ಭಾರತವು ತನ್ನ ತಂತ್ರಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಮಹತ್ವವಾದ ಹೆಜ್ಜೆಯನ್ನು ಮುಂದಿಟ್ಟಿದೆ. ಇಂದು (ಏಪ್ರಿಲ್ 26) ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಭಾರತ ಸರ್ಕಾರವು ದೇಶದ ಮೊದಲ ಸ್ವದೇಶಿ ಆಧಾರಿತ AI (Artificial Intelligence) ಅಡಿಪಾಯ ಮಾದರಿಯನ್ನು ನಿರ್ಮಿಸಲು ಸರ್ವಮ್ AI ಸಂಸ್ಥೆಯನ್ನು ಆಯ್ಕೆ ಮಾಡಿದೆ. ಈ ಬೆಳವಣಿಗೆಯು ಭಾರತಕ್ಕೆ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಲು ಅತ್ಯಂತ ಮಹತ್ವದ ಹಂತವಾಗಿದೆ.

67 ಪ್ರಸ್ತಾವನೆಗಳ ಮಧ್ಯೆ ಸರ್ವಮ್ AI ಆಯ್ಕೆ:
ಇನ್ನು ಈ ಯೋಜನೆಯಡಿಯಲ್ಲಿ ಸರ್ಕಾರವು ಸುಮಾರು 67 ಸ್ಟಾರ್ಟಪ್‌ಗಳಿಂದ ಪ್ರಸ್ತಾವನೆಯನ್ನು ಆಹ್ವಾನ ಮಾಡಿತ್ತು. ಈ ಎಲ್ಲಾ ಪ್ರಸ್ತಾವನೆಗಳನ್ನು ಒಂದೊಂದಾಗಿ ಪರಿಶೀಲನೆ ಮಾಡಿತು. ಇದಾದ ನಂತರ ಸರ್ವಮ್ AI ಸಂಸ್ಥೆಯನ್ನು ಮೊದಲ ಸಂಸ್ಥೆಯಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ಕುರಿತು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದರು. ಅವರು ಮಾತನಾಡುತ್ತಾ, ಈ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ 2-3 ಸ್ಟಾರ್ಟ್‌ಅಪ್ಗಳನ್ನು ಸೇರಿಸಲು ಯೋಜನೆ ಇದೆ ಎಂದರು.
ECMS ಯೋಜನೆಯ ಪರಿಚಯ:
ಈ ಇತ್ತೀಚಿನ ಬೆಳವಣಿಗೆಯ ಹಿಂದಿರುವ ಪ್ರಮುಖ ಹಂತವೆಂದರೆ ECMS ಯೋಜನೆ. ಈ ಯೋಜನೆಯನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ಇದು ವಿವಿಧ ವಲಯಗಳಿಗೆ ಸಮಾನ ಅವಕಾಶ ನೀಡಲು ರೂಪುಗೊಂಡಿದೆ. ಈ ಯೋಜನೆಯ ಮೂಲಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ತಯಾರಿಕಾ ಕ್ಷೇತ್ರಗಳಿಗೂ ನೇರ ಲಾಭ ಒದಗಿಸಲು ಉದ್ದೇಶಿಸಲಾಗಿದೆ. ಇಸಿಎಂಎಸ್ ಯೋಜನೆಯು ಎಲ್ಲರಿಗೂ ಸಮಾನ ಅವಕಾಶ ಒದಗಿಸುತ್ತದೆ, ಎಂದು ಸಚಿವರು ಹೇಳಿದರು.
ಸರ್ವಮ್ AI: ಸ್ಥಾಪನೆ ಮತ್ತು ಉದ್ದೇಶ:
ಸರ್ವಮ್ AI ಸಂಸ್ಥೆಯನ್ನು 2023ರ ಜುಲೈನಲ್ಲಿ ವಿವೇಕ್ ರಾಘವನ್ ಮತ್ತು ಪ್ರತ್ಯೂಷ್ ಕುಮಾರ್ ಎಂಬ ಇಬ್ಬರು ತಂತ್ರಜ್ಞಾನ ತಜ್ಞರು ಸ್ಥಾಪಿಸಿದರು. ಇವರಿಬ್ಬರೂ ಮುಂಚಿತವಾಗಿ AI4Bharat ಸಂಸ್ಥೆಯಲ್ಲಿ ಕೆಲಸಮಾಡಿದ್ದವರು. AI4Bharat ಸಂಸ್ಥೆಯನ್ನು ಇನ್ಫೋಸಿಸ್‌ನ ಸಹ-ಸ್ಥಾಪಕರಾದ ನಂದನ್ ನಿಲೇಕಣಿ ಬೆಂಬಲಿಸುತ್ತಿದ್ದಾರೆ. ಸರ್ವಮ್ AI, ಜನರೇಟಿವ್ ಎಐ ತಂತ್ರಜ್ಞಾನವನ್ನು ಭಾರತಕ್ಕೆ ತಂದಿಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಅವರು ತಂತ್ರಜ್ಞಾನ ಅಭಿವೃದ್ಧಿಯಿಂದ ಹಿಡಿದು, ಎಂಟರ್‌ಪ್ರೈಸ್ ಹಂತದ ಬಳಕೆಗಾಗಿ ಪ್ಲಾಟ್‌ಫಾರ್ಮ್ ರೂಪಿಸುವವರೆಗೆ ಸಂಪೂರ್ಣ ಸೇವೆ ನೀಡುತ್ತಿದ್ದಾರೆ.
ಭಾರತೀಯ ಕಂಪನಿಗಳೊಂದಿಗೆ ಸಹಕಾರ:
ಸರ್ವಮ್ AI ಸಂಸ್ಥೆ ಭಾರತೀಯ ಉದ್ಯಮಗಳೊಂದಿಗೆ ಕೈಜೋಡಿಸಿ, ಆ ಕಂಪನಿಗಳಲ್ಲಿನ ಡೇಟಾವನ್ನು ಉಪಯೋಗಿಸಿ, ಡೊಮೇನ್-ನಿರ್ದಿಷ್ಟ ಎಐ ಮಾದರಿಗಳನ್ನು ರೂಪಿಸುತ್ತಿದೆ. ಈ ಮಾದರಿಗಳು ಭಾರತೀಯರ ನೈಜ ಅಗತ್ಯಗಳಿಗೆ ತಕ್ಕಂತೆ ತಯಾರಾಗಲಿದ್ದು, ಸಾರ್ವಜನಿಕ-ಹಿತಾರ್ಥಕ್ಕಾಗಿ ಉಪಯೋಗಿಸಲ್ಪಡಲಿವೆ. ಇವರ ಗುರಿಯೆಂದರೆ ಭಾರತದ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವ, ದೊಡ್ಡ ಮಟ್ಟದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಎಐ ವ್ಯವಸ್ಥೆ ನಿರ್ಮಿಸುವುದು.
ಬಲವಾದ ಹಣಕಾಸು ಬೆಂಬಲ:
ಸರ್ವಮ್ AI ಸಂಸ್ಥೆಗೆ ಬಲವಾದ ಹಣಕಾಸಿನ ಬೆಂಬಲವೂ ದೊರಕಿದೆ. 2023ರ ಡಿಸೆಂಬರ್‌ನಲ್ಲಿ, ಈ ಸ್ಟಾರ್ಟ್‌ಅಪ್ ತನ್ನ ಸಿರೀಸ್ A ಹಂತದ ನಿಧಿ ಸಂಗ್ರಹಣೆಯಲ್ಲಿ ಸುಮಾರು 41 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 340 ಕೋಟಿ ರೂಪಾಯಿ) ಹೂಡಿಕೆ ಸೆಳೆದಿತು. ಈ ಹೂಡಿಕೆಯನ್ನು ಲೈಟ್‌ಸ್ಪೀಡ್ ವೆಂಚರ್ಸ್ ನೇತೃತ್ವ ನೀಡಿದ್ದು, ಪೀಕ್ XV ಪಾರ್ಟ್ನರ್ಸ್ ಮತ್ತು ಖೋಸ್ಲಾ ವೆಂಚರ್ಸ್ ಮುಂತಾದ ದೊಡ್ಡ ಹೂಡಿಕೆದಾರರು ಸಹಭಾಗಿಯಾಗಿದ್ದರು.
ಒಟ್ಟಿನಲ್ಲಿ ಭಾರತವು ತನ್ನ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಳ್ಳಲು ಈ ಮೊದಲ ಹೆಜ್ಜೆಯನ್ನು ಹಾಕಿದ್ದು ಸರ್ವಮ್ AI ಮೂಲಕ. ಈ ಸಂಸ್ಥೆ ಭಾರತೀಯ ಡೇಟಾ, ಭಾರತೀಯ ಭಾಷೆಗಳು ಮತ್ತು ಭಾರತೀಯ ಪ್ರೌಢಿಮೆಯ ಆಧಾರದ ಮೇಲೆ ದೇಶೀ ಎಐ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಭಾರತೀಯ ಸಂಸ್ಥೆಗಳು ಈ ಯೋಜನೆಗೆ ಸೇರಿ ಭಾರತವನ್ನು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಸ್ಥಾನಕ್ಕೆ ತರುವ ವಿಶ್ವಾಸವೂ ಇದೆ.


Click it and Unblock the Notifications