ಇಂಟರ್‌ನೆಟ್‌ನಲ್ಲಿ ಒಂದು ವರ್ಷದ ಹಿಂದೆ ಚಾಟ್‌ಜಿಪಿಟಿ ಮೂಲಕ ಸುದ್ದಿ ಮಾಡಿದ್ದ ಓಪನ್‌ಎಐ ಸಂಸ್ಥೆಯು ಕಳೆದ ಮೂರು ದಿನಗಳ ಹಿಂದೆ ದಿಡೀರ್ ಆಗಿ ತನ್ನ ಸೆಲೆಬ್ರಿಟಿ ಸಿಇಒ ಸ್ಯಾಮ್ ಆಲ್ಟ್‌ಮನ್‌ರನ್ನು ವಜಾಗೊಳಿಸಿದೆ. ಆದರೆ ಈಗ ಓಪನ್‌ಎಐನ ಸಿಇಒ ಆಗಿ ಸ್ಯಾಮ್ ಆಲ್ಟ್‌ಮ್ಯಾನ್‌ರನ್ನು ನೇಮಿಸಲಾಗಿದೆ!
ಸ್ಯಾಮ್ ಆಲ್ಟ್‌ಮ್ಯಾನ್ ಸಹ ಸಂಸ್ಥಾಪನೆ ಮಾಡಿದ ಓಪನ್‌ಎಐ ಸಂಸ್ಥೆಯ ಮಂಡಳಿಯು ಶುಕ್ರವಾರ ಆಲ್ಟ್‌ಮ್ಯಾನ್‌ರನ್ನು ಹಠಾತ್ ವಜಾಗೊಳಿಸಿದೆ. ಇದಾದ ನಂತರ ಐದು ದಿನಗಳ ತೀವ್ರ ಚರ್ಚೆಗಳ ಬಳಿಕ ಈಗ ಮತ್ತೆ ಸ್ಯಾಮ್ ಆಲ್ಟ್‌ಮ್ಯಾನ್‌ರನ್ನು ಸಿಇಒ ಎಂದು ಘೋಷಿಸಿದೆ.

ಅತ್ಯಂತ ಮೌಲ್ಯಯುತವಾದ ಯುಎಸ್‌ನ ಸ್ಟಾರ್ಟ್‌ಅಪ್ ಆಗಿರುವ ಓಪನ್ಎಐ ಆಲ್ಟ್‌ಮ್ಯಾನ್ ಸಂಸ್ಥೆಯ ಉನ್ನತ ಹುದ್ದೆ ಮತ್ತೆ ಸ್ವೀಕಾರ ಮಾಡಿರುವುದನ್ನು "ತಾತ್ವಿಕ ಒಪ್ಪಂದ" ಎಂದು ಹೇಳಿಕೊಂಡಿದೆ. ಈ ನಡುವೆ ಈ ಸಂಸ್ಥೆಯ ಬೋರ್ಡ್ ಕಳೆದ ವಾರ ತಮ್ಮ ನಿರ್ಧಾರದ ವಿರುದ್ಧ ಧ್ವನಿ ಎತ್ತಿದವರನ್ನು ಕೂಡಾ ಬೋರ್ಡ್‌ನಿಂದ ಹೊರಹಾಕುತ್ತಿದೆ ಎಂದು ವರದಿ ಹೇಳಿದೆ.
ಸ್ಯಾಮ್ ಆಲ್ಟ್‌ಮ್ಯಾನ್ ಹೇಳುವುದೇನು?
"ನಾನು ಓಪನ್‌ಎಐ ಅನ್ನು ಪ್ರೀತಿಸುತ್ತೇನೆ ಮತ್ತು ಕಳೆದ ಕೆಲವು ದಿನಗಳಿಂದ ನಾನು ಮಾಡಿದ ಎಲ್ಲವೂ ಈ ತಂಡ ಮತ್ತು ಅದರ ಮಿಷನ್ ಅನ್ನು ಒಟ್ಟಿಗೆ ಇರಿಸುವ ಸೇವೆಯ ಭಾಗವಾಗಿದೆ. ಭಾನುವಾರ ಸಂಜೆ ನಾನು ಮೈಕ್ರೋಸಾಫ್ಟ್ ಅನ್ನು ಸೇರಲು ನಿರ್ಧರಿಸಿದಾಗ, ಅದು ನನಗೆ ಮತ್ತು ತಂಡಕ್ಕೆ ಉತ್ತಮ ಮಾರ್ಗವಾಗಿದೆ ಎಂಬುದು ಸ್ಪಷ್ಟವಾಯಿತು," ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
"ಹೊಸ ಬೋರ್ಡ್ ಮತ್ತು ಸತ್ಯ ನಾಡೆಲ್ಲಾರ ಬೆಂಬಲದೊಂದಿಗೆ, ನಾನು ಓಪನ್‌ಐಗೆ ಮರಳಲು ಎದುರು ನೋಡುತ್ತಿದ್ದೇನೆ. ಹಾಗೆಯೇ ಮೈಕ್ರೋಸಾಫ್ಟ್‌ನೊಂದಿಗೆ ನಮ್ಮ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ಎದುರು ನೋಡುತ್ತಿದ್ದೇನೆ," ಎಂದು ಸ್ಯಾಮ್ ಆಲ್ಟ್‌ಮ್ಯಾನ್ ಈ ಹಿಂದೆ ಟ್ವಿಟ್ಟರ್ ಆಗಿದ್ದ ಎಕ್ಸ್‌ನಲ್ಲು ಉಲ್ಲೇಖಿಸಿದ್ದಾರೆ.
ಓಪನ್‌ಎಐ ಹೇಳುವುದೇನು?
"ಬ್ರೆಟ್ ಟೇಲರ್ (ಅಧ್ಯಕ್ಷ), ಲ್ಯಾರಿ ಸಮ್ಮರ್ಸ್ ಮತ್ತು ಆಡಮ್ ಡಿ'ಏಂಜೆಲೊರ ಹೊಸ ಆರಂಭಿಕ ಮಂಡಳಿಯೊಂದಿಗೆ ಸಿಇಒ ಆಗಿ ಓಪನ್‌ಎಐಗೆ ವಾಪಾಸ್ ಬರಲು ಸ್ಯಾಮ್ ಆಲ್ಟ್‌ಮನ್ ಜೊತೆ ತಾತ್ವಿಕವಾಗಿ ನಾವು ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ವಿವರ ನೀಡಲಾಗುವುದು," ಎಂದು ಓಪನ್‌ಎಐ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
ಓಪನ್‌ಎಐನ ಸುಮಾರು ಶೇಕಡ 49 ರಷ್ಟು ಪಾಲನ್ನು ಹೊಂದಿರುವ ಮೈಕ್ರೋಸಾಫ್ಟ್ ಕಳೆದ ವಾರ ಓಪನ್‌ಎಐ ನಿರ್ಧಾರದಿಂದ ಅಸಮಾಧಾನಗೊಂಡಿತ್ತು. ಸಾಫ್ಟ್‌ವೇರ್ ಸಮೂಹದಲ್ಲಿ ಹೊಸ ಎಐ ಗುಂಪನ್ನು ಮುನ್ನಡೆಸಲು ಆಲ್ಟ್‌ಮ್ಯಾನ್ ಅನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಹೇಳಿಕೆಯನ್ನು ಕೂಡಾ ನೀಡಿತ್ತು.
ಈ ಹಿಂದಿನ ಓಪನ್‌ಎಐ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಓಪನ್‌ಎಐನ ಮಾಜಿ ಅಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ಮತ್ತು ಹಲವಾರು ಇತರ ಸದಸ್ಯರು ರಾಜೀನಾಮೆ ನೀಡಿದರು. ಕಳೆದ ವಾರ ಓಪನ್‌ಎಐ ಮಂಡಳಿಯ ನಿರ್ಧಾರದ ಬಗ್ಗೆ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ನಿರಾಶೆ ವ್ಯಕ್ತಪಡಿಸಿದ್ದರು.


Click it and Unblock the Notifications