ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾ ವೆಸ್ಟ್‌ನಲ್ಲಿರುವ ಅವರ ಐಷಾರಾಮಿ ನಿವಾಸದಲ್ಲಿ ನಡೆದ ಭೀಕರ ಚಾಕು ದಾಳಿಯಲ್ಲಿ ಗಾಯಗೊಂಡ ಅವರು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಆಳವಾದ ಗಾಯ ಹೊಂದಿರುವ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನಟನ ಮನೆಯೊಳಗೆ ಬಂದ ದುಷ್ಕರ್ಮಿಯಿಂದ ಈ ಕೃತ್ಯ ನಡೆದಿದ್ದು, ಮಕ್ಕಳು, ಕುಟುಂಬವನ್ನು ರಕ್ಷಿಸುವಲ್ಲಿ ಸೈಫ್ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಇನ್ನೊಂದೆಡೆ ಘಟನೆ ನಡೆದು ಎರಡು ದಿನ ಕಳೆದರೂ ದಾಳಿಕೋರನನ್ನು ಪತ್ತೆ ಮಾಡಲು ಪೊಲೀಸರ 30 ತಂಡಗಳು ಕಾರ್ಯತತ್ಪರವಾಗಿದ್ದರೂ ಆರೋಪಿ ಪತ್ತೆಯಾಗಿಲ್ಲ.
ಇನ್ನು ನಟ ಸೈಫ್ ಅವರ ಆರೋಗ್ಯ ಸುಧಾರಿಸಿದ್ದು ಆದರೂ ವಿಸಿಟರ್ಸ್ಗಳನ್ನು ಅನುಮತಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನಟ ಸೈಫ್ ಗೆ 10-15 ಸೆಂಟಿಮೀಟರ್ ಉದ್ದದ ಗಾಯವಾಗಿದೆ. ಸೈಫ್ ಬೆನ್ನು ಹುರಿಯ ಬಳಿ ಇದ್ದ ಚಾಕು ತುಂಡು ಹೊರತೆಗೆಯಲಾಗಿದೆ ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಘಟನೆಯ ನಂತರ, ಸೈಫ್ ಅಲಿ ಖಾನ್ ಅವರ ಮಾಡಿಸಿದ್ದ "ನೀವಾ ಬುಪಾ" ಆರೋಗ್ಯ ವಿಮಾ ಕ್ಲೈಮ್ ಫಾರ್ಮ್ ಅನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಬಹಿರಂಗಪಡಿಸಲಾಗಿದೆ. ಸೈಫ್ ಅಲಿ ಖಾನ್ ಅವರ ವೈದ್ಯಕೀಯ ಚಿಕಿತ್ಸೆಗಾಗಿ 35.95 ಲಕ್ಷ ರೂ.ಗೆ ಕ್ಲೈಮ್ ಸಲ್ಲಿಸಿದ್ದಾರೆ ಎಂದು ಮಾಹಿತಿ ಸೋರಿಕೆಯಾದ ದಾಖಲೆಯಲ್ಲಿ ತಿಳಿಸಲಾಗಿದ್ದು, ಈ ಪೈಕಿ 25 ಲಕ್ಷ ರೂ.ಗಳನ್ನು ಈಗಾಗಲೇ ವಿಮಾ ಸಂಸ್ಥೆಯು ಮಂಜೂರು ಮಾಡಲು ಅನುಮೋದಿಸಿದೆ. ಇಷ್ಟು ಮಾತ್ರವಲ್ಲದೇ ಈ ದಾಖಲೆಯು ಅವರ ಸದಸ್ಯ ಐಡಿ, ರೋಗನಿರ್ಣಯ, ಆಸ್ಪತ್ರೆಯಲ್ಲಿ ಪಡೆದುಕೊಂಡ ಕೊಠಡಿಯ ವಿಧ ಮತ್ತು ಜನವರಿ 21 ರಂದು ಆಸ್ಪತ್ರೆಯಿಂದ ನಿರೀಕ್ಷಿತ ಬಿಡುಗಡೆ ದಿನಾಂಕದಂತಹ ಇತ್ಯಾದಿ ಗೌಪ್ಯ ಮಾಹಿತಿಯನ್ನು ಒಳಗೊಂಡಿದೆ.
3,598,700 ಕ್ಲೈಮ್ ಕೇಳಿದ್ದ ಸೈಫ್ ಫ್ಯಾಮಿಲಿ
ಡಾಕ್ಯುಮೆಂಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, 54 ವರ್ಷದ ನಟ ಸೈಫ್ ಅವರು ಲೀಲಾವತಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸೂಟ್ ಕೋಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 16, 2025 ರಿಂದ 'ನಿರ್ದಿಷ್ಟಪಡಿಸದ ದೇಹದ ಭಾಗದಲ್ಲಿ ಗಾಯ' ಚಿಕಿತ್ಸೆಗಾಗಿ ಅವರು ದಾಖಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಕುಟುಂಬವು ಆರಂಭದಲ್ಲಿ 3,598,700 ರೂಪಾಯಿಗಳನ್ನು ಕೋರಿತ್ತು, ಆದರೆ ಕಂಪನಿಯು ಚಿಕಿತ್ಸೆಗೆ 2,500,000 ರೂಪಾಯಿಗಳನ್ನು ಅನುಮೋದಿಸಿದೆ.
ನಿವಾ ಬುಪಾ ಹೆಲ್ತ್ ಇನ್ಶೂರೆನ್ಸ್ ಕಂಪನಿಯು ಮಿಂಟ್‌ನೊಂದಿಗೆ ಕ್ಲೈಮ್‌ಗಳನ್ನು ದೃಢೀಕರಿಸಿದ್ದು, "ಆಸ್ಪತ್ರೆಗೆ ದಾಖಲಾದ ನಂತರ ನಮಗೆ ನಗದುರಹಿತ ಪೂರ್ವ ಅನುಮೋದನಾ ವಿನಂತಿಯನ್ನು ಕಳುಹಿಸಲಾಯಿತು ಮತ್ತು ನಾವು ಚಿಕಿತ್ಸೆಯನ್ನು ಪ್ರಾರಂಭಿಸಲು ಆರಂಭಿಕ ಮೊತ್ತವನ್ನು ಅನುಮೋದಿಸಿದ್ದೇವೆ" ಎಂದು ಹೇಳಿದೆ.
ಮಾಹಿತಿ ಸೋರಿಕೆಯ ಕಳವಳ
ಈ ದಾಖಲೆಗಳ ಅನಧಿಕೃತ ಬಿಡುಗಡೆಯು ಗೌಪ್ಯತೆ ಮತ್ತು ಗ್ರಾಹಕರ ಮೂಲಭೂತ ಹಕ್ಕುಗಳ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಸೋರಿಕೆಯಾದ ದಾಖಲೆಗಳಲ್ಲಿ ಸೈಫ್ ಅಲಿ ಖಾನ್ ಅವರ ಸದಸ್ಯ ಐಡಿ, ರೋಗನಿರ್ಣಯ, ಕೋಣೆಯ ವಿಧ ಮತ್ತು ಬಿಡುಗಡೆ ದಿನಾಂಕದಂತಹ ಗೌಪ್ಯ ಮಾಹಿತಿ ಇದೆ. ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು, ಇದು ಅವರ ಗೌಪ್ಯತೆಗೆ ಅಡ್ದಿಯುಂಟಾಗಬಹುದು. ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಇಡಲು ವಿಮಾ ಕಂಪನಿಗಳು ಸಾಧ್ಯವಾದುವುದಿಲ್ಲವೇ ಎಂದು ಪ್ರಶ್ನೆಗಳು ಹುಟ್ಟುಹಾಕುತ್ತದೆ.
ಏನಾಗಿತ್ತು?
ಜನವರಿ 15-16 ರ ರಾತ್ರಿ ಮುಂಬೈನ ಬಾಂದ್ರಾದಲ್ಲಿರುವ ನಿವಾಸದ ಒಳಹೊಕ್ಕು ಸೈಫ್ ಅಲಿ ಖಾನ್ಗೆ 6 ಬಾರಿ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದೆ. ಸೈಫ್ ದೇಹ ಸೇರಿದ್ದ ಸುಮಾರು 2 ಇಂಚಿನ ಉದ್ದದ ಚಾಕುವನ್ನ ವೈದ್ಯರು ಹೊರ ತೆಗೆದಿದ್ದಾರೆ. 5 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಚಾಕು ಹೊರತೆಗೆದಿದ್ದು ಸೈಫ್ ಅಲಿಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.


Click it and Unblock the Notifications