ಪ್ರತಿ ವರ್ಷವೂ ವೇತನ ಪಡೆಯುವ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುತ್ತಾರೆ. ಆದರೆ ಅದರಲ್ಲಿ ಕೆಲವೊಂದು ಗಿಮಿಕ್‌ಗಳು ನಡೆಯುತ್ತಿರುವುದು ಆದಾಯ ತೆರಿಗೆ ಇಲಾಖೆಯ ಕಣ್ಣಿಗೆ ಬಿದ್ದಿದೆ. ತಮ್ಮ ಹತ್ತಿರದ ಸಂಬಂಧಿ ಬಳಿ ಬೋಗಸ್ ಬಾಡಿಗೆ ರಸೀದಿಯನ್ನು ಪಡೆದುಕೊಂಡು, ಇತರೆ ಪುರಾವೆ ಪಡೆದು ಆದಾಯ ತೆರಿಗೆ ರಿಫಂಡ್ ಪಡೆಯುತ್ತಿವವರ ಮೇಲೆ ಇಲಾಖೆಯ ಕಣ್ಣು ಈಗ ಇದೆ ಎಂದು ವರದಿಯಾಗಿದೆ.
ಹೌದು, ಆದಾಯ ತೆರಿಗೆ ರಿಫಂಡ್ ಅನ್ನು ಪಡೆಯುವ ನಿಟ್ಟಿನಲ್ಲಿ ಹಲವಾರು ಮಂದಿ ತಮ್ಮ ಸಂಬಂಧಿಕರ ಬಳಿ ನಕಲಿ ಬಾಡಿಗೆ ರಸೀದಿ ಪಡೆಯುತ್ತಿದ್ದಾರೆ, ನಕಲಿ ಗೃಹ ಸಾಲ ತೋರಿಸುತ್ತಿದ್ದಾರೆ, ನಕಲಿ ಡೊನೇಷನ್ ರಸೀದಿಯನ್ನು ಕೂಡಾ ಐಟಿಆರ್ ಫೈಲಿಂಗ್ ವೇಳೆ ಲಗತ್ತಿಸುತ್ತಿದ್ದಾರೆ. ಅದು ಕೂಡಾ ತಜ್ಞರ ಸಹಾಯದ ಮೂಲಕ!

ತಜ್ಞರ ಸಹಾಯದ ಮೂಲಕ ಈ ಕ್ರಮ
ಸಾಮಾನ್ಯವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಅತೀ ಕಷ್ಟಕರವಾಗಿ, ಕ್ಲಿಷ್ಟವಾದ ಒಂದು ಪ್ರಕ್ರಿಯೆಯಾಗಿದೆ. ಪ್ರಸ್ತುತ ಆನ್‌ಲೈನ್ ಮೂಲಕ ಐಟಿಆರ್ ಫೈಲಿಂಗ್ ಮಾಡಬಹುದಾದರೂ ಕೂಡಾ ಅದಕ್ಕೂ ತಜ್ಞರ ಸಹಾಯ ಮುಖ್ಯವಾಗುತ್ತದೆ. ಈ ನಡುವೆ ಅದೆಷ್ಟೋ ಮಂದಿ ತಜ್ಞರ ಸಲಹೆಯಂತೆ ಅಧಿಕ ತೆರಿಗೆ ವಿನಾಯಿತಿ ಪಡೆಯಲು ಮತ್ತು ರಿಫಂಡ್ ಅನ್ನು ಹೆಚ್ಚಿಸಲು ತಪ್ಪು ಹಾದಿಯನ್ನು ಹಿಡಿಯುತ್ತಿದ್ದಾರೆ.
ಈ ಹಿಂದೆ ಇಂತಹ ತಪ್ಪು ಹಾದಿಯನ್ನು ಹಿಡಿದು ಅಧಿಕ ತೆರಿಗೆ ರಿಫಂಡ್ ಅನ್ನು ಪಡೆಯುವುದು ಯಾರಿಗೂ ತಿಳಿಯದಂತೆ ಇರುತ್ತಿತ್ತು. ಆದರೆ ಈಗ ಅದು ಸಾಧ್ಯವಲ್ಲ. ಕಂದಾಯ ಇಲಾಖೆಯಲ್ಲಿ ಇದಕ್ಕಾಗಿಯೇ ಸಾಫ್ಟ್‌ವೇರ್‌ಗಳು ಇದೆ. ನಿಮ್ಮ ರಿಟರ್ನ್ ಫೈಲಿಂಗ್ ಅನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡುತ್ತದೆ ಎಂದು ಜುಲೈ 22ರಂದು ಇಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಆದಾಯ ತೆರಿಗೆ ಇಲಾಖೆಯು ಈ ರೀತಿಯಲ್ಲಿ ನಕಲಿ ಪುರಾವೆ ಮೂಲಕ ರಿಫಂಡ್ ಪಡೆಯುವ ಪ್ರಯತ್ನವನ್ನು ಮಾಡಿದವರಿಗೆ ನೋಟಿಸ್ ಕಳುಹಿಸುತ್ತಿದೆ, ಸರಿಯಾದ ಪುರಾವೆಯನ್ನು ಸಲ್ಲಿಸಲು ತಿಳಿಸಿದೆ ಎಂದು ವರದಿ ಹೇಳುತ್ತದೆ. ಹಾಗೆಯೇ ಯಾವೆಲ್ಲ ಪ್ರಕರಣಗಳಲ್ಲಿ ನೋಟಿಸ್ ನೀಡಿ ದಾಖಲೆ ಕೇಳಲಾಗುತ್ತಿದೆ ಎಂದು ಕೂಡಾ ಇಕಾನಮಿಕ್ ಟೈಮ್ಸ್ ವರದಿ ಉಲ್ಲೇಖಿಸಿದೆ.
ವರದಿಯ ಪ್ರಕಾರ ಸೆಕ್ಷನ್ 10 (13A) ಅಡಿಯಲ್ಲಿ ವೇತನ ಪಡೆಯುವ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ ವಿನಾಯಿತಿ, ಸೆಕ್ಷನ್ 10 (14) ಅಡಿಯಲ್ಲಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯಕರನ್ನು ನೇಮಿಸಿಕೊಳ್ಳುವ ಭತ್ಯೆ, ಗೃಹ ಸಾಲಗಳ ಮೇಲಿನ ಬಡ್ಡಿಗೆ ಐ-ಟಿ ಕಾಯಿದೆಯ ಸೆಕ್ಷನ್ 24 (b) ಅಡಿಯಲ್ಲಿ ಕಡಿತ ಪಡೆಯುವವರಿಗೆ ನೋಟಿಸ್ ಅನ್ನು ನೀಡಲಾಗುತ್ತಿದೆ.
50 ಲಕ್ಷ ರೂಪಾಯಿಗಿಂತ ಅಧಿಕ ವೇತನವನ್ನು ಪಡೆಯುವ ವ್ಯಕ್ತಿಗಳು ಒಂದು ದಶಕದ ಒಳಗೆ ಮರುಮೌಲ್ಯಮಾಪನ ಮಾಡಬಹುದು. ಇನ್ನೊಂದೆಡೆ 50 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ, ಎಂಟು ವರ್ಷಗಳವರೆಗಿನ ಐಟಿಆರ್‌ನ ಮರುಮೌಲ್ಯಮಾಪನ ಮಾಡಬಹುದು ಎಂದು ವರದಿ ತಿಳಿಸಿದೆ. ಇನ್ನು ಎಲ್ಲ ದಾಖಲೆಗಳ ಕಂಪ್ಯೂಟರೀಕರಣವು ಐಟಿ ಇಲಾಖೆಗೆ ವಂಚಕರನ್ನು ಪತ್ತೆ ಹಚ್ಚಲು ಸಹಾಯಕವಾಗುತ್ತದೆ.


Click it and Unblock the Notifications