ಯಾವ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಗಳು ಹೂಡಿಕೆಯಲ್ಲಿ ಅತೀ ಹೆಚ್ಚಿನ ಬಡ್ಡಿ ನೀಡುತ್ತದೆಯೋ ಸಾಮಾನ್ಯವಾಗಿ ಹೂಡಿಕೆದಾರರು ಅಥವಾ ಗ್ರಾಹಕರು ಅದರತ್ತ ತಮ್ಮ ಹಣವನ್ನು ಹೂಡಿಕೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಇಂದು ಹಲವು ಬ್ಯಾಂಕ್‌ಗಳು ಸ್ಥಿರ ಠೇವಣಿ (FD)ಗಳ ವಿಚಾರದಲ್ಲಿ ತಮ್ಮದೇ ರೀತಿಯ ಬಡ್ಡಿದರವನ್ನು ಹೊಂದಿದ್ದು, ಹೂಡಿಕೆದಾರರಿಗೆ ಯಾವುದು ಉತ್ತಮವೋ ಅವುಗಳನ್ನು ಆಯ್ಕೆ ಮಾಡಿಕೊಂಡು ಹಣ ಹೂಡಬಹುದು. ಸದ್ಯ ನಾವು ಇಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಅಂಚೆ ಕಚೇರಿ ನಡುವಿನ ಬಡ್ಡಿದರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಎಸ್‌ಬಿಐ ಹಾಗೂ ಅಂಚೆ ಕಚೇರಿಯ ಬಡ್ಡಿದರ
ಗ್ರಾಹಕರಿಗೆ ಹೆಚ್ಚಿನ ಆದಾಯವನ್ನು ನೀಡುವ ವಿಷಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಅಂಚೆ ಕಚೇರಿ ನಡುವೆ ಕಠಿಣ ಸ್ಪರ್ಧೆಯಿದೆ. ಎಸ್‌ಬಿಐ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲೆ ಶೇಕಡಾ 3.50 ರಿಂದ ಶೇಕಡಾ 7.25 ರ ನಡುವಿನ ಬಡ್ಡಿದರಗಳನ್ನು ಒದಗಿಸಿದರೆ ಅತ್ತ ಪೋಸ್ಟ್ ಆಫೀಸ್ ವಿವಿಧ ಅವಧಿಗಳ ಸಮಯ ಠೇವಣಿಗಳ (ಟಿಡಿ) ಮೇಲೆ ಶೇಕಡಾ 6.9 ರಿಂದ ಶೇಕಡಾ 7.5 ರವರೆಗಿನ ಬಡ್ಡಿದರಗಳನ್ನು ನೀಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಎಫ್‌ಡಿ ಮತ್ತು ಟಿಡಿ ಎರಡೂ ಕೂಡ ಒಂದೇ ರೀತಿ ಕಾರ್ಯನಿರ್ವಹಿಸುತ್ತವೆ, ಅಲ್ಲಿ ಗ್ರಾಹಕರು ನಿರ್ದಿಷ್ಟ ಅವಧಿಗೆ ಹಣವನ್ನು ಹೂಡಿಕೆ ಮಾಡುತ್ತಾರೆ ಮತ್ತು ಮುಕ್ತಾಯದ ನಂತರ ಖಾತರಿಯ ಲಾಭವನ್ನು ಪಡೆಯುತ್ತಾರೆ. SBI ಅಥವಾ ಪೋಸ್ಟ್ ಆಫೀಸ್ ಠೇವಣಿಗಳ ಮೇಲೆ ಹೆಚ್ಚಿನ ಆದಾಯವನ್ನು ನೀಡುತ್ತದೆ ಎಂಬುದರ ಬಗ್ಗೆ ಗಮನ ಹರಿಸೋಣ.

ಹೆಚ್ಚಿನ ಲಾಭ ಯಾರು ನೀಡುತ್ತಾರೆ?
ಅಂಚೆ ಕಚೇರಿಯು 1 ವರ್ಷದ ಅವಧಿಗೆ TD ಯ ಮೇಲೆ 6.9 ಶೇಕಡಾ ಬಡ್ಡಿಯನ್ನು ನೀಡಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1 ವರ್ಷದ FD ಮೇಲೆ 6.8 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಹಾಗಾಗಿ ಈ ವಿಚಾರದಲ್ಲಿ ಅಂಚೆ ಕಚೇರಿಗೆ ಮೇಲುಗೈ ಲಭಿಸುತ್ತದೆ. ಇನ್ನು ಎರಡು ವರ್ಷಗಳ ವಿಚಾರಕ್ಕೆ ಬರುವುದಾದರೆ ಅಂಚೆ ಕಚೇರಿಯು ಎರಡು ವರ್ಷಗಳ ಅವಧಿಗೆ ಠೇವಣಿಗಳ ಮೇಲೆ ಶೇಕಡಾ 7.0 ಬಡ್ಡಿದರವನ್ನು ನೀಡುತ್ತಿದೆ. ಅದೇ ರೀತಿ ಎಸ್‌ಬಿಐ ಎರಡು ವರ್ಷಗಳ ಸ್ಥಿರ ಠೇವಣಿ (ಎಫ್‌ಡಿ) ಮೇಲೆ 7.0% ಬಡ್ಡಿದರವನ್ನು ಸಹ ಒದಗಿಸುತ್ತಿದೆ. ಹಾಗಾಗಿ ಎರಡು ವರ್ಷಗಳ ಅವಧಿಯಲ್ಲಿ ಎರಡೂ ಕೂಡ ಸಮಾನ ಬಡ್ಡಿದರವನ್ನು ಹೊಂದಿದೆ. ಅಂಚೆ ಕಛೇರಿಯು 3 ವರ್ಷಗಳ ಟಿಡಿ ಮೇಲೆ ಶೇಕಡಾ 7.1 ರಷ್ಟು ಆದಾಯವನ್ನು ನೀಡಿದರೆ ಮತ್ತೊಂದೆಡೆ ಎಸ್‌ಬಿಐ ಇಲ್ಲಿನ ಅಂಚೆ ಕಚೇರಿಗಿಂತ ಹಿಂದುಳಿದಿದೆ ಮತ್ತು 3 ವರ್ಷಗಳ ಎಫ್‌ಡಿಯಲ್ಲಿ ಕೇವಲ 6.75 ಶೇಕಡಾ ಬಡ್ಡಿಯನ್ನು ಮಾತ್ರ ನೀಡುತ್ತಿದೆ. ಆದರೆ ಐದು ವರ್ಷಗಳ ವಿಚಾರದಲ್ಲಿ ಪೋಸ್ಟ್ ಆಫೀಸ್ ಬಹಳ ಮುಂದಿದೆ. ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ 5 ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇಕಡಾ 7.5 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಿದರೆ ಎಸ್‌ಬಿಐ ತನ್ನ ಗ್ರಾಹಕರಿಗೆ 5 ವರ್ಷಗಳ ಎಫ್‌ಡಿಯಲ್ಲಿ ಕೇವಲ 6.5 ಶೇಕಡಾ ಬಡ್ಡಿಯನ್ನು ಮಾತ್ರ ನೀಡುತ್ತಿದೆ. ಹಾಗಾಗಿ ಇಲ್ಲಿ ಅಂಚೆ ಕಚೇರಿಗೆ ಸ್ಪಷ್ಟ ಮುನ್ನಡೆ ಇದೆ. ಇನ್ನು ಮುಖ್ಯ ವಿಚಾರವೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ 400 ದಿನಗಳ ಅಮೃತ್ ಕಲಶ ಎಫ್‌ಡಿ ಯೋಜನೆಯಲ್ಲಿ ಶೇಕಡಾ 7.10 ಬಡ್ಡಿಯನ್ನು ಮತ್ತು 444 ದಿನಗಳ ಅಮೃತ್ ವೃಷ್ಟಿ ಎಫ್‌ಡಿ ಯೋಜನೆಯಲ್ಲಿ ಶೇಕಡಾ 7.25 ಬಡ್ಡಿಯನ್ನು ನೀಡುತ್ತಿದೆ.
ಯಾವುದು ಉತ್ತಮ?
ಇನ್ನು ಇವೆರಡು ಸಂಸ್ಥೆಗಳ ವಿಚಾರದಲ್ಲಿ ಯಾರು ಉತ್ತಮರು ಎಂದು ಹೇಳುವುದು ಸಾಧ್ಯವಿಲ್ಲ. ಏಕೆಂದರೆ ಎರಡೂ ಸಂಸ್ಥೆಗಳು ಕೂಡ ಅದರದೇ ಆದ ಹಣಕಾಸಿನ ಕಾರ್ಯವೈಖರಿ ಹಾಗೂ ನೀತಿ ನಿಯಮಗಳನ್ನು ಹೊಂದಿದೆ. ಹೂಡಿಕೆದಾರರು ತಮಗೆ ಯಾವ ರೀತಿಯ ಯೋಜನೆ ಬೇಕೋ ಆ ಸಂಸ್ಥೆಯಲ್ಲಿ ಹೂಡಿಕೆ ಮಾಡಬಹುದು. ಅಲ್ಲದೆ ಹೂಡಿಕೆ ವಿಚಾರದಲ್ಲಿ ಹೂಡಿಕೆದಾರರು ಜಾಣ್ಮೆಯಿಂದ ವ್ಯವಹಾರ ಹಾಗೂ ನಿರ್ಧಾರ ತೆಗೆದುಕೊಳ್ಳುವುದು ಕೂಡ ಅತೀ ಮುಖ್ಯವಾಗಿದೆ.


Click it and Unblock the Notifications