ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ವಯಂ ನಿವೃತ್ತಿ ಯೋಜನೆ (VRS) ಸಿದ್ಧಪಡಿಸಿದೆ. ಮಾನವ ಸಂಪನ್ಮೂಲ ಕಡಿಮೆ ಮಾಡಬೇಕು ಹಾಗೂ ಬ್ಯಾಂಕ್ ವೆಚ್ಚವನ್ನು ಇಳಿಕೆ ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಗಳ ಪ್ರಕಾರ, 30,190 ಸಿಬ್ಬಂದಿ ಸ್ವಯಂ ನಿವೃತ್ತ ಯೋಜನೆಗೆ ಅರ್ಹರಾಗಿದ್ದಾರೆ.
ಎಲ್ಲ ಕಾಯಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಯೋಜನೆಗೆ ಅರ್ಹರಾಗಬೇಕಿದ್ದಲ್ಲಿ 25 ವರ್ಷ ಸೇವೆಯನ್ನು ಪೂರ್ತಿ ಮಾಡಿರಬೇಕು ಅಥವಾ 55 ವರ್ಷ ಆಗಿರಬೇಕು. ಡಿಸೆಂಬರ್ 1ನೇ ತಾರೀಕಿನಂದು ಯೋಜನೆ ಆರಂಭವಾಗುತ್ತದೆ ಮತ್ತು ಫೆಬ್ರವರಿ ಕೊನೆ ತನಕ ಅವಕಾಶ ಇರುತ್ತದೆ. ವಿಆರ್ ಎಸ್ ಗೆ ಈ ಅವಧಿಯಲ್ಲಿ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ.
ಕೊನೆಯದಾಗಿ ಪಡೆದ ಸಂಬಳ ಗಣನೆಗೆ
ಯಾರ ವಿಆರ್ ಎಸ್ ಮನವಿ ಸ್ವೀಕರಿಸಲಾಗುತ್ತದೋ ಅಂಥವರಿಗೆ ನಿವೃತ್ತಿ ಆಗುವ ತನಕದ ಬಾಕಿ ಅವಧಿಗೆ 50% ಎಕ್ಸ್ ಗ್ರೇಷಿಯಾ ಪಾವತಿಸಲಾಗುತ್ತದೆ. ಗರಿಷ್ಠ ಹದಿನೆಂಟು ತಿಂಗಳಿಗೆ ಇದು ಅನ್ವಯ ಆಗುತ್ತದೆ. ಇದಕ್ಕಾಗಿ ಕೊನೆಯದಾಗಿ ಅವರು ಪಡೆದ ಸಂಬಳವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.
ಗ್ರಾಚ್ಯುಟಿ, ಪಿಂಚಣಿ, ಪ್ರಾವಿಡೆಂಟ್ ಮತ್ತು ವೈದ್ಯಕೀಯ ಅನುಕೂಲ
ಇನ್ನು ಗ್ರಾಚ್ಯುಟಿ, ಪಿಂಚಣಿ, ಪ್ರಾವಿಡೆಂಟ್ ಮತ್ತು ವೈದ್ಯಕೀಯ ಅನುಕೂಲಗಳನ್ನು ಒದಗಿಸಲಾಗುತ್ತದೆ. ಇನ್ನು ಈ ವಿಆರ್ ಎಸ್ ಅಡಿಯಲ್ಲಿ ನಿವೃತ್ತರಾದವರನ್ನು ಎಸ್ ಬಿಐನಿಂದಲೇ ಮತ್ತೆ ನೇಮಕ ಮಾಡಿಕೊಳ್ಳಬಹುದು. ಅದಕ್ಕೆ ಅವಕಾಶ ಇದೆ. ಆದರೆ ನಿವೃತ್ತಿಯಾಗಿ ಎರಡು ವರ್ಷಗಳ ಅವಧಿ ಪೂರ್ಣ ಆಗಬೇಕು.
2170.85 ಕೋಟಿ ಉಳಿತಾಯ ಆಗಲಿದೆ ಎಂಬ ನಿರೀಕ್ಷೆ
ಒಟ್ಟು 11,565 ಅಧಿಕಾರಿಗಳು ಹಾಗೂ 18,625 ಸಿಬ್ಬಂದಿ ಈ ಎಸ್ ಬಿಐ ವಿಆರ್ ಎಸ್ ಸ್ಕೀಮ್ ಪಡೆಯುತ್ತಾರೆ. ಈ ಹೊಸ ಯೋಜನೆಗೆ ಹೋಗಲು 30% ಉದ್ಯೋಗಿಗಳು ನಿರ್ಧರಿಸಿದರೂ 2170.85 ಕೋಟಿ ಉಳಿತಾಯ ಆಗಲಿದೆ ಎಂಬ ನಿರೀಕ್ಷೆ ಬ್ಯಾಂಕ್ ಗೆ ಇದೆ. ಎಸ್ ಬಿಐನ ಒಟ್ಟು ಸಿಬ್ಬಂದಿ ಸಂಖ್ಯೆ ಮಾರ್ಚ್ 2020ಕ್ಕೆ 2.49 ಲಕ್ಷ ಇದೆ. ವರ್ಷದ ಹಿಂದೆ ಈ ಸಂಖ್ಯೆ 2.57 ಲಕ್ಷ ಇತ್ತು.
ಈ ಹಿಂದೆ ಘೋಷಣೆ ಮಾಡಿದ್ದ ವಿಆರ್ ಎಸ್ ಸ್ಕೀಮ್
2017ನೇ ಇಸವಿಯಲ್ಲಿ ಎಸ್ ಬಿಐನ ಇತರ ಐದು ಸಹವರ್ತಿ ಬ್ಯಾಂಕ್ ಗಳ ವಿಲೀನಕ್ಕೂ ಮುನ್ನ ತಮ್ಮ ಸಿಬ್ಬಂದಿಗೆ ವಿಆರ್ ಎಸ್ ಘೋಷಣೆ ಮಾಡಿದ್ದರು. ಮಾನವ ಸಂಪನ್ಮೂಲದ ಸರಿಯಾದ ಲೆಕ್ಕಾಚಾರ ಬಳಕೆಗಾಗಿ 2001ರಲ್ಲಿ ಕೂಡ ಸಿಬ್ಬಂದಿಗೆ ವಿಆರ್ ಎಸ್ ಘೋಷಣೆ ಮಾಡಲಾಗಿದೆ. ವಿಆರ್ ಎಸ್ ಗಾಗಿ ಕರಡು ಸಿದ್ಧವಾಗಿದ್ದು, ಆಡಳಿತ ಮಂಡಳಿ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.


Click it and Unblock the Notifications