು ಆಧ್ಯಾತ್ಮದ ಕೇಂದ್ರ ಎಂದು ಭಾವಿಸಿ, ಅಲ್ಲಿಯ ಕಾಡು ಪ್ರದೇಶದ ಗುಹೆಯೊಂದನ್ನು ತಮ್ಮ ನೆಲೆಯಾಗಿಸಿಕೊಂಡರು.
ಆಕೆಯು ತನ್ನ ಮಕ್ಕಳಾದ ಪ್ರಿಯಾ (6) ಮತ್ತು ಅಮಾ (4) ಅವರನ್ನು ಸಹ ಈ ಜೀವನ ಶೈಲಿಗೆ ಸೇರಿಸಿಕೊಂಡು, ಗುಹೆಯೊಳಗೆ ರುದ್ರನ ವಿಗ್ರಹ ಸ್ಥಾಪಿಸಿ ಪೂಜೆ ಹಾಗೂ ಧ್ಯಾನದಲ್ಲಿ ತೊಡಗಿಸಿಕೊಂಡಿದ್ದಳು. ಈ ಗಹನ ಅರಣ್ಯದ ನಡುವೆ, ಅಳವಡಿಸಿಕೊಂಡ ಗುಹೆಯೇ ಅವಳ ಧ್ಯಾನ ಮಂದಿರವಾಗಿತ್ತು.
ಗುಹೆಯ ಪತ್ತೆ ಹೇಗೆ ಸಾಧ್ಯವಾಯಿತು?
ಗುಹೆಯ ಪತ್ತೆ ಏಕಾಏಕಿ ಆಗಿರಲಿಲ್ಲ. ಕಳೆದ ಕೆಲವು ದಿನಗಳಿಂದ ಗೋಕರ್ಣ ಭಾಗದಲ್ಲಿ ಭಾರೀ ಮಳೆ ಹಾಗೂ ಭೂಕುಸಿತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳೀಯ ಪೊಲೀಸರು ಕಾಡಿನ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಿದ್ದರು. ಇದೇ ಸಂದರ್ಭದಲ್ಲಿ ಕುಮಟಾ ವೃತ್ತದ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್ ಮತ್ತು ಅವರ ತಂಡ ಗುಹೆಯ ಹೊರಗೆ ಬಟ್ಟೆಗಳು ನೇತಾಡುತ್ತಿರುವುದನ್ನು ಗಮನಿಸಿದರು. ಶಂಕೆಯಾದ ಅವರು ಪೊದೆಯೊಳಗೆ ಹೋಗಿ ಪರಿಶೀಲಿಸಿದಾಗ, ಅವರು ಈ ಮಹಿಳೆ ಮತ್ತು ಮಕ್ಕಳನ್ನು ಪತ್ತೆ ಹಚ್ಚಿದರು.
ವೀಸಾ ಮುಕ್ತಾಯ, ಕಾನೂನು ಸಮಸ್ಯೆಗಳು:
ಪೊಲೀಸರ ಪ್ರಾಥಮಿಕ ಪರಿಶೀಲನೆ ವೇಳೆ, ಮೋಹಿಯ ವೀಸಾ ಅವಧಿ ಈಗಾಗಲೇ 2017 ರಲ್ಲಿಯೇ ಮುಕ್ತಾಯಗೊಂಡಿರುವುದು ಸ್ಪಷ್ಟವಾಗಿದೆ. ಇದು ಅವರು ಕಳೆದ 7 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಇದನ್ನು ಆಧಾರದಮಾಡಿಕೊಂಡು ಇದೀಗ ವಿದೇಶಾಂಗಿಯ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.
ಇದೇ ವೇಳೆ, ಅವರು ಗೋವಾದಿಂದ ಗೋಕರ್ಣಕ್ಕೆ ಯಾವುದೇ ದಾಖಲೆ ಇಲ್ಲದೆ ಪ್ರವೇಶಿಸಿದ ಶಂಕೆಯೂ ಇದೆ. ತಮ್ಮ ಮಕ್ಕಳಿಗೆ ಭಾರತೀಯ ಅಥವಾ ರಷ್ಯಾದ ಗುರುತುಪತ್ರಗಳಿಲ್ಲದೆ ಭಾರತದಲ್ಲಿ ಎಷ್ಟು ವರ್ಷಗಳಿಂದ ನೆಲೆಸಿದ್ದಾರೆ ಎಂಬುದು ತನಿಖೆಯ ಕೇಂದ್ರ ಬಿಂದುವಾಗಿದೆ.
ನೀನಾ ಕುಟಿನಾ ಮತ್ತು ಅವರ ಮಕ್ಕಳು ಮತ್ತೆ ಸಾಮಾಜಿಕ ಜಗತ್ತಿಗೆ ತರುವ ಪ್ರಕ್ರಿಯೆ ಈಗ ಆರಂಭವಾಗಿದೆ. ಕಾನೂನು ಕ್ರಮಗಳ ನಂತರ ಅವರಿಗೆ ಸೂಕ್ತ ತೀರ್ಮಾನವಾಗಬಹುದು. ಆದರೆ ಈ ಘಟನೆಯು ಆಧ್ಯಾತ್ಮಿಕ ಅನ್ವೇಷಣೆ ಮತ್ತು ಮಾನವೀಯ ಹಕ್ಕುಗಳ ನಡುವೆ ಇರುವ ಗಂಭೀರ ಗಡಿಬಿಡಿಯನ್ನು ಮತ್ತೆ ಒತ್ತಿ ಹೇಳುತ್ತಿದೆ.


Click it and Unblock the Notifications